ಮೈಸೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ 2027ರಲ್ಲಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ಸಮ್ಮೇಳನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ-4) ಗದ್ಯ ಮಹಾಕಾವ್ಯ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
2027ರಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮುಂದಿನ ಬಜೆಟ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ವಿದೇಶಗಳಲ್ಲಿಯೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆತಂದು ಕನ್ನಡದ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಾಹಿತ್ಯಕ್ಕೆ ಸಾವಿಲ್ಲ, ಅದರ ಪ್ರಭಾವ ಶಾಶ್ವತ: ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನಮಾನಗಳು ಶಾಶ್ವತವಲ್ಲ. ರಾಜಕೀಯದಲ್ಲಿರುವವರ ಹೆಸರುಗಳು ಭವಿಷ್ಯದಲ್ಲಿ ಮರೆಯಾಗಬಹುದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಹಾಗೂ ಅವರ ಚಿಂತನೆಗಳು ತಲೆಮಾರುಗಳವರೆಗೆ ಉಳಿಯುತ್ತವೆ. ಅಧಿಕಾರದ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಆದರೆ ಸಾಹಿತ್ಯದ ಮೂಲಕ ಜನರ ಆಲೋಚನೆಗಳನ್ನೇ ಬದಲಾಯಿಸುವ ಶಕ್ತಿ ಇದೆ. ವ್ಯಕ್ತಿಯ ಬದುಕು ಅಂತ್ಯಗೊಂಡರೂ ಆತ ಬರೆದ ಚಿಂತನೆಗಳಿಗೆ ಸಾವಿಲ್ಲ ಎಂದು ಸಿಎಂ ಅಭಿಪ್ರಾಯಪಟ್ಟರು.
ಜಗತ್ತು ಒಂದಾಗಬೇಕಾದರೆ ಮೊದಲು ಮನುಷ್ಯರು ಒಂದಾಗಬೇಕು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವ ಶಕ್ತಿ ಧರ್ಮ ಮತ್ತು ಸಂಸ್ಕೃತಿಗಿದೆ. ಮನುಷ್ಯನ ಬದುಕಿಗೆ ಆಹಾರ ಎಷ್ಟು ಮುಖ್ಯವೋ, ಆತ್ಮತೃಪ್ತಿಗೆ ಸಾಹಿತ್ಯ ಮತ್ತು ಕಲೆ ಅಷ್ಟೇ ಮುಖ್ಯ. ಅಜ್ಞಾನವನ್ನು ದೂರ ಮಾಡಲು ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳಕು ಅಗತ್ಯ ಎಂದರು.
ಅಭಿವೃದ್ಧಿಗೆ ಸಂಪತ್ತು ಮುಖ್ಯವಾದರೆ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮೌಲ್ಯಗಳು ಅಗತ್ಯ. ಸಂಸ್ಕೃತಿ ನಮ್ಮ ಗುರುತಾಗಿದ್ದು, ಮಾನವೀಯತೆ ನಮ್ಮ ಅಸ್ತಿತ್ವವಾಗಿದೆ. ನಮ್ಮ ಕಾಯಕಗಳು ಬೇರೆಬೇರೆಯಾಗಿದ್ದರೂ ಮಾನವೀಯ ಭಾವನೆಗಳು ಒಂದೇ ಆಗಿರಬೇಕು ಎಂದು ಹೇಳಿದರು.
ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ; ಸರ್ಕಾರ ಬದ್ಧ: ಕನ್ನಡ ಭಾಷೆ ಮತ್ತು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ದೊರಕಿಸುವ ವಿಚಾರದಲ್ಲಿಯೂ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಕನ್ನಡ ಧ್ವಜದ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಮುಂದಿನ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ, ಅಗತ್ಯ ಕಾನೂನು ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಕನ್ನಡ ಭಾಷೆ ಮತ್ತು ಕನ್ನಡ ಬಾವುಟಕ್ಕೆ ವಿಶೇಷ ಗುರುತು ಹಾಗೂ ಗೌರವ ದೊರಕಿಸುವುದು ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.
ಕತ್ತಿಗಿಂತ ಲೇಖನಿ ಹರಿತ: ಕತ್ತಿಗಿಂತ ಲೇಖನಿ ಹರಿತ ಎಂಬ ಮಾತಿನಂತೆ ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಅಪಾರ ಶಕ್ತಿಯಿದೆ. ಸುತ್ತೂರು ಶ್ರೀಗಳು ನೂರಾರು ಬರಹಗಾರರನ್ನು ಪ್ರೋತ್ಸಾಹಿಸುವುದರ ಜತೆಗೆ ಅನೇಕ ಪುಸ್ತಕಗಳ ರಚನೆಗೆ ಪ್ರೇರಣೆ ನೀಡಿದ್ದಾರೆ. ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಹಿರಿಯರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.





















