SK Home Ad
Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ಪ್ರದೀಪ್ ಈಶ್ವರ್ ವಿರುದ್ಧ ಚಪ್ಪಲಿ ಎಸೆತ ಪ್ರಕರಣ: ನಾಲ್ವರು ಬಂಧನ

ಪ್ರದೀಪ್ ಈಶ್ವರ್ ವಿರುದ್ಧ ಚಪ್ಪಲಿ ಎಸೆತ ಪ್ರಕರಣ: ನಾಲ್ವರು ಬಂಧನ

0
86

ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್‌ಗೆ ಸಂಬಂಧಿಸಿದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಶನಿವಾರ (ಜೂನ್ 27) ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆರಂಭದಲ್ಲಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯುತ್ತಿದ್ದರೂ, ಬಳಿಕ ಕೆಲ ಜೆಡಿಎಸ್ ಕಾರ್ಯಕರ್ತರು ಸಭಾಂಗಣದೊಳಗೆ ನುಗ್ಗಿ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್. ಶಂಕರ್ ಇನ್ನಿಲ್ಲ

ಪರಿಸ್ಥಿತಿ ಉದ್ವಿಗ್ನಗೊಂಡಾಗ ಸ್ಥಳದಲ್ಲಿದ್ದ ಸ್ವಾಮೀಜಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ನಂತರ ಕಾರ್ಯಕ್ರಮ ಮುಂದುವರಿಯಿತು. ಆದರೆ ಕಾರ್ಯಕ್ರಮ ಮುಗಿದ ಬಳಿಕ ಗಲಾಟೆ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿತು.

ಕಾರ್ಯಕ್ರಮದ ನಂತರ ಶಾಸಕ ಪ್ರದೀಪ್ ಈಶ್ವರ್ ತಮ್ಮ ಕಾರಿನ ಸನ್‌ರೂಫ್ ಮೂಲಕ ಬೆಂಬಲಿಗರಿಗೆ ಅಭಿವಾದನ ಸಲ್ಲಿಸುತ್ತಾ ತೆರಳುತ್ತಿದ್ದಾಗ, ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರಿಗೆ ಪ್ರತಿಕ್ರಿಯೆಯಾಗಿ ಮೀಸೆ ತಿರುವಿ, ತೋಳು ತಟ್ಟಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಕೆಲ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಶಾಸಕರತ್ತ ಚಪ್ಪಲಿ ಎಸೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: BDA ಹಸಿರು ಅಭಿಯಾನಕ್ಕೆ ಗಿನ್ನಿಸ್ ವಿಶ್ವ ದಾಖಲೆ ಗೌರವ: ಡಿಕೆಶಿ ಸಂತಸ

ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಶಾಸಕರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಮತ್ತು ಮಹೇಂದ್ರ ಎಂಬುವರನ್ನು ಬಂಧಿಸಿದ್ದಾರೆ.

ಘಟನೆ ಬಳಿಕ ನಗರ ಪೊಲೀಸ್ ಠಾಣೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಇದನ್ನೂ ಓದಿ: ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ. ಪ್ರಭು, “ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ನೋವು ತಂದಿದೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.