ಬೆಳಗಾವಿ: ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್ಗೆ ಬೆಳಗಾವಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ನವೆಂಬರ್ 26ರೊಳಗೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಲಾಗಿದೆ.
ಬಸವಣ್ಣನವರ ಕುರಿತ ಬರಹವಿರುವ ಪುಸ್ತಕದ ವಿಚಾರವಾಗಿ ಇತ್ತೀಚೆಗೆ ಭಾರೀ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ರವಿ ಹಂಜ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮೂಲಕ ಪೊಲೀಸರ ನೋಟಿಸ್ ಅನ್ನು ರವಿ ಹಂಜ್ಗೆ ತಲುಪಿಸಲಾಗಿದೆ. ಅಲ್ಲದೆ, ಇ-ಮೇಲ್ ಮೂಲಕವೂ ನೋಟಿಸ್ ಕಳುಹಿಸಿದ ಪೊಲೀಸರು, ಅದನ್ನು ಸ್ವೀಕರಿಸಿರುವ ಬಗ್ಗೆ ರಿಸೀವ್ಡ್ ದೃಢೀಕರಣ ಪಡೆದುಕೊಂಡಿದ್ದಾರೆ.





















