SK Home Ad
Home ಸಿನಿ ಮಿಲ್ಸ್ ಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್. ಶಂಕರ್ ಇನ್ನಿಲ್ಲ

ಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್. ಶಂಕರ್ ಇನ್ನಿಲ್ಲ

0
58

ಪತ್ರಕರ್ತನಿಂದ ನಿರ್ದೇಶಕರಾಗಿ ‘ಉಲ್ಟಾಪಲ್ಟಾ’ ಮೂಲಕ ಹೊಸ ದಿಕ್ಕು ತೋರಿದ್ದ ಎನ್.ಎಸ್. ಶಂಕರ್ ಬದುಕಿನ ಪಯಣ ಅಂತ್ಯ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಖ್ಯಾತ ಪತ್ರಕರ್ತ, ಲೇಖಕ ಹಾಗೂ ‘ಉಲ್ಟಾಪಲ್ಟಾ’ ಖ್ಯಾತಿಯ ಸೃಜನಶೀಲ ವ್ಯಕ್ತಿತ್ವ ಎನ್.ಎಸ್. ಶಂಕರ್ ಅವರು ಭಾನುವಾರ (ಜೂನ್ 28) ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ.

ಮೂಲತಃ ಪತ್ರಕರ್ತರಾಗಿದ್ದ ಎನ್.ಎಸ್. ಶಂಕರ್ ಅವರು ಕನ್ನಡದ ಹಲವು ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ವಿಶೇಷವಾಗಿ ಲಂಕೇಶ್ ಪತ್ರಿಕೆಯೊಂದಿಗೆ ಹೊಂದಿದ್ದ ಒಡನಾಟ ಮತ್ತು ತಮ್ಮ ತೀಕ್ಷ್ಣ, ವೈಚಾರಿಕ ಬರಹಗಳ ಮೂಲಕ ಅವರು ಓದುಗರ ಮನಗೆದ್ದಿದ್ದರು. ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಬಂಡಾಯ ಸಾಹಿತ್ಯ ಚಳವಳಿಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: BDA ಹಸಿರು ಅಭಿಯಾನಕ್ಕೆ ಗಿನ್ನಿಸ್ ವಿಶ್ವ ದಾಖಲೆ ಗೌರವ: ಡಿಕೆಶಿ ಸಂತಸ

1997ರಲ್ಲಿ ಬಿಡುಗಡೆಯಾದ ‘ಉಲ್ಟಾಪಲ್ಟಾ’ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದರು. ವಿಶ್ವಪ್ರಸಿದ್ಧ ಸಾಹಿತಿ ವಿಲಿಯಂ ಶೇಕ್ಸ್‌ಪಿಯರ್ ಅವರ ‘ದಿ ಕಾಮಿಡಿ ಆಫ್ ಎರರ್ಸ್’ ಕೃತಿಯನ್ನು ಆಧರಿಸಿ ನಿರ್ಮಿಸಿದ ಈ ಹಾಸ್ಯ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈ ಚಿತ್ರವು ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿತ್ತು. ನಂತರ ಅವರು ‘ಮಣಿ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಬರಹಗಾರರಾಗಿಯೂ ಗುರುತಿಸಿಕೊಂಡಿದ್ದ ಶಂಕರ್ ಅವರು ಕಲೆ, ಸಿನಿಮಾ, ರಾಜಕೀಯ ಮತ್ತು ಸಮಾಜದ ವಿವಿಧ ಆಯಾಮಗಳ ಕುರಿತು 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ‘ಈಗ…’ ಎಂಬ ಮೂರು ಸಣ್ಣ ಕಥೆಗಳ ಆಂಥಾಲಜಿ ಸಿನಿಮಾದ ನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಶಂಕರ್ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2024ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಚಿತ್ರರಂಗ, ಮಾಧ್ಯಮ ಹಾಗೂ ಸಾಹಿತ್ಯ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.