SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಭದ್ರಾ ನೀರಿಗಾಗಿ ಬಾತಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

ಭದ್ರಾ ನೀರಿಗಾಗಿ ಬಾತಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

0
10

ದಾವಣಗೆರೆ: ಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಬೇಸಿಗೆ ಬೆಳೆಗೆ 120 ರಿಂದ 130 ದಿನಗಳ ಕಾಲ ನೀರು ಹರಿಸುವ ದಿನಾಂಕವನ್ನು ನಿಗದಿಪಡಿಸಬೇಕು ಹಾಗೂ ಈ ಕುರಿತು ತಕ್ಷಣ ಐಸಿಸಿ ಸಭೆ ಕರೆದು ಅಧಿಕೃತ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತರು ತಾಲೂಕಿನ ಬಾತಿ ಗ್ರಾಮದಲ್ಲಿ ಬುಧವಾರದಿಂದ ಉಪವಾಸ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ರೈತ ಮುಖಂಡರಾದ ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್, ಬೆಳವನೂರು ನಾಗೇಶ್ವರ ರಾವ್ ಸೇರಿದಂತೆ ಶಿವನಹಳ್ಳಿ, ಕುಂದುವಾಡ, ಬನ್ನಿಕೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚಂದ್ರಶೇಖರ್ ಪೂಜಾರ್, ಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿಗೆ ಅಗತ್ಯ ಪ್ರಮಾಣ ಕಾಯ್ದಿರಿಸಿದ ಬಳಿಕವೂ ಡೆಡ್ ಸ್ಟೋರೇಜ್ ಹೊರತುಪಡಿಸಿ ರೈತರ ಬೇಸಿಗೆ ಬೆಳೆಗೆ 120 ರಿಂದ 130 ದಿನಗಳ ಕಾಲ ನೀರು ಹರಿಸಲು ಸಾಕಷ್ಟು ನೀರಿನ ಲಭ್ಯತೆ ಇದೆ. ಹೀಗಾಗಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರ ವಿಳಂಬ ಮಾಡದೆ ನಿಖರ ದಿನಾಂಕ ಘೋಷಿಸಬೇಕು ಎಂದು ಆಗ್ರಹಿಸಿದರು.

ನೀರು ಹರಿಸುವ ದಿನಾಂಕ ಪ್ರಕಟಿಸುವಂತೆ ಒತ್ತಾಯಿಸಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳಿದ್ದ ರೈತರನ್ನು ಪೊಲೀಸರು ತಡೆದಿದ್ದರು. ಈ ಹಿನ್ನೆಲೆಯಲ್ಲಿ ರೈತರು ರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದರು. ರೈತರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಗುರುವಾರ ಐಸಿಸಿ ಸಭೆ ನಡೆಸಿ ಸರ್ಕಾರದಿಂದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದ್ದರಿಂದ ಪ್ರತಿಭಟನೆಯ ಸ್ವರೂಪ ಬದಲಿಸಿ ಬಾತಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ ಎಂದು ತಿಳಿಸಿದರು.

ರೈತ ಮುಖಂಡ ಶಂಕರಮೂರ್ತಿ ಅವರು ನ್ಯಾಯ ಸಿಗುವವರೆಗೂ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಲೋಕಿಕೆರೆ ನಾಗಣ್ಣ ಸೇರಿದಂತೆ ಹಲವು ರೈತರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಗುರುವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ತೀರ್ಮಾನ ಕೈಗೊಂಡು ನೀರು ಹರಿಸುವ ದಿನಾಂಕ ಪ್ರಕಟಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಂಕರಮೂರ್ತಿ, ಸಿದ್ದೇಶ್, ಸುರೇಶ್, ಹೇಮಂತ್, ಸಂಜು, ಬಿ.ಕೆ. ಶಿವಕುಮಾರ್, ಉಮೇಶ್, ಪ್ರಕಾಶ್, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಇತರರಿದ್ದರು.