SK Home Ad
Home ಸುದ್ದಿ ರಾಜ್ಯ ಮಂತ್ರಾಲಯದ ವೈಭವ ಸಾರುವ ‘ರಾಯರ ದರ್ಶನ’ ಲೋಕಾರ್ಪಣೆ

ಮಂತ್ರಾಲಯದ ವೈಭವ ಸಾರುವ ‘ರಾಯರ ದರ್ಶನ’ ಲೋಕಾರ್ಪಣೆ

0
68

ಭಕ್ತರಿಗೆ ಮಂತ್ರಾಲಯದ ಸಂಪೂರ್ಣ ಪರಿಚಯ ನೀಡಲಿರುವ ಆಲ್ಬಂ ‘ರಾಯರ ದರ್ಶನ’ ಬಿಡುಗಡೆ

ಮಂತ್ರಾಲಯ: ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ, ಮಂತ್ರಾಲಯ ಕ್ಷೇತ್ರದ ವೈಭವ ಮತ್ತು ವರ್ಷಪೂರ್ತಿ ನಡೆಯುವ ಧಾರ್ಮಿಕ ಆಚರಣೆಗಳನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನವಾಗಿ ‘ರಾಯರ ದರ್ಶನ’ ವಿಡಿಯೋ ಆಲ್ಬಂ ಲೋಕಾರ್ಪಣೆಗೊಂಡಿದೆ. ಮಂತ್ರಾಲಯ ಕ್ಷೇತ್ರದ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ವೈಭವವನ್ನು ಸಮಗ್ರವಾಗಿ ಪರಿಚಯಿಸುವ ಉದ್ದೇಶದಿಂದ ಈ ಆಲ್ಬಂ ಸಿದ್ಧಪಡಿಸಲಾಗಿದೆ.

ಪ್ರತಿವರ್ಷ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತಾರೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಮಂತ್ರಾಲಯದ ಮಹಿಮೆಗೆ ಸಾಕ್ಷಿಯಾಗಿದೆ. ಈ ಹಿಂದೆ ರಾಯರ ಜೀವನ, ಪವಾಡಗಳು ಹಾಗೂ ಮಠದ ಇತಿಹಾಸ ಕುರಿತಂತೆ ಹಲವು ಸಿನಿಮಾಗಳು, ಧಾರಾವಾಹಿಗಳು ಮತ್ತು ಸಾಹಿತ್ಯ ಕೃತಿಗಳು ಬಂದಿದ್ದರೂ, ಮಂತ್ರಾಲಯದಲ್ಲಿ ಒಂದು ವರ್ಷ ಅವಧಿಯಲ್ಲಿ ನಡೆಯುವ ಪೂಜೆ, ಪುನಸ್ಕಾರ, ಉತ್ಸವ ಹಾಗೂ ಧಾರ್ಮಿಕ ಆಚರಣೆಗಳನ್ನು ಒಂದೇ ವಿಡಿಯೋ ಆಲ್ಬಂನಲ್ಲಿ ಕಟ್ಟಿಕೊಡುವ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: BDA ಹಸಿರು ಅಭಿಯಾನಕ್ಕೆ ಗಿನ್ನಿಸ್ ವಿಶ್ವ ದಾಖಲೆ ಗೌರವ: ಡಿಕೆಶಿ ಸಂತಸ

ಈ ಆಲ್ಬಂ ನಿರ್ಮಾಣಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಹಾಗೂ ಸಹಕಾರ ದೊರೆತಿದೆ. ಸುಮಾರು ಎಂಟು ತಿಂಗಳ ಕಾಲ ಶ್ರಮಿಸಿ ಆಲ್ಬಂ ಸಿದ್ಧಪಡಿಸಲಾಗಿದೆ ಎಂದು ನಿರ್ದೇಶಕ ರಘು ಭಟ್ ತಿಳಿಸಿದ್ದಾರೆ. ಸುಗುಣ ಭಟ್ ನಿರ್ಮಾಣ ಮಾಡಿರುವ ಈ ಆಲ್ಬಂ ಭಕ್ತರ ಮನಸೂರೆಗೊಳ್ಳುವಂತಿದೆ.

ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಆಲ್ಬಂಗೆ ಸಂಗೀತ ಸಂಯೋಜನೆ ಮಾಡಿದ್ದು, ನಾಗೇಶ್ ಆಚಾರ್ಯ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಮಂತ್ರಾಲಯದ ವೈಭವ, ಉತ್ಸವಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಅತ್ಯಂತ ಆಕರ್ಷಕವಾಗಿ ಚಿತ್ರಿಸಲಾಗಿದೆ.

ಇದನ್ನೂ ಓದಿ: ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

ಇದೇ ಸಂದರ್ಭದಲ್ಲಿ ಪ್ರತಿವರ್ಷ ನೀಡಲಾಗುವ ಟಿಎನ್‌ಐಟಿ ಮೀಡಿಯಾ ಅವಾರ್ಡ್ ಅನ್ನು ಈ ಬಾರಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಪ್ರದಾನ ಮಾಡಲಾಯಿತು. ಪೂರ್ವಾಶ್ರಮದಲ್ಲಿ ಅವರು ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಹಿನ್ನೆಲೆ ಈ ಗೌರವವನ್ನು ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

‘ರಾಯರ ದರ್ಶನ’ ವಿಡಿಯೋ ಆಲ್ಬಂ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಭಕ್ತರು ಅದನ್ನು ವೀಕ್ಷಿಸಬಹುದಾಗಿದೆ.