SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

0
121

ಬೆಳಗಾವಿಯಲ್ಲಿ ಭೀಕರ ಘಟನೆ : ಕ್ಷಣಿಕ ಕೋಪಕ್ಕೆ ಬಲಿಯಾದ ಸ್ನೇಹಿತ – ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಹತ್ಯೆ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಕ್ಷಣಿಕ ಕೋಪವೇ ಭೀಕರ ದುರಂತಕ್ಕೆ ಕಾರಣವಾಗಿದ್ದು, ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಪಾರ್ಟಿ ನೀಡುವಂತೆ ಕೇಳಿದ್ದ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ.

ಮೃತರನ್ನು ವಣ್ಣೂರ ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥ ಪೂಜೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನೇಸರಗಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದೆ.

ಇದನ್ನೂ ಓದಿ: TET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪರೀಕ್ಷೆ ಮುಂದೂಡಿಕೆ!

ಪೊಲೀಸರ ಮಾಹಿತಿ ಪ್ರಕಾರ, ಘಟನೆಯ ದಿನ ಇಬ್ಬರೂ ಗ್ರಾಮದ ಕಟ್ಟೆಯ ಬಳಿ ಕುಳಿತು ಮದ್ಯ ಸೇವಿಸುತ್ತಾ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ವಿಶ್ವನಾಥನಿಗೆ ಇತ್ತೀಚೆಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಹಣಮಂತಪ್ಪ ಪಾರ್ಟಿ ನೀಡುವಂತೆ ಕೇಳಿದ್ದಾನೆ. ಈ ವಿಷಯ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ವಾದ-ವಿವಾದ ತೀವ್ರಗೊಂಡ ಸಂದರ್ಭದಲ್ಲಿ ಹಣಮಂತಪ್ಪನ ಕೈ ಆಕಸ್ಮಿಕವಾಗಿ ವಿಶ್ವನಾಥನ ಕಣ್ಣಿಗೆ ತಾಗಿದ್ದು, ಇದರಿಂದ ಆಕ್ರೋಶಗೊಂಡ ವಿಶ್ವನಾಥ ಸಮೀಪದಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಹಣಮಂತಪ್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಹಣಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ವಿವಾದಕ್ಕೆ ನಿಷ್ಪಕ್ಷಪಾತ ತನಿಖೆ: ಭಕ್ತರಿಗೆ ಟ್ರಸ್ಟ್ ಭರವಸೆ

ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರೂ, ತನಿಖೆ ಕೈಗೊಂಡ ನೇಸರಗಿ ಠಾಣೆ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈ ಘಟನೆ ಶೋಕದ ಛಾಯೆ ಮೂಡಿಸಿದ್ದು, ಗ್ರಾಮಸ್ಥರು ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.