ಹಸಿರು ಬೆಂಗಳೂರು ಅಭಿಯಾನಕ್ಕೆ ವಿಶ್ವ ಮಟ್ಟದ ಗುರುತು, ಇಂದೋರ್ ದಾಖಲೆಯನ್ನು ಹಿಂದಿಕ್ಕಿದ ಬೆಂಗಳೂರು: 12 ಗಂಟೆಗಳಲ್ಲಿ 13 ಲಕ್ಷ ಸಸಿ ನೆಟ್ಟು ದಾಖಲೆ
ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಮ್ಮಿಕೊಂಡಿದ್ದ ಬೃಹತ್ ಹಸಿರು ಅಭಿಯಾನ ಜಾಗತಿಕ ಮಟ್ಟದಲ್ಲಿ ಮಹತ್ವದ ಸಾಧನೆ ಮಾಡಿದೆ. ಕೇವಲ 12 ಗಂಟೆಗಳ ಅವಧಿಯಲ್ಲಿ 13 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು, ಬಿಡಿಎ ಹೊಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದೆ.
‘ಹಸಿರು ಬೆಂಗಳೂರು’ ಅಭಿಯಾನದಡಿ ಜೂನ್ 27ರಂದು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ, ಡಾ. ಶಿವರಾಮ ಕಾರಂತ ಬಡಾವಣೆ ಹಾಗೂ ಬನಶಂಕರಿ ಬಡಾವಣೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೃಹತ್ ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಸುಮಾರು 250 ಎಕರೆ ಪ್ರದೇಶದಲ್ಲಿ ಸ್ಥಳೀಯ ಜಾತಿಯ 15 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಬಿಡಿಎ ಹೊಂದಿದ್ದು, ಈ ಅಭಿಯಾನದಲ್ಲಿ 50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದರು.
ಇದನ್ನೂ ಓದಿ: ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ‘ಬಸವನ ಪಾದ’ ಗಿಡ ನೆಟ್ಟು ನೀರೆರೆಯುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ದಶಪಥ ರಸ್ತೆಗೆ ಚಾಲನೆ ನೀಡಲಾಯಿತು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಸೇರಿದಂತೆ ಹಲವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈವರೆಗೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ 2024ರ ಜುಲೈನಲ್ಲಿ 24 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಟ್ಟಿದ್ದು ಗಿನ್ನಿಸ್ ದಾಖಲೆಯಾಗಿತ್ತು. ಇದೀಗ ಬೆಂಗಳೂರು 12 ಗಂಟೆಗಳಲ್ಲೇ 13 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹೊಸ ದಾಖಲೆ ಬರೆದಿದೆ.
ಇದನ್ನೂ ಓದಿ: ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಬೇಕು: ಸಿಎಂ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬೆಂಗಳೂರು ಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ಮನ್ನಣೆ ದೊರೆತಿರುವುದು ಹೆಮ್ಮೆಯ ವಿಷಯ. ಬಿಡಿಎ ಹಾಗೂ 50 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿಗಳ ಸಂಕಲ್ಪಕ್ಕೆ ಸಂದ ಜಯ ಇದಾಗಿದೆ. ಹಗಲಿರುಳು ಶ್ರಮಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಹಕರಿಸಿದ ಪ್ರತಿಯೊಬ್ಬ ನಾಗರಿಕರಿಗೂ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.



















