ಉಡುಪಿ: ಪ್ರವಾಸಕ್ಕೆಂದು ದಾವಣಗೆರೆಯಿಂದ ಕಾಪು ಬೀಚ್ಗೆ ಆಗಮಿಸಿದ್ದ ಕುಟುಂಬದ ಐವರು ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ ಘಟನೆ ಭಾನುವಾರ ಅಪರಾಹ್ನ ನಡೆದಿದೆ. ಈ ಪೈಕಿ ಓರ್ವನನ್ನು ರಕ್ಷಿಸಲಾಗಿದ್ದು, ಮತ್ತಿಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.
ದಾವಣಗೆರೆಯ ಜಿಯಾವುಲ್ಲ ಹಾಗೂ ಅವರ ಸಂಬಂಧಿಕರು ಸೇರಿದಂತೆ ಒಟ್ಟು 10ರಿಂದ 12 ಮಂದಿ ಕುಟುಂಬ ಸದಸ್ಯರು ಪ್ರವಾಸದ ನಿಮಿತ್ತ ಕಾಪು ಬೀಚ್ಗೆ ಆಗಮಿಸಿದ್ದರು. ಅಪರಾಹ್ನ 4.30ರ ಸುಮಾರಿಗೆ ಕುಟುಂಬದ ಮಕ್ಕಳು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ (20) ಹಾಗೂ ಮಲ್ಲಿಕ್ ರಿಯಾನ್ (15) ಸೇರಿದಂತೆ ಐವರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ. ಅದರಲ್ಲಿ ಇಬ್ಬರು ಕೂಡಲೇ ಈಜಿ ದಡ ಸೇರಿದ್ದು, ಮೂವರು ಮುಳುಗಲಾರಂಭಿಸಿದರು.
ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಲೈಫ್ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಇಸಾಕ್ನನ್ನು ರಕ್ಷಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಸ್ಥಳೀಯರು ಮತ್ತು ಲೈಫ್ಗಾರ್ಡ್ ಸಿಬ್ಬಂದಿ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.






















