ದಾವಣಗೆರೆ: ಜನಪ್ರತಿನಿಧಿಗಳು ಎಂದರೆ ಕೇವಲ ಅಧಿಕಾರದ ಸ್ಥಾನದಲ್ಲಿದ್ದುಕೊಂಡು ಆದೇಶ ನೀಡುವವರಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರಾಗಿರಬೇಕು ಎಂಬುದಕ್ಕೆ ಮಾಯಕೊಂಡ ಕ್ಷೇತ್ರದ ಶಾಸಕ ಹಾಗೂ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಮಾದರಿಯಾಗಿದ್ದಾರೆ.
ಕುಡಿಯುವ ನೀರಿಗಾಗಿ ಹನಿ ಹನಿಗೂ ಪರದಾಡುತ್ತಿದ್ದ ತಾಲೂಕಿನ ಗುಡಾಳ್ ಗ್ರಾಮದ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ಖಾಸಗಿ ಬೋರ್ವೆಲ್ವೊಂದನ್ನು ಬಾಡಿಗೆಗೆ ಪಡೆದು ನೀರು ಪೂರೈಕೆಗೆ ವ್ಯವಸ್ಥೆ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಇಡೀ ಗ್ರಾಮಕ್ಕೆ ಒಂದೇ ಒಂದು ಬೋರ್ವೆಲ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ, ಈ ಬೋರ್ವೆಲ್ನಿಂದಲೂ ಸಮರ್ಪಕವಾಗಿ ನೀರು ಪೂರೈಕೆಯಾಗದೆ, ಆಗಾಗ್ಗೆ ನೀರು ಬರುವುದೂ ನಿಲ್ಲುವುದೂ ನಡೆಯುತ್ತಿತ್ತು. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸೂಕ್ತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು.
ಈ ವಿಷಯ ತಿಳಿದ ಸಚಿವ ಕೆ.ಎಸ್. ಬಸವಂತಪ್ಪ ಬುಧವಾರ ಗುಡಾಳ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿದ ಅವರು, ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣವೇ ಕಾರ್ಯಪ್ರವೃತ್ತರಾದರು.
ಗ್ರಾಮದಲ್ಲಿ ಲಭ್ಯವಿರುವ ಖಾಸಗಿ ಬೋರ್ವೆಲ್ ಮಾಲೀಕರೊಂದಿಗೆ ಮಾತುಕತೆ ನಡೆಸಿದ ಸಚಿವರು, ಬೋರ್ವೆಲ್ ಅನ್ನು ತಿಂಗಳ ಬಾಡಿಗೆ ಆಧಾರದಲ್ಲಿ ಪಡೆಯಲು ಒಪ್ಪಂದ ಮಾಡಿಕೊಂಡರು. ಅಷ್ಟೇ ಅಲ್ಲದೆ, ಬಾಡಿಗೆಗೆ ಸಂಬಂಧಿಸಿದ ಮುಂಗಡ ಹಣವನ್ನು ತಮ್ಮ ವೈಯಕ್ತಿಕ ಹಣದಿಂದಲೇ ಪಾವತಿಸಿ, ನೀರು ಪೂರೈಕೆಗೆ ತಕ್ಷಣದ ವ್ಯವಸ್ಥೆ ಕಲ್ಪಿಸಿದರು. ಸರ್ಕಾರದ ವ್ಯವಸ್ಥೆಯ ಮೂಲಕ ಪರಿಹಾರ ಸಿಗುವವರೆಗೆ ಕಾಯದೆ, ಜನರ ತುರ್ತು ಅಗತ್ಯಕ್ಕೆ ಆದ್ಯತೆ ನೀಡಿದ ಸಚಿವರ ನಡೆ ಗ್ರಾಮಸ್ಥರ ಮನಗೆದ್ದಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್. ಬಸವಂತಪ್ಪ, ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ಮೀಸಲಿಟ್ಟಿದ್ದು, ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ. ನೀರು ಲಭ್ಯವಿರುವ ಪ್ರದೇಶಗಳಲ್ಲಿ ಹೊಸ ಬೋರ್ವೆಲ್ ಕೊರೆಸಬೇಕು. ಅಂತರ್ಜಲ ಲಭ್ಯವಿಲ್ಲದ ಕಡೆ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಜನರಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ತಕ್ಷಣ ಎಚ್ಚೆತ್ತುಕೊಂಡು ಜನರಿಗೆ ಮೊದಲ ಆದ್ಯತೆಯಲ್ಲಿ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭವಾಗುವುದರಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ. ಹೀಗಾಗಿ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಇದೇ ವೇಳೆ ಸಾರ್ವಜನಿಕರು ಕೂಡ ನೀರನ್ನು ಮಿತವಾಗಿ ಬಳಸಬೇಕು. ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, ಯಾರೂ ವ್ಯರ್ಥ ಮಾಡಬಾರದು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜನರು ಮತ್ತು ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಸಚಿವರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ: ಸಚಿವರ ತಕ್ಷಣದ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ ಗ್ರಾಮದ ಹಿರಿಯ ವೆಂಕಟೇಶಪ್ಪ, “ಸಮಸ್ಯೆಗಳನ್ನು ಹೇಳಿಕೊಂಡು ಸಚಿವರ ಬಳಿ ಹೋದರೆ ಅವರನ್ನು ಭೇಟಿ ಮಾಡುವುದು ಕಷ್ಟ ಎಂಬ ಮಾತು ಸಾಮಾನ್ಯ. ಆದರೆ ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಕೆ.ಎಸ್. ಬಸವಂತಪ್ಪ ಅವರು ಯಾವುದೇ ಸಮಸ್ಯೆ ಇದ್ದರೂ ತಿಳಿಸಿದ ತಕ್ಷಣವೇ ನಮ್ಮ ನೆರವಿಗೆ ಧಾವಿಸುತ್ತಾರೆ. ಇಂತಹ ಸಚಿವರನ್ನು ಪಡೆದ ನಾವೇ ಧನ್ಯರು. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ನಮ್ಮ ದಾಹ ನೀಗಿಸಿದ ಭಗೀರಥರಂತೆ ಅವರು ಕಾರ್ಯನಿರ್ವಹಿಸಿದ್ದಾರೆ” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಸ್ಯೆ ಉಲ್ಬಣಿಸಿದ ಬಳಿಕವೂ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುವಂತೆ ಮಾಡದೆ, ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ಕಂಡುಕೊಂಡ ಸಚಿವರ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ವಿಚಾರದಲ್ಲಿ ತಕ್ಷಣ ಸ್ಪಂದಿಸುವ ಮನೋಭಾವವೇ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಗುಡಾಳ್ ಗ್ರಾಮದಲ್ಲಿ ನಡೆದ ಈ ಬೆಳವಣಿಗೆ ಸಾಕ್ಷಿಯಾಗಿದೆ. ತಾತ್ಕಾಲಿಕವಾಗಿಯಾದರೂ ನೀರಿನ ಬವಣೆ ನೀಗಿದ ಸಂತಸ ಗ್ರಾಮಸ್ಥರಲ್ಲಿ ಮನೆಮಾಡಿದ್ದು, ಸಚಿವರ ಸ್ಪಂದನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಇಂಜಿನಿಯರ್ ಮಾಳಪ್ಪ, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಮಲ್ಲೇಶ್ ನಾಯ್ಕ್, ಪಿಡಿಒ ಸುರೇಶ್, ಗ್ರಾಮಸ್ಥರಾದ ವೆಂಕಟೇಶಪ್ಪ, ಶಂಭುಲಿಂಗಪ್ಪ, ರುದ್ರೇಶಣ್ಣ, ಕಲ್ಲೇಶಪ್ಪ, ಲೋಕೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.






















