ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟ ಹಾಗೂ ನಿರ್ದೇಶಕ ರಾಜೇಶ್ ಧ್ರುವ ಅವರು ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರದ ಮೂಲಕ ಮನೆಮಾತಾಗಿದ್ದ ರಾಜೇಶ್, ತಮ್ಮದೇ ನಿರ್ದೇಶನದ ಮೊದಲ ಸಿನಿಮಾ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರದ ನಾಯಕಿ ರಾಧಿಕಾ ಅಚ್ಯುತ ರಾವ್ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ಧ್ರುವ ತಮ್ಮ ಪ್ರೀತಿಯ ಪಯಣವನ್ನು ಹಂಚಿಕೊಂಡಿದ್ದಾರೆ. “ನನ್ನ ಮೊದಲ ಸಿನಿಮಾಗೆ ನಾಯಕಿ ಹುಡುಕಾಟದಲ್ಲಿದ್ದಾಗ ಸಿಕ್ಕವರೇ ಮುಂದೆ ನನ್ನ ಬಾಳ ಸಂಗಾತಿಯಾಗುತ್ತಾರೆ ಎಂದು ಭಾವಿಸಿರಲಿಲ್ಲ. ಅಂದು ನಾಯಕಿಯಾಗಿ ಪರಿಚಯಿಸಿದ ರಾಧಿಕಾ ಅವರನ್ನು ಈಗ ನನ್ನ ಧರ್ಮಪತ್ನಿಯಾಗಲಿರುವ ಸಂಗಾತಿಯಾಗಿ ಮರು ಪರಿಚಯಿಸುತ್ತಿದ್ದೇನೆ. ಸಿನಿಪಯಣದಿಂದ ಬಾಳಪಯಣದತ್ತ ಹೆಜ್ಜೆ ಇಡುತ್ತಿದ್ದೇವೆ, ನಿಮ್ಮೆಲ್ಲರ ಆಶೀರ್ವಾದವಿರಲಿ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮೂಲತಃ ಶಿರಸಿಯವರಾದ ರಾಜೇಶ್ ಧ್ರುವ ಅವರಿಗೆ ಈ ಹಿಂದೆ ವಿವಾಹವಾಗಿ, ಕಾರಣಾಂತರಗಳಿಂದ ದಾಂಪತ್ಯ ಮುರಿದುಬಿದ್ದಿತ್ತು. ಇದೀಗ ರಾಧಿಕಾ ರಾವ್ ಅವರ ಬಾಳಿಗೆ ಹೊಸ ಬೆಳಕಾಗಿ ಬಂದಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯ ‘ಶಾರದೆ’ ಧಾರಾವಾಹಿಯಲ್ಲೂ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ಸ್ಯಾಂಡಲ್ವುಡ್ ತಾರೆಯರು ಹಾಗೂ ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.





















