ಸಂಯುಕ್ತ ಕರ್ನಾಟಕ

ಸ್ಪಷ್ಟ ಉದ್ದೇಶ ಜತೆಗೆ ಮೌಲ್ಯಗಳ ತಳಹದಿಯ ಮೇಲೆ ಸ್ವಾತಂತ್ರ್ಯ ಹೋರಾಟಗಾರರಿಂದ ಆರಂಭವಾದ ಸಂಯುಕ್ತ ಕರ್ನಾಟಕ' ದಿನಪತ್ರಿಕೆ ಲೋಕಶಿಕ್ಷಣ ಟ್ರಸ್ಟ್ ಹೊರತರುತ್ತಿರುವ ನಿಯತಕಾಲಿಕ. ಪ್ರಸಕ್ತ ದೇಶದಲ್ಲಿ ಸಾರ್ವಜನಿಕ ಟ್ರಸ್ಟ್‌ವೊಂದು ಹೊರತರುತ್ತಿರುವ ಏಕೈಕ ದಿನಪತ್ರಿಕೆ ಸಂಯುಕ್ತ ಕರ್ನಾಟಕ ಮಾತ್ರ. ಪ್ರಸಕ್ತ ರಾಜ್ಯಾದ್ಯಂತ ಆರು ಕಡೆಗಳಿಂದ ಏಕಕಾಲದಲ್ಲಿ ಪ್ರಕಟಿತವಾಗುತ್ತಿದ್ದು, ಪ್ರತಿ ಜಿಲ್ಲೆಗೆ ಪತ್ಯೇಕ ಆವೃತ್ತಿ ಹೊಂದಿದೆ.

Samyukta Karnataka
Samyukta Karnataka

ಪತ್ರಿಕೆಗೆ ಜನರ ಅಭಿಮಾನವೇ ಬಂಡವಾಳ, ಜನರೇ ಆಸ್ತಿ. ತೊಂಬತ್ತು ವರ್ಷಗಳಿಂದ ಸಾಗಿ ಬಂದಿರುವಸಂಯುಕ್ತ ಕರ್ನಾಟಕ’ ಬರೀ ಸುದ್ದಿ ಪ್ರಸಾರ ಮಾಡುವ ಪತ್ರಿಕೆ ಅಲ್ಲ. ಅದು ಜನಮನದ ಬಿಂಬ, ಜನರಿಂದ, ಜನರಿಗಾಗಿ, ಇರುವ ಜನಪರ ಪತ್ರಿಕೆ. ಪತ್ರಿಕಾ ಧರ್ಮದ ಪರಿಪಾಲನೆ, ನಿರ್ಭೀತ ಪತ್ರಿಕೋದ್ಯಮ ಅದರ ಧರ್ಮ. ಜನಹಿತ ರಕ್ಷಣೆಗೆ ಸದಾ ಮುಂದು. ಅಗತ್ಯ ಸಂದರ್ಭಗಳಲ್ಲಿ ಸಮಾಜಕ್ಕೆ ನೆರವಿನ ಹಸ್ತ ಚಾಚಿದೆ.


ಶತಮಾನೋತ್ಸವದ ಹೊಸ್ತಿಲಲ್ಲಿರುವ ಕನ್ನಡದ ಹಿರಿಯ ಹಾಗೂ ಜನಪ್ರಿಯ ಪತ್ರಿಕೆ. ಕರ್ನಾಟಕ ಮಾತ್ರವಲ್ಲ ದೇಶ- ವಿದೇಶಗಳಲ್ಲಿ ತನ್ನದೇ ಆದ ಅಸಂಖ್ಯಾತ ಓದುಗರ ಬಳಗ, ಅಭಿಮಾನಿಗಳ ಸಮೂಹ, ಅಕ್ಷರ ಪ್ರೇಮಿಗಳ ಮೆಚ್ಚುಗೆ. ಸಾರ್ವಜನಿಕರಿಂದ ಮಾನ್ಯ ಮಾಡಿದ ಧರ್ಮದರ್ಶಿ ಮಂಡಳಿ ಪತ್ರಿಕೆಯ ಅಭಿವೃದ್ಧಿಗೆ ಸದಾ ಕಾರ್ಯನಿರತ.
ಕರಿಷ್ಯೇ ವಚನಂ ತವ' ಇದುಸಂಯುಕ್ತ ಕರ್ನಾಟಕ’ದ ಧ್ಯೇಯವಾಕ್ಯ. ನಿನಗೆ ನೀಡಿದ ವಚನವನ್ನು ಪಾಲಿಸುತ್ತೇನೆ' ಎಂಬುದುಸಂಯುಕ್ತ ಕರ್ನಾಟಕ’ ಕನ್ನಡಿಗರಿಗೆ ನೀಡುತ್ತಿರುವ ವಾಗ್ದಾನ.

ನಡೆದು ಬಂದ ದಾರಿ

೧೯೩೩ರ ಏಪ್ರಿಲ್ ೨೭ರಂದು ಅಕ್ಷಯ ತೃತೀಯಾ ಶುಭಮುಹೂರ್ತದಲ್ಲಿ ಬೆಳಗಾವಿಯ ಗಲ್ಲಿಯೊಂದರಲ್ಲಿ ಜನ್ಮ ತಳೆದ ಪತ್ರಿಕೆಗೆ ಇದ್ದುದು ಎರಡೇ ಗುರಿ- ಒಂದು ದೇಶದ ಸ್ವಾತಂತ್ರ, ಇನ್ನೊಂದು ಕರ್ನಾಟಕದ ಏಕೀಕರಣ. ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯರು ಬ್ರಿಟಿಷರ ಕೆಂಗಣ್ಣಿಗೆ ಸಿಲುಕಿ ಸೆರೆಮನೆ ಸೇರಿದ್ದರು. ಸೆರೆಮನೆಯಲ್ಲಿದ್ದರೂ ಅವರಿಗೆ ರಾಷ್ಟ್ರಹಿತದ್ದೇ ಚಿಂತೆ. ಈ ಕುರಿತ ಚಿಂತನೆ. ರಾಷ್ಟ್ರೀಯ ವಿಚಾರಧಾರೆಯ ದಿನಪತ್ರಿಕೆ ಪ್ರಾರಂಭಿಸಬೇಕು, ತನ್ಮೂಲಕ ಜನಜಾಗೃತಿ ಮಾಡಬೇಕು ಎಂಬುದು ಅವರ ಆಲೋಚನೆ ಆಗಿತ್ತು. ಈ ಎಲ್ಲ ಚಿಂತನ-ಮಂಥನಗಳ ಫಲವಾಗಿಯೇ `ಸಂಯುಕ್ತ ಕರ್ನಾಟಕ ಜನ್ಮ ತಳೆಯಿತು. ಅಂದು ಬೆಳಗಾವಿಯಲ್ಲಿ ಜನಿಸಿ ಹುಬ್ಬಳ್ಳಿಯಲ್ಲಿ ಬೆಳೆದು, ರಾಜಧಾನಿಯನ್ನು ಬೆಳಗಿದ ಸಂಯುಕ್ತ ಕರ್ನಾಟಕದ ವ್ಯಾಪ್ತಿ ಈಗ ವಿಸ್ತರಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಕೇಂದ್ರಸ್ಥಾನ ಕಲಬುರ್ಗಿ, ಕರ್ನಾಟಕದ ಹೃದಯ ದಾವಣಗೆರೆ ಹಾಗೂ ಕರಾವಳಿಯ ಕೇಂದ್ರಸ್ಥಾನವಾದ ಮಂಗಳೂರಿನಲ್ಲಿಯೂ ಆವೃತ್ತಿಗಳನ್ನು ಆರಂಭಿಸಲಾಗಿದೆ. ತನ್ಮೂಲಕ ರಾಜ್ಯದ ಎಲ್ಲ ಭಾಗದ ಜನತೆಗೂ ಪತ್ರಿಕೆ ಇನ್ನಷ್ಟು ಹತ್ತಿರವಾಗಿದೆ.

ಕನ್ನಡಗರ ಸಾಕ್ಷಿ ಪ್ರಜ್ಞೆ

ಸಂಯುಕ್ತ ಕರ್ನಾಟಕದ ಈ ತೊಂಬತ್ತು ವರ್ಷಗಳ ಇತಿಹಾಸ ಕರ್ನಾಟಕದ ಇತಿಹಾಸವೂ ಹೌದು, ಭಾರತದ ಇತಿಹಾಸವು ಆಗಿದೆ. ಹಾಗಾಗಿಯೇ, ಸಂಯುಕ್ತ ಕರ್ನಾಟಕ ನಾಡಿನ ಸಾಕ್ಷಿ ಪ್ರಜ್ಞೆ' ಎಂದು ಹಿರಿಯರು ಹೇಳುವ ಮಾತು ಅರ್ಥಪೂರ್ಣ. ರಾಷ್ಟ್ರೀಯತೆ, ನಾಡು- ನುಡಿಯ ಏಳ್ಗೆ, ಸಾರ್ವಜನಿಕ ಸ್ವಾಸ್ಥ್ಯ, ಸಾಮರಸ್ಯ, ಅಭಿವೃದ್ಧಿ ಪರ ನಿಲುವುಸಂಯುಕ್ತ ಕರ್ನಾಟಕ’ದ ಧೋರಣೆ.

ಪತ್ರಿಕೆ ಕಟ್ಟಿದ ಮಹಾನುಭಾವರು

ಸ್ವತಂತ್ರ ಚಳುವಳಿಯಲ್ಲಿ ಪತ್ರಿಕೆ ಕೈಂಕರ್ಯ

ಸಂಯುಕ್ತ ಕರ್ನಾಟಕ ಪತ್ರಿಕೆ ಜನಜಾಗೃತಿ ಮೂಡಿಸುವುದರಲ್ಲಿ, ಸ್ವಾತಂತ್ರ್ಯವದಾಹ ಉಂಟು ಮಾಡುವುದರಲ್ಲಿ, ಸ್ವಾತಂತ್ರ್ಯನಕ್ಕಾಗಿ ದುಡಿದವರ ವೀರಗಾಥೆಗಳನ್ನು ಬಿತ್ತರಿಸುವಲ್ಲಿ ಅನುಪಮ ಸೇವೆ ಸಲ್ಲಿಸಿದೆ. ಸ್ವಾತಂತ್ರ್ಯ್ ಪ್ರಾಪ್ತಿಗಾಗಿಯೇ ಮೈತಾಳಿದ ಈ ಸಂಸ್ಥೆಗೆ ಆಲೂರು ವೆಂಕಟರಾಯರು, ಆರ್.ಆರ್. ದಿವಾಕರ್, ಮೊಹರೆ ಹನುಮಂತರಾಯರು ಮುಂತಾದವರು ತಮ್ಮ ತನು, ಮನ, ಧನಗಳನ್ನು ಅರ್ಪಿಸಿದ್ದಾರೆ.


ಪತ್ರಿಕೆ ಮೊದಲು ಆರಂಭವಾದದ್ದು ಬೆಳಗಾವಿಯಲ್ಲಿ ಮೊಹರೆ ಹನುಮಂತರಾಯರ ನೇತೃತ್ವದಲ್ಲಿ. ಅನಂತರ ಸಂಯುಕ್ತ ಕರ್ನಾಟಕ ಹುಬ್ಬಳ್ಳಿಗೆ ವರ್ಗಾವಣೆಯಾಯಿತು. ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳು ನುಗ್ಗಿ ಬಂದ ಈ ಪತ್ರಿಕೆ ಅಲ್ಲಿಯ ಹಳ್ಳಿಗರಲ್ಲಿ ರಾಷ್ಟ್ರೀಯ ಚಳವಳಿಯಲ್ಲಿ ಕೂಡಿಕೊಳ್ಳುವ ಆವೇಶ ತುಂಬಿತು ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರುಗಳಾಗಿದ್ದ ಮೊಹರೆ ಹನುಮಂತರಾಯರು, ರಂಗನಾಥ ದಿವಾಕರರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿದ್ದುಕೊಂಡು ಸ್ವಾತಂತ್ರ್ಯಾ ಸಮರದಲ್ಲಿ ಭಾಗವಹಿಸುತ್ತಾ ಜೊತೆ ಜೊತೆಗೇ ಪತ್ರಿಕೆಯ ಮುಖಾಂತರ ಜನರನ್ನು ಬಡಿದೆಬ್ಬಿಸುವ ಕೆಲಸವನ್ನೂ ಮಾಡಿದವರು. ಮಹಾತ್ಮಾ ಗಾಂಧಿ, ಬ್ರೆಲ್ವಿ, ಬಾಲಗಂಗಾಧರ ತಿಲಕ್, ಜೋಕಿಂ ಆಳ್ವ, ಎಸ್.ಕೆ. ಪಾಟೀಲ್, ಸದಾನಂದ್, ಪ್ರಕಾಶ ರಾಮರಾವ್ ಇವರ ಪಂಕ್ತಿಯಲ್ಲಿ ಶೋಭಿಸುವವರು ಮೊಹರೆ ಹನುಮಂತರಾಯರು ಮತ್ತು ದಿವಾಕರರು.

ಏಕೀಕರಣದ ನೇತಾರ

ಲೋಕಶಿಕ್ಷಣ ಟ್ರಸ್ಟಿನ ಎರಡು ಕಣ್ಣುಗಳಾಗಿದ್ದ ಸಂಯುಕ್ತ ಕರ್ನಾಟಕ' ಹಾಗೂಕರ್ಮವೀರ’ ಪತ್ರಿಕೆಗಳು ಸ್ವಾತಂತ್ರ್ಯಾನಂತರ ಕರ್ನಾಟಕ ಏಕೀಕರಣಕ್ಕಾಗಿ ದುಡಿದಿವೆ.
ಕರ್ನಾಟಕ ಏಕೀಕರಣ ಅಂದೋಲನ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಾಗಿ ನಡೆಯಲೇಬೇಕಾದ ಚಳವಳಿ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿದ್ದರಲ್ಲಿ ಪತ್ರಿಕೆಯ ಪಾತ್ರ ಅವಿಸ್ಮರಣೀಯ.


ಈ ಗುರಿಯೂ ೧೯೫೬ರಲ್ಲಿ ಈಡೇರಿತು. ಮುಂಬಯಿ, ಮದ್ರಾಸ್, ಹೈದರಾಬಾದ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಯಿತು. ಚೆಲುವ ಕನ್ನಡನಾಡು ಉದಯವಾಯಿತು. ಆದರೆ, ರಾಜ್ಯದ ಹೆಸರು ಮೈಸೂರು' ಎಂದೇ ಮುಂದುವರೆದಿತ್ತು.ಹೆಸರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬುದು ಜನರ ಬಹುದಿನದ ಬಯಕೆಯಾಗಿತ್ತು. ಕೊನೆಗೂ ಜನರ ಈ ಬೇಡಿಕೆ ಈಡೇರಿದ್ದು ೧೯೭೩ರ ನವೆಂಬರ್ ೧ರಂದು. ಅಂದು ರಾಜ್ಯದ ಹೆಸರು ‘ಕರ್ನಾಟಕ’ ಎಂದಾಯಿತು. ಜನರ ಬಹುದಿನದ ಕನಸು ಕೊನೆಗೂ ನನಸಾಗಿತ್ತು. ಸಂಯುಕ್ತ ಕರ್ನಾಟಕದ ಶ್ರಮ ಸಾರ್ಥಕವಾಗಿತ್ತು.