20 ವರ್ಷಗಳ ಬಳಿಕ ಮತ್ತೆ ಒಂದಾದ ಎಮ್ರಾನ್–ಆದಿತ್ಯ–ಹಿಮೇಶ್: ‘ಗನ್ಮಾಸ್ಟರ್ ಜಿ9’ ಟ್ರೇಲರ್ ಔಟ್
ಪುಣೆ : ಬಾಲಿವುಡ್ ನಟ ಎಮ್ರಾನ್ ಹಶ್ಮಿ ಅಭಿನಯದ ಬಹುನಿರೀಕ್ಷಿತ ರೊಮ್ಯಾಂಟಿಕ್ ಆಕ್ಷನ್ ಚಿತ್ರ ‘ಗನ್ಮಾಸ್ಟರ್ ಜಿ9’ (Gunmaaster G9) ಚಿತ್ರದ ಅಧಿಕೃತ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಪುಣೆಯ ಕೋಥ್ರುಡ್ನಲ್ಲಿರುವ ಸಿಟಿ ಪ್ರೈಡ್ ಮಲ್ಟಿಪ್ಲೆಕ್ಸ್ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಟ್ರೇಲರ್ ಅನಾವರಣಗೊಳಿಸಲಾಗಿದೆ. ಚಿತ್ರದ ಪ್ರಚಾರಕ್ಕೆ ವಿಭಿನ್ನ ಮೆರುಗು ನೀಡುವ ಉದ್ದೇಶದಿಂದ ಚಿತ್ರತಂಡ ಮುಂಬೈ ಬದಲಿಗೆ ಪುಣೆಯಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿರುವುದು ಗಮನ ಸೆಳೆದಿದೆ. ಮಲ್ಟಿಪ್ಲೆಕ್ಸ್ ಹೊರಭಾಗದಲ್ಲಿ ಎಮ್ರಾನ್ ಹಶ್ಮಿ ಅವರ ಬೃಹತ್ ಕಟೌಟ್ ಕೂಡ ಅಳವಡಿಸಲಾಗಿತ್ತು.
ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಸುಮಾರು ಎರಡು ದಶಕಗಳ ಬಳಿಕ ಎಮ್ರಾನ್ ಹಶ್ಮಿ, ನಿರ್ದೇಶಕ ಆದಿತ್ಯ ದತ್ ಮತ್ತು ಸಂಗೀತ ಸಂಯೋಜಕ ಹಿಮೇಶ್ ರೇಶಮ್ಮಿಯಾ ಮತ್ತೆ ಒಂದಾಗಿರುವುದು. 2005ರಲ್ಲಿ ಬಿಡುಗಡೆಯಾಗಿದ್ದ ‘ಆಶಿಕ್ ಬನಾಯಾ ಆಪ್ನೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಈ ತಂಡ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಎಮ್ರಾನ್ ಹಶ್ಮಿ ಮತ್ತು ಜೆನೆಲಿಯಾ ದೇಶಮುಖ್ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ವಿಶೇಷ. ಅಪರಶಕ್ತಿ ಖುರಾನ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕುಟುಂಬದ ರಕ್ಷಣೆಗಾಗಿ ಹೋರಾಡುವ ಸಾಮಾನ್ಯ ವ್ಯಕ್ತಿಯ ಕಥೆ : ‘ಗನ್ಮಾಸ್ಟರ್ ಜಿ9’ ಚಿತ್ರದಲ್ಲಿ ಎಮ್ರಾನ್ ಹಶ್ಮಿ ಈಶ್ವರ್ ಎಂಬ ಸಾಮಾನ್ಯ ಹೈನುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅಪಾಯ ಎದುರಾದಾಗ ಅವರ ರಕ್ಷಣೆಗಾಗಿ ಆತ ಹಿಂಸಾತ್ಮಕ ಹಾದಿ ಹಿಡಿಯಬೇಕಾಗುತ್ತದೆ. ಪ್ರೀತಿ, ಕುಟುಂಬದ ಬಾಂಧವ್ಯ, ಭಾವನಾತ್ಮಕ ಸಂಘರ್ಷ ಮತ್ತು ರೋಚಕ ಆಕ್ಷನ್ ದೃಶ್ಯಗಳನ್ನು ಒಟ್ಟುಗೂಡಿಸಿರುವ ಕಥಾಹಂದರವನ್ನು ಚಿತ್ರ ಹೊಂದಿದೆ. ಜೆನೆಲಿಯಾ ನಾಯಕಿಯಾಗಿ ಕಾಣಿಸಿಕೊಂಡರೆ, ಅಪರಶಕ್ತಿ ಖುರಾನ ಅವರ ಪಾತ್ರವೂ ಕಥೆಯಲ್ಲಿ ಪ್ರಮುಖ ತಿರುವುಗಳನ್ನು ನೀಡುವ ನಿರೀಕ್ಷೆಯಿದೆ.
ಚಿತ್ರದ ಸಂಗೀತವನ್ನು ಹಿಮೇಶ್ ರೇಶಮ್ಮಿಯಾ ಸಂಯೋಜಿಸಿದ್ದು, ಈಗಾಗಲೇ ಬಿಡುಗಡೆಯಾಗಿರುವ ‘ಅಫ್ಸಾನಾ ಬನಾಯಾ ಆಪ್ನೆ’ ಮತ್ತು ‘ದರ್ಡ್-ಎ-ದಿಲ್ ದರ್ಡ್-ಎ-ಜಿಗರ್’ ಹಾಡುಗಳು ಪ್ರಚಾರಕ್ಕೆ ವೇಗ ನೀಡಿವೆ. ಟ್ರೇಲರ್ಗೆ ಸಂಬಂಧಿಸಿದಂತೆ ಚಿತ್ರರಂಗದ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಸೇರಿದಂತೆ ಕೆಲವರು ಆಕ್ಷನ್, ಸಂಗೀತ ಮತ್ತು ಭಾವನಾತ್ಮಕ ಅಂಶಗಳನ್ನು ಮೆಚ್ಚಿಕೊಂಡಿದ್ದಾರೆ.
ದೀಪಕ್ ಮುಕುಟ್, ಹುನರ್ ಮುಕುಟ್ ಮತ್ತು ಸಂಗೀತಾ ಅಹೀರ್ ನಿರ್ಮಿಸಿರುವ ಈ ಚಿತ್ರಕ್ಕೆ ಆದಿತ್ಯ ದತ್ ನಿರ್ದೇಶನ ನೀಡಿದ್ದಾರೆ. ‘ಗನ್ಮಾಸ್ಟರ್ ಜಿ9’ 2026ರ ನವೆಂಬರ್ 27ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರ ಮತ್ತಷ್ಟು ಚುರುಕುಗೊಂಡಿದ್ದು, ಎಮ್ರಾನ್ ಹಶ್ಮಿ ಮತ್ತು ಜೆನೆಲಿಯಾ ಅವರ ಹೊಸ ಜೋಡಿ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯಲಿದೆ ಎಂಬ ಕುತೂಹಲ ಮೂಡಿದೆ.





















