SK Home Ad
Home ನಮ್ಮ ಜಿಲ್ಲೆ ಬೆಂಗಳೂರು ರೈತರ ಸಂಕಷ್ಟ: ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ

ರೈತರ ಸಂಕಷ್ಟ: ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ

0
7

ಬೆಂಗಳೂರು: ನೂತನ ಕೃಷಿ ಸಚಿವ ನರೇಂದ್ರಸ್ವಾಮಿ ಅವರು ಮಾಡಿರುವ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ನರೇಂದ್ರಸ್ವಾಮಿ ಅವರ ಮನವಿ ಮೇರೆಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬಂದು ಯಾವುದಾದರೊಂದು ಬರಪೀಡಿತ ಜಿಲ್ಲೆಗೆ ಭೇಟಿ ನೀಡುವುದಾಗಿ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ.

ನರೇಂದ್ರಸ್ವಾಮಿ ಅವರು ದೆಹಲಿಗೆ ತೆರಳಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ರಾಜ್ಯದ ಬರದ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜ್ಯದ ಕೃಷಿ ಸಮಸ್ಯೆಗಳು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್ ಕೊನೆಯವರೆಗೆ ಅವಧಿ ವಿಸ್ತರಣೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದನ್ನು ನರೇಂದ್ರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ.

ಸಮಾಲೋಚನೆ ವೇಳೆ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕಕ್ಕೆ ಭೇಟಿ ಕೊಡುವುದು ಮಾತ್ರವಲ್ಲದೆ ಕರ್ನಾಟಕದಲ್ಲಿ ಮಳೆಯ ಅಭಾವದಿಂದಾಗಿ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಕೃಷಿ ವಿಮಾ ಅವಧಿ ಮುಕ್ತಾಯವಾಗುತ್ತಿರುವುದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 666 ಕೃಷಿ ವಿಮಾ ಘಟಕಗಳಲ್ಲಿ ಮಧ್ಯಂತರ ಪರಿಹಾರ ಕೊಡಲು ಆದೇಶ ನೀಡಲಾಗಿದೆ. ಕೇಂದ್ರ ಪುರಸ್ಕೃತ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದೆ. ಜೊತೆಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ರಾಜ್ಯದ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಮಳೆಯೇ ಕಾಪಾಡಬೇಕು: ತಮಿಳುನಾಡಿಗೆ ನೀರು ಬಿಡುವುದರ ಜೊತೆಗೆ ರೈತರ ಬೆಳೆಗೆ ನೀರು ಬಿಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನರೇಂದ್ರಸ್ವಾಮಿ ಅವರು, ರಾಜ್ಯದ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವ ವಿಚಾರದಲ್ಲಿ ಯಾವುದನ್ನು ಮುಚ್ಚಿಡುವ ಅಗತ್ಯವಿಲ್ಲ. ಕೆಆರ್​ಎಸ್ ಜಲಾಶಯದಲ್ಲಿ ಕೇವಲ 109 ಅಡಿ ನೀರಿದೆ. ಇದು ರಾಜ್ಯದ ರೈತರು ಒಂದು ಬೆಳೆ ಬೆಳೆಯುವುದಕ್ಕೆ ಸಾಲುವುದಿಲ್ಲ. ಇದರ ನಡುವೆ ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದು ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿದೆ. ಈ ಸಮಸ್ಯೆಗೆ ಈಗ ಮಳೆಯೇ ಪರಿಹಾರ ಎಂದು ಹೇಳಿದರು.

ಕೃಷಿ ಚಟುವಟಿಕೆಗಳಿಗೆ ನೀರು ಬಿಡುವುದು ಕಷ್ಟಕರವಾದದ್ದಾಗಿದೆ. ಲಭ್ಯತೆ ಆಧಾರದ ಮೇಲೆ ನೀರು ಬಿಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.