ದಾವಣಗೆರೆ: ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳನ್ನು ಬಿಟ್ಟು ಪೋಷಕರು ಹೊರಗೆ ತೆರಳಿದ್ದ ವೇಳೆ, ಮಕ್ಕಳು ಕಾರನ್ನು ಸ್ಟಾರ್ಟ್ ಮಾಡಿ ಚಲಾಯಿಸಿದ ಪರಿಣಾಮ ಕಾರು ಮನೆಯ ಗೋಡೆಗೆ ಡಿಕ್ಕಿ ಹೊಡೆದು, ಎರಡು ಬೈಕ್ಗಳು ಜಖಂಗೊಂಡ ಘಟನೆ ನಗರದ ಬಿಎನ್ ಲೇಔಟ್ನಲ್ಲಿ ನಡೆದಿದೆ.
ಕಾರಿನಲ್ಲಿ ಕುಳಿತಿದ್ದ ಮಕ್ಕಳು ಆಕಸ್ಮಿಕವಾಗಿ ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣವೇ ವಾಹನ ವೇಗವಾಗಿ ಮುಂದಕ್ಕೆ ಚಲಿಸಿದೆ. ಈ ವೇಳೆ ಚಾಲಕನ ನಿಯಂತ್ರಣವಿಲ್ಲದೆ ಕಾರು ಮನೆಯ ಗೋಡೆಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್ಗಳು ಜಖಂಗೊಂಡಿವೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಮಕ್ಕಳು ಯಾವುದೇ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಕಾರಿನಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯಾವಳಿ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಮಕ್ಕಳನ್ನು ಕಾರಿನಲ್ಲಿ ಒಬ್ಬರೇ ಬಿಟ್ಟು ಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಈ ಘಟನೆ ಎಚ್ಚರಿಕೆ ಮೂಡಿಸಿದೆ. ಈ ಘಟನೆ ನಡೆದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.



















