SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಫ್ರೀ ಫೈರ್ ಗೇಮ್ ಹೆಸರಿನಲ್ಲಿ ವಂಚನೆ: ಬ್ಲ್ಯಾಕ್‌ಮೇಲ್‌ಗೆ ಹೆದರಿ 13 ವರ್ಷದ ಬಾಲಕ ಆತ್ಮಹತ್ಯೆ

ಫ್ರೀ ಫೈರ್ ಗೇಮ್ ಹೆಸರಿನಲ್ಲಿ ವಂಚನೆ: ಬ್ಲ್ಯಾಕ್‌ಮೇಲ್‌ಗೆ ಹೆದರಿ 13 ವರ್ಷದ ಬಾಲಕ ಆತ್ಮಹತ್ಯೆ

0
10

ಚನ್ನಗಿರಿ: ಕೈಯಲ್ಲಿ ಮೊಬೈಲ್ ಹಿಡಿದು ‘ಫ್ರೀ ಫೈರ್’ ಆಡುತ್ತಿದ್ದ 13 ವರ್ಷದ ಬಾಲಕನಿಗೆ, ಅದೇ ಗೇಮ್‌ ಕೊನೆಗೆ ಬದುಕನ್ನೇ ಕಸಿದುಕೊಳ್ಳುವಷ್ಟು ಕರಾಳವಾಗಿ ಪರಿಣಮಿಸಿದೆ. ಹೈಲೆವೆಲ್ ಗೇಮ್‌ ಐಡಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು, ಬಳಿಕ ಬ್ಲ್ಯಾಕ್‌ಮೇಲ್ ಹಾಗೂ ಬೆದರಿಕೆ ಹಾಕಿದ ಆರೋಪದಿಂದ ಮಾನಸಿಕವಾಗಿ ನೊಂದಿದ್ದ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಪಾಂಡೋಮಟ್ಟಿ ಗ್ರಾಮದ ಮನೋಜ್ ಟಿ.ಆರ್. (13) ಎಂದು ಗುರುತಿಸಲಾಗಿದೆ. ಪಟ್ಟಣದ ಬಸವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮನೋಜ್‌ಗೆ ಆನ್‌ಲೈನ್ ‘ಫ್ರೀ ಫೈರ್’ ಗೇಮ್ ಆಡುವ ಅಭ್ಯಾಸವಿತ್ತು ಎನ್ನಲಾಗಿದೆ.

ಈ ವಿಚಾರವನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳಾದ ಮನು ಪಿ.ಆರ್., ಬೊಮ್ಮಲಿಂಗ, ಮಣಿ, ಸಂಜು ಹಾಗೂ ಯಶವಂತ್ ಎಂಬ ಐವರು, ಹೈಲೆವೆಲ್ ಗೇಮ್‌ ಐಡಿ ಕೊಡಿಸುವುದಾಗಿ ಬಾಲಕನನ್ನು ನಂಬಿಸಿ ಆರಂಭದಲ್ಲಿ ₹6 ಸಾವಿರ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಗೇಮ್‌ ಐಡಿ ಅನ್‌ಲಾಕ್ ಮಾಡಬೇಕು, ಕಾಯಿನ್ಸ್ ಖರೀದಿಸಬೇಕು ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಬಾಲಕನಿಂದ ಹಂತ ಹಂತವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹಣ ನೀಡದಿದ್ದರೆ ಮನೆಯವರಿಗೆ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಬಾಲಕನ ಮೇಲೆ ಹಲ್ಲೆಯನ್ನೂ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಬೆದರಿಕೆಗೆ ಹೆದರಿದ ಬಾಲಕ, ಮನೆಯವರಿಗೂ ತಿಳಿಯದಂತೆ ಮನೆಯಲ್ಲಿದ್ದ ಹಣವನ್ನೇ ತೆಗೆದುಕೊಡಲು ಆರಂಭಿಸಿದ್ದಾನೆ. ಹೀಗೆ ಹಂತ ಹಂತವಾಗಿ ಸುಮಾರು ₹4.11 ಲಕ್ಷ ಹಣವನ್ನು ಆರೋಪಿಗಳಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಆದರೆ, ವಿಷಯ ಕುಟುಂಬದವರ ಗಮನಕ್ಕೆ ಬಂದ ಬಳಿಕ ಮನೋಜ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ. ತನ್ನಿಂದಾದ ತಪ್ಪು, ಹಣದ ವಿಚಾರ ಹಾಗೂ ಆರೋಪಿಗಳ ಬೆದರಿಕೆಯಿಂದ ಆತ ಭಯಭೀತನಾಗಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬದುಕಿನಲ್ಲಿ ಇನ್ನೂ ಏನನ್ನೂ ನೋಡದ 13ರ ಬಾಲಕನ ಮನಸ್ಸಿನ ಮೇಲೆ ಈ ಘಟನೆ ಎಷ್ಟು ದೊಡ್ಡ ಹೊರೆ ಹಾಕಿತ್ತೆಂಬುದಕ್ಕೆ ಕೊನೆಗೆ ನಡೆದ ದುರಂತವೇ ಸಾಕ್ಷಿಯಾಗಿದೆ.

ಅ. 7ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೋಜ್ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಮುದ್ದಾದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಪಾಂಡೋಮಟ್ಟಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದ ದುರಂತ: ಆನ್‌ಲೈನ್‌ ಗೇಮ್‌ ಕೇವಲ ಆಟವಾಗಿ ಉಳಿಯದೆ, ಮಕ್ಕಳನ್ನು ವಂಚನೆ, ಹಣದ ಬೇಡಿಕೆ, ಬೆದರಿಕೆ ಹಾಗೂ ಬ್ಲ್ಯಾಕ್‌ಮೇಲ್‌ನಂತಹ ಅಪಾಯಗಳಿಗೆ ಸಿಲುಕಿಸಬಹುದು ಎಂಬ ಆತಂಕಕಾರಿ ಬೆಳವಣಿಗೆ ಈ ಘಟನೆ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಅಪರಿಚಿತರೊಂದಿಗೆ ಗೇಮ್‌ ಮೂಲಕ ನಡೆಯುವ ಸಂಭಾಷಣೆ, ಹಣದ ವ್ಯವಹಾರ ಹಾಗೂ ಬೆದರಿಕೆಗಳ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು ಎಂಬ ಸಂದೇಶವನ್ನೂ ಈ ಘಟನೆ ಸಾರಿದೆ.

ಘಟನೆ ಸಂಬಂಧ ಮೃತ ಬಾಲಕನ ಪೋಷಕರು ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಪ್ರಾಪ್ತ ಮಕ್ಕಳನ್ನು ಆನ್‌ಲೈನ್ ಗೇಮ್‌ಗಳ ಮೂಲಕ ವಂಚಿಸಿ ಹಣ ವಸೂಲಿ ಮಾಡುವ ಹಾಗೂ ಬ್ಲ್ಯಾಕ್‌ಮೇಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಆನ್‌ಲೈನ್ ಜಗತ್ತಿನ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.