SK Home Ad
Home ಸುದ್ದಿ ದೇಶ ಕೆರೆಯ ನೀರೇ ಆಶ್ರಯವಾಗಿದ್ದ ಬಾಲಕನ ನೆರವಿಗೆ ಅನಂತ್ ಅಂಬಾನಿ

ಕೆರೆಯ ನೀರೇ ಆಶ್ರಯವಾಗಿದ್ದ ಬಾಲಕನ ನೆರವಿಗೆ ಅನಂತ್ ಅಂಬಾನಿ

0
92
ವೈರಲ್ ವಿಡಿಯೋ ಕಂಡು ಕರಗಿದ ಅನಂತ್ ಅಂಬಾನಿ ಹೃದಯ; ಬಡ ಬಾಲಕನಿಗೆ ಉಚಿತ ಚಿಕಿತ್ಸೆ

ಕೆರೆಯಲ್ಲೇ 24 ಗಂಟೆ ವಾಸಿಸುತ್ತಿದ್ದ ಬಾಲಕನಿಗೆ ನೀರಿನಿಂದ ಹೊರಬಂದರೆ ದೇಹದಲ್ಲಿ ತೀವ್ರ ಉರಿ – ವೈರಲ್ ವಿಡಿಯೋ ಕಂಡು ಕರಗಿದ ಅನಂತ್ ಅಂಬಾನಿ – ಮುಂಬೈ ಆಸ್ಪತ್ರೆಗೆ ಏರ್‌ಲಿಫ್ಟ್ – ಬಡ ಬಾಲಕನಿಗೆ ಉಚಿತ ಚಿಕಿತ್ಸೆ

ಪಶ್ಚಿಮ ಬಂಗಾಳ: ವಿಚಿತ್ರ ಆರೋಗ್ಯ ಸಮಸ್ಯೆಯಿಂದಾಗಿ ಮನೆಯಲ್ಲಿರುವುದಕ್ಕಿಂತ ಕೆರೆಯ ನೀರಿನಲ್ಲೇ ಹೆಚ್ಚಿನ ಸಮಯ ಕಳೆಯಬೇಕಾಗಿದ್ದ ಪಶ್ಚಿಮ ಬಂಗಾಳದ ಬಡ ಬಾಲಕನ ನೆರವಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಧಾವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನ ಸ್ಥಿತಿಯ ವಿಡಿಯೋಗಳು ವೈರಲ್ ಆದ ಬಳಿಕ, ಆತನಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಅನಂತ್ ಅಂಬಾನಿ ಮುಂದಾಗಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾ ಗ್ರಾಮದ ನಿವಾಸಿ ಇಕ್ಬಾಲ್ ಎಂಬ ಬಾಲಕ ಹಲವು ದಿನಗಳಿಂದ ಕೆರೆಯ ನೀರಿನಲ್ಲೇ ಹಗಲು-ರಾತ್ರಿ ಕಳೆಯುತ್ತಿದ್ದ ಎನ್ನಲಾಗಿದೆ. ನೀರಿನಿಂದ ಹೊರಬಂದಾಗ ದೇಹದಾದ್ಯಂತ ತೀವ್ರ ಉರಿ ಹಾಗೂ ಸೂಜಿ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುತ್ತದೆ ಎಂದು ಬಾಲಕ ಹೇಳಿದ್ದಾನೆ. ಈ ನೋವನ್ನು ತಾಳಲಾರದೆ ಆತ ಮತ್ತೆ ನೀರಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ವರದಿಯಾಗಿದೆ.

ಇಕ್ಬಾಲ್ ಕೆರೆಯಲ್ಲೇ ಕುಳಿತು ತಿಂಡಿ ತಿನ್ನುತ್ತಿರುವ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಾಲಕನ ಈ ಅಸಹಾಯಕ ಸ್ಥಿತಿಯ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ದೇಶದಾದ್ಯಂತ ಹಲವು ಮಂದಿ ಆತನಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಬಡ ಕುಟುಂಬಕ್ಕೆ ಸೇರಿದ ಬಾಲಕನ ಪೋಷಕರು ಈ ಹಿಂದೆ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವ ಹಣದ ಕೊರತೆಯಿಂದ ಕುಟುಂಬ ಸಂಕಷ್ಟದಲ್ಲಿತ್ತು ಎನ್ನಲಾಗಿದೆ.

ವೈರಲ್ ವಿಡಿಯೋ ಕಂಡು ನೆರವಿಗೆ ಬಂದ ಅನಂತ್ ಅಂಬಾನಿ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಬಾಲಕನ ಪರಿಸ್ಥಿತಿಯನ್ನು ಗಮನಿಸಿದ ಅನಂತ್ ಅಂಬಾನಿ, ಆತನಿಗೆ ತುರ್ತು ವೈದ್ಯಕೀಯ ನೆರವು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಬಾಲಕನನ್ನು ವಿಶೇಷ ವೈದ್ಯಕೀಯ ತಂಡದೊಂದಿಗೆ ವಿಮಾನದ ಮೂಲಕ ಮುಂಬೈಗೆ ಕರೆತರಲಾಗಿದ್ದು, ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬಾಲಕನಿಗೆ ಅಗತ್ಯವಿರುವ ರೋಗನಿರ್ಣಯ ಪರೀಕ್ಷೆಗಳು, ವೈದ್ಯಕೀಯ ಚಿಕಿತ್ಸೆ ಹಾಗೂ ಮುಂದಿನ ಹಂತದ ಚಿಕಿತ್ಸೆಗೆ ಬೇಕಾಗುವ ವೆಚ್ಚವನ್ನು ಭರಿಸುವುದಾಗಿ ಅನಂತ್ ಅಂಬಾನಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ನಿರಂತರ ನೀರಿನಲ್ಲಿರುವುದರಿಂದ ಆರೋಗ್ಯದ ಅಪಾಯ : ಚರ್ಮರೋಗ ತಜ್ಞರ ಪ್ರಕಾರ, ದೀರ್ಘಕಾಲ ನಿರಂತರವಾಗಿ ನೀರಿನಲ್ಲಿರುವುದರಿಂದ ಚರ್ಮವು ಅತಿಯಾಗಿ ಮೃದುವಾಗುವ Skin Maceration ಸಮಸ್ಯೆ ಉಂಟಾಗಬಹುದು. ಇದರಿಂದ ಚರ್ಮದಲ್ಲಿ ಬಿರುಕು, ಗಾಯಗಳು ಹಾಗೂ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕಿನ ಅಪಾಯ ಹೆಚ್ಚಾಗಬಹುದು.

ಹೀಗಾಗಿ ಬಾಲಕನ ಮೂಲ ಆರೋಗ್ಯ ಸಮಸ್ಯೆ ಏನು ಎಂಬುದನ್ನು ಪತ್ತೆಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಮುಂಬೈನ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಇಕ್ಬಾಲ್‌ಗೆ ಅಗತ್ಯ ಪರೀಕ್ಷೆಗಳು ನಡೆಯುತ್ತಿದ್ದು, ಆತನ ಆರೋಗ್ಯ ಸಮಸ್ಯೆಯ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.

ಬಾಲಕನ ಪರಿಸ್ಥಿತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರೊಂದಿಗೆ ಆತನ ಸಂಕಷ್ಟ ದೇಶದ ಗಮನ ಸೆಳೆದಿತ್ತು. ಇದೀಗ ಚಿಕಿತ್ಸೆಗಾಗಿ ಮುಂಬೈಗೆ ಕರೆತಂದಿರುವುದು ಕುಟುಂಬದಲ್ಲಿ ಹೊಸ ಭರವಸೆ ಮೂಡಿಸಿದೆ.

ಬಡ ಕುಟುಂಬದ ಬಾಲಕನ ಕಷ್ಟಕ್ಕೆ ಸ್ಪಂದಿಸಿ ವೈದ್ಯಕೀಯ ನೆರವು ಒದಗಿಸಲು ಮುಂದಾಗಿರುವ ಅನಂತ್ ಅಂಬಾನಿ ಅವರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಕನಿಗೆ ಸೂಕ್ತ ಚಿಕಿತ್ಸೆ ದೊರೆತು ಆರೋಗ್ಯವಾಗಿ ಮರಳಿ ಮನೆಗೆ ತೆರಳಲಿ ಎಂಬ ಆಶಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.