ಬಾಗಲಕೋಟೆ: ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ನೀಡಿರುವ ಅವಹೇಳನಕಾರಿ ಹೇಳಿಕೆ ಅತ್ಯಂತ ಖಂಡನೀಯ. ಇಂತಹ ಹೇಳಿಕೆಗಳು ಬಸವಣ್ಣನವರ ತತ್ವಾದರ್ಶಗಳನ್ನು ಗೌರವಿಸುವ ಸಮಸ್ತ ಸಮಾಜದ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡಿವೆ ಎಂದು ಭೈರನಹಟ್ಟಿ-ಶಿರೋಳ ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ಕುಳಗೇರಿ ಕ್ರಾಸ್ನಲ್ಲಿ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಸೂರ್ಯನಿಗೆ ಮಣ್ಣೆರಚಿದರೆ ಅದು ಸೂರ್ಯನಿಗೆ ತಾಗುವುದಿಲ್ಲ; ಮರಳಿ ನಮ್ಮ ಮೇಲೆಯೇ ಬೀಳುತ್ತದೆ ಎಂಬ ಕನಿಷ್ಠ ಅರಿವು ಪ್ರತಿಯೊಬ್ಬರಿಗೂ ಇರಬೇಕು” ಎಂದು ಹೇಳಿದರು.
ಬಸವಣ್ಣನವರು ಯಾವುದೇ ಒಂದು ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮಾನವಕುಲಕ್ಕೆ ಬೆಳಕಾದವರು. ವಿಶ್ವಕ್ಕೆ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚೇತನ. ಜಾತಿ ವ್ಯವಸ್ಥೆ, ಅಸಮಾನತೆ, ಮೂಢನಂಬಿಕೆ ಹಾಗೂ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಕ್ರಾಂತಿಕಾರಿ ಎಂದು ಬಣ್ಣಿಸಿದರು.
ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸಿದ ಬಸವಣ್ಣನವರ ವಚನಗಳು ಇಂದಿಗೂ ಕೋಟ್ಯಂತರ ಜನರಿಗೆ ಬದುಕಿನ ದಾರಿದೀಪವಾಗಿವೆ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಆಧಾರರಹಿತ ಆರೋಪ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವುದು ಖಂಡನೀಯ ಎಂದರು.
ರವಿ ಹಂಜ್ ಅವರು ಬರೆದಿರುವ ವಿವಾದಿತ ʻಬಸವ ಮಂಟಪʼ ಪುಸ್ತಕವನ್ನು ಸರ್ಕಾರ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಶಾಂತಲಿಂಗ ಶ್ರೀಗಳು ತಿಳಿಸಿದರು.






















