ಶಿಕ್ಷಣವೇ ಶಕ್ತಿ: ರಾಷ್ಟ್ರೀಯ ಶಿಕ್ಷಣ ದಿನದಂದು ಅಪ್ಪು ನೆನಪು; ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕು ತಲುಪಿಸುವ ಸಂಕಲ್ಪ
ಬೆಂಗಳೂರು: ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವುದಷ್ಟೇ ಅಲ್ಲ, ಸಮಾನತೆ, ಜ್ಞಾನ ಮತ್ತು ಪ್ರಗತಿಯ ಮೂಲಕ ದೇಶದ ಭವಿಷ್ಯವನ್ನು ಕಟ್ಟುವ ಶಕ್ತಿಯಾಗಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಆಶಯದೊಂದಿಗೆ ಇಂದು (ನವೆಂಬರ್ 11) ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಶಿಕ್ಷಣದ ಮಹತ್ವವನ್ನು ಸಾರುವಂತೆ ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಹಳೆಯ ಜಾಗೃತಿ ವಿಡಿಯೊವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಹಂಚಿಕೊಡಿದ್ದಾರೆ. “ಶಿಕ್ಷಣವೇ ಶಕ್ತಿ” ಎಂಬ ಸಂದೇಶದೊಂದಿಗೆ ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕು ಖಚಿತಪಡಿಸಿ, ಸಶಕ್ತ ಭಾರತದ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂಬ ಆಶಯವನ್ನು ಈ ಸಂದೇಶ ವ್ಯಕ್ತಪಡಿಸಿದೆ. ಶಿಕ್ಷಣದ ಮೂಲಕ ದೊರೆಯುವ ಜ್ಞಾನ ಮತ್ತು ಮಾಹಿತಿಯು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನೂ ಇದು ನೆನಪಿಸಿದೆ.
ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ : ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನ ಆಚರಿಸಲಾಗುತ್ತದೆ. 1888ರ ನವೆಂಬರ್ 11ರಂದು ಜನಿಸಿದ ಆಜಾದ್, ಸ್ವಾತಂತ್ರ್ಯಾನಂತರ 1947ರಿಂದ 1958ರವರೆಗೆ ದೇಶದ ಮೊದಲ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ, ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.
ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ 2008ರಲ್ಲಿ ಕೇಂದ್ರ ಸರ್ಕಾರ ನವೆಂಬರ್ 11ನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಘೋಷಿಸಿತು. ಅದೇ ವರ್ಷ ಮೊದಲ ಬಾರಿಗೆ ಈ ದಿನವನ್ನು ದೇಶಾದ್ಯಂತ ಆಚರಿಸಲಾಯಿತು. ಶಿಕ್ಷಣವು ಎಲ್ಲರಿಗೂ ತಲುಪಬೇಕು, ವಿಶೇಷವಾಗಿ ಹೆಣ್ಣುಮಕ್ಕಳು ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಆಜಾದ್ ಅವರ ಶಿಕ್ಷಣದ ದೃಷ್ಟಿಕೋನದ ಪ್ರಮುಖ ಆಶಯವಾಗಿತ್ತು.
ಶಿಕ್ಷಣದ ಹಕ್ಕು ಕಾಯ್ದೆ – ಪ್ರತಿಯೊಂದು ಮಗುವಿಗೂ ಕಲಿಕೆಯ ಅವಕಾಶ : ಭಾರತದಲ್ಲಿ ಶಿಕ್ಷಣದ ಹಕ್ಕು ಕಾಯ್ದೆ (Right to Education Act – RTE) 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ. ಸಂವಿಧಾನದ 21ಎ ವಿಧಿಯಡಿ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಗುರುತಿಸಲಾಗಿದೆ. ಮಕ್ಕಳಿಗೆ ಶಾಲಾ ಪ್ರವೇಶ, ಕಲಿಕೆಯ ಅವಕಾಶ ಮತ್ತು ಶಿಕ್ಷಣ ಮುಂದುವರಿಸುವ ಹಕ್ಕು ಖಚಿತಪಡಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ.
ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗಿಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸ, ವೈಚಾರಿಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಕೌಶಲ್ಯಗಳನ್ನು ಬೆಳೆಸುವ ಸಾಧನವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡುವುದು, ಶಾಲೆಗಳಲ್ಲಿ ಮೂಲಸೌಕರ್ಯ ಸುಧಾರಿಸುವುದು ಹಾಗೂ ಗುಣಮಟ್ಟದ ಬೋಧನೆ ಒದಗಿಸುವುದು ಇಂದಿನ ಪ್ರಮುಖ ಅಗತ್ಯಗಳಾಗಿವೆ.
ಶಿಕ್ಷಣದ ರಾಯಭಾರಿಯಾಗಿ ಅಪ್ಪು- ಇಂದಿಗೂ ನೆನಪಾಗುವ ಸೇವೆ : ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜ್ಕುಮಾರ್ ಅವರು ಶಿಕ್ಷಣದ ಮಹತ್ವ ಸಾರುವ ಅಭಿಯಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕರ್ನಾಟಕದ ಸರ್ವ ಶಿಕ್ಷಣ ಅಭಿಯಾನದ ರಾಯಭಾರಿಯಾಗಿ 2013-14 ಮತ್ತು 2014-15ನೇ ಸಾಲಿನಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಶಿಕ್ಷಣದ ಹಕ್ಕು ಕಾಯ್ದೆ ಕುರಿತು ಜಾಗೃತಿ ಮೂಡಿಸುವ ವಿಡಿಯೊ ಅಭಿಯಾನದಲ್ಲಿಯೂ ನಟಿ ರಾಧಿಕಾ ಪಂಡಿತ್ ಅವರೊಂದಿಗೆ ಭಾಗವಹಿಸಿದ್ದರು.
ಮಕ್ಕಳು ಶಾಲೆಗೆ ಬರಬೇಕು, ಶಿಕ್ಷಣ ಪಡೆಯಬೇಕು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಸಂದೇಶವನ್ನು ತಮ್ಮ ಜನಪ್ರಿಯತೆಯ ಮೂಲಕ ಜನರಿಗೆ ತಲುಪಿಸಿದ್ದರು. ಶಿಕ್ಷಣ ಇಲಾಖೆಗಾಗಿ ಅವರು ಯಾವುದೇ ಸಂಭಾವನೆ ಪಡೆಯದೆ ಸಹಕರಿಸಿದ್ದರು ಎಂಬುದನ್ನೂ ಅಂದಿನ ವರದಿಗಳು ಉಲ್ಲೇಖಿಸಿವೆ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ದಿನದ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿರುವ ಅಪ್ಪು ಅವರ ಹಳೆಯ ವಿಡಿಯೊ, ಶಿಕ್ಷಣದ ಪರವಾಗಿ ಅವರು ನೀಡಿದ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ.
ಒಟ್ಟಿನಲ್ಲಿ, ರಾಷ್ಟ್ರೀಯ ಶಿಕ್ಷಣ ದಿನವು ಕೇವಲ ಒಂದು ಸ್ಮರಣೆಯ ದಿನವಲ್ಲ – ಪ್ರತಿಯೊಂದು ಮಗುವಿಗೂ ಸಮಾನ ಶಿಕ್ಷಣಾವಕಾಶ ಕಲ್ಪಿಸುವ ನಮ್ಮ ಜವಾಬ್ದಾರಿಯನ್ನು ನೆನಪಿಸುವ ಸಂದರ್ಭವೂ ಹೌದು. ಶಿಕ್ಷಣದ ಬೆಳಕು ಪ್ರತಿಯೊಂದು ಮನೆಗೂ ತಲುಪಿದಾಗ ಮಾತ್ರ ಜ್ಞಾನವಂತ, ಸಮಾನತೆಯ ಮತ್ತು ಸಶಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ. ಇದೇ ಈ ದಿನದ ಮಹತ್ವದ ಸಂದೇಶವಾಗಿದೆ.





















