SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಆನೆಗಳಿಗಾಗಿ ಅಧಿಕಾರ ತ್ಯಜಿಸಲು ಸಿದ್ಧ: ನಯನಾ ಮೋಟಮ್ಮ ಖಡಕ್ ಎಚ್ಚರಿಕೆ

ಆನೆಗಳಿಗಾಗಿ ಅಧಿಕಾರ ತ್ಯಜಿಸಲು ಸಿದ್ಧ: ನಯನಾ ಮೋಟಮ್ಮ ಖಡಕ್ ಎಚ್ಚರಿಕೆ

0
2

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲೂಕು ಭಾಗದಿಂದ ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಕಾಡಾನೆಗಳನ್ನು ತಡರಾತ್ರಿ ಅಟ್ಟಲಾಗಿದ್ದು, ಭಾನುವಾರ ರಾತ್ರಿಯೊಳಗೆ ಅವುಗಳನ್ನು ಮೂಲಸ್ಥಾನಕ್ಕೆ ವಾಪಸ್ ಕಳಿಸದಿದ್ದರೆ ಸೋಮವಾರ ರಾಜೀನಾಮೆ ನೀಡುವುದಾಗಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರಿನಲ್ಲಿ ಭಾನುವಾರ ಸಂಜೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿರುವ 52 ಕಾಡಾನೆಗಳನ್ನು ಅಲ್ಲಿನ ಜನಪ್ರತಿನಿಧಿಗಳ ಗಮನಕ್ಕೂ ತರದೆ, ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೂಡಿಗೆರೆ ಭಾಗದ ಮೂಲಕ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಹಾಸನ ಜಿಲ್ಲೆಯ ಜನರ ಜೀವಕ್ಕೆ ಮಾತ್ರವೇ ಬೆಲೆಯಿದೆಯೇ? ಚಿಕ್ಕಮಗಳೂರು ಜಿಲ್ಲೆಯ ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಶಾಸಕರು, ಒಂದು ಜಿಲ್ಲೆಯ ಸಮಸ್ಯೆಯನ್ನು ಮತ್ತೊಂದು ಜಿಲ್ಲೆಯ ಜನರ ಮೇಲೆ ಹೇರಬಾರದು. ಕಾಡಾನೆಗಳ ಸ್ಥಳಾಂತರದಿಂದ ಮೂಡಿಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ ಎಂದರು.

ನಮಗೆ ಅಧಿಕಾರಕ್ಕಿಂತ ಜನಸಾಮಾನ್ಯರ ಜೀವ ಮುಖ್ಯ. ಜನರ ಜೀವ ರಕ್ಷಣೆಗಾಗಿ ಅಧಿಕಾರ ತ್ಯಜಿಸಲು ಸಿದ್ಧರಿದ್ದೇವೆ. ಮೂಡಿಗೆರೆ ಭಾಗಕ್ಕೆ ಅಟ್ಟಲಾಗಿರುವ ಕಾಡಾನೆಗಳನ್ನು ತಕ್ಷಣವೇ ವಾಪಸ್ ಕಳಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ ಎಂದು ನಯನ ಮೋಟಮ್ಮ ಸ್ಪಷ್ಟಪಡಿಸಿದರು.

ಮೂವರು ಶಾಸಕರು ಒಗ್ಗಟ್ಟಾಗಿ ಕಾಡಾನೆಗಳನ್ನು ಮೂಲಸ್ಥಾನಕ್ಕೆ ವಾಪಸ್ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದು, ಈ ಸಂಬಂಧ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.