SK Home Ad
Home ನಮ್ಮ ಜಿಲ್ಲೆ ಕಲಬುರಗಿ ಬಸ್ ಲೈಟ್ ಕೆಟ್ಟರೂ ಕತ್ತಲೆಯಲ್ಲೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ

ಬಸ್ ಲೈಟ್ ಕೆಟ್ಟರೂ ಕತ್ತಲೆಯಲ್ಲೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ

0
58

ಕಲಬುರಗಿ–ಚಿಂಚೋಳಿ ರಾತ್ರಿ ಬಸ್ ಪದೇಪದೇ ಕೆಟ್ಟು ನಿಲ್ಲುತ್ತಿದೆ; ಹೊಸ ಬಸ್‌ಗೆ ಪ್ರಯಾಣಿಕರ ಆಗ್ರಹ

ಕಲಬುರಗಿ: ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುವ ರೂಟ್ ನಂ. 83ರ ರಾತ್ರಿ ಪಾಳಿಯ ಕೊನೆಯ ಬಸ್ ಕಳೆದ ಹಲವು ತಿಂಗಳಿನಿಂದ ಪದೇಪದೇ ಕೆಟ್ಟು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಈ ಮಾರ್ಗಕ್ಕೆ ಕೂಡಲೇ ಹೊಸ ಬಸ್‌ನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಹಾಗೂ ನಿತ್ಯ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮಾಹಿತಿಯ ಪ್ರಕಾರ, KA-1985 ಸಂಖ್ಯೆಯ ಬಸ್ ಪ್ರತಿದಿನ ರಾತ್ರಿ 7.30ಕ್ಕೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಚಿಂಚೋಳಿಗೆ ಹೊರಡುತ್ತದೆ. ಆದರೆ, ಬಸ್ ಆಗಾಗ್ಗೆ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಇದನ್ನೂ ಓದಿ: ಆಹಾರ ನಿಯಮ ಉಲ್ಲಂಘನೆ: 106Kg ಕೃತಕ ಹಸಿರು ಬಟಾಣಿ ಸೀಜ್!

85 ಕಿ.ಮೀ. ಪ್ರಯಾಣಕ್ಕೆ ಮೂರು ಗಂಟೆ : ಕಲಬುರಗಿಯಿಂದ ಚಿಂಚೋಳಿ ಕೇಂದ್ರಸ್ಥಾನಕ್ಕೆ ಸುಮಾರು 85 ಕಿಲೋಮೀಟರ್ ದೂರವಿದ್ದರೂ, ಬಸ್‌ನ ತಾಂತ್ರಿಕ ಸಮಸ್ಯೆಗಳು ಮತ್ತು ವಿಳಂಬದಿಂದ ಪ್ರಯಾಣಿಕರು ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರಿಗೆ ಇದು ಹೆಚ್ಚಿನ ತೊಂದರೆಯಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಮಳೆಗಾಲದಲ್ಲಿ ಮತ್ತಷ್ಟು ಆತಂಕ : ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಮಾರ್ಗದ ಹಲವೆಡೆ ಸಮರ್ಪಕ ಬೀದಿ ದೀಪಗಳಿಲ್ಲದ ಕಾರಣ, ರಾತ್ರಿ ವೇಳೆ ಬಸ್ ಕೆಟ್ಟು ನಿಂತರೆ ಪ್ರಯಾಣಿಕರು ಕತ್ತಲೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: ಮೀಸಲಾತಿಗೆ ಜಾತಿಗಿಂತ ಆರ್ಥಿಕ ಸ್ಥಿತಿ ಮುಖ್ಯ: ಶ್ರೀಶೈಲ ಜಗದ್ಗುರುಗಳು

ಜೀವ ಕೈಯಲ್ಲಿ ಹಿಡಿದು ಪ್ರಯಾಣ : ರಾತ್ರಿ ಪಾಳಿಯ ಕೊನೆಯ ಬಸ್ ಆಗಿರುವುದರಿಂದ ಬೇರೆ ಯಾವುದೇ ಪರ್ಯಾಯ ಸಾರಿಗೆ ವ್ಯವಸ್ಥೆ ಸಿಗುವುದು ಕಷ್ಟವಾಗಿದೆ. ಹೀಗಾಗಿ ಅನಿವಾರ್ಯವಾಗಿ ಇದೇ ಬಸ್‌ನಲ್ಲಿ ಪ್ರಯಾಣಿಸಬೇಕಾಗಿರುವ ಪ್ರಯಾಣಿಕರು “ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಬಸ್ ನೀಡುವಂತೆ ಒತ್ತಾಯ : ರೂಟ್ ನಂ. 83ರಲ್ಲಿ ಸಂಚರಿಸುತ್ತಿರುವ ಹಳೆಯ ಬಸ್‌ನ್ನು ಬದಲಿಸಿ, ತಾಂತ್ರಿಕವಾಗಿ ಸುಸ್ಥಿತಿಯಲ್ಲಿರುವ ಹೊಸ ಬಸ್ ಒದಗಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಅಲ್ಲದೆ, ಬಸ್‌ಗಳ ನಿಯಮಿತ ನಿರ್ವಹಣೆ ಹಾಗೂ ತಾಂತ್ರಿಕ ಪರಿಶೀಲನೆ ನಡೆಸುವ ಮೂಲಕ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪ್ರಯಾಣಿಕರ ಸುರಕ್ಷತೆ ಮತ್ತು ಸಮಯಪಾಲನೆಯನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.