ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಒಟ್ಟು ಮೂವರ ವಿರುದ್ಧ ದೂರುಗಳು ದಾಖಲಾಗಿವೆ.
ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ರಜಾಕ್ ಬಾಗವಾನ್ ಎಂಬುವವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ದೂರು ನೀಡಿದ್ದಾರೆ. ತಾವು ಜೀವಂತವಾಗಿದ್ದರೂ ಮೃತಪಟ್ಟಿದ್ದಾರೆಂದು ತೋರಿಸುವ ಮರಣ ಪ್ರಮಾಣ ಪತ್ರವನ್ನು ಶಾಸಕ ಯತ್ನಾಳ ಅವರು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಶಾಸಕರ ಲೆಟರ್ಹೆಡ್ನಲ್ಲಿ ತಾವು ಮೃತಪಟ್ಟಿರುವುದಾಗಿ ನಮೂದಿಸಿ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಬ್ದುಲ್ ರಜಾಕ್ ಬಾಗವಾನ್ ಆಗ್ರಹಿಸಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ದೂರು ದಾಖಲಾಗಿದೆ. ಪಾಲಿಕೆ ಸದಸ್ಯ ಗಿರೀಶ ಪಾಟೀಲ್ ವಿರುದ್ಧ ಜಾವೀದ್ ಜಾಕೀರ್ ಅಹ್ಮದ್ ಇಂಡಿಕರ ದೂರು ನೀಡಿದ್ದಾರೆ.
ಮತ್ತೊಂದೆಡೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ದೂರು ದಾಖಲಾಗಿದೆ. ತಿಕೋಟಾ ಪಟ್ಟಣದ ವಾರ್ಡ್ ನಂಬರ್ 8ರ ನಿವಾಸಿ ಹಾಜೀಲಾಲ್ ಕೊಟ್ಟಲಗಿ ಅವರು ದೂರು ನೀಡಿದ್ದಾರೆ. ತಾವು ಸ್ಥಳೀಯ ನಿವಾಸಿಯಲ್ಲ ಎಂದು ಆರೋಪಿಸಿ ಕೆಲವರು ಬಿಎಲ್ಒಗೆ ಫಾರ್ಮ್ ನಂಬರ್ 7 ಸಲ್ಲಿಸಿದ್ದಾರೆ. ತಾವು ತಿಕೋಟಾ ಪಟ್ಟಣದ ವಾರ್ಡ್ ನಂಬರ್ 8ರ ಸ್ಥಳೀಯ ನಿವಾಸಿಯಾಗಿದ್ದು, ತಮ್ಮ ವಿರುದ್ಧ ತಪ್ಪು ಮಾಹಿತಿ ನೀಡಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಯತ್ನಿಸಲಾಗಿದೆ ಎಂದು ಹಾಜೀಲಾಲ್ ಆರೋಪಿಸಿದ್ದಾರೆ.





















