SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ ಸೆಂಟ್ರಲ್ ಜೈಲಿನ ಗೋಡೆ ಹಾರಿ ಮೂವರು ಕೈದಿಗಳು ಎಸ್ಕೇಪ್

ಕಲಬುರಗಿ ಸೆಂಟ್ರಲ್ ಜೈಲಿನ ಗೋಡೆ ಹಾರಿ ಮೂವರು ಕೈದಿಗಳು ಎಸ್ಕೇಪ್

0
164
File Photo

ಸಂ.ಕ. ಸಮಾಚಾರ ಕಲಬುರಗಿ: ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಜೈಲಿನ ಎತ್ತರದ ಕಾಂಪೌಂಡ್ ಗೋಡೆಯನ್ನು ಹಾರಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಜೈಲು ಆಡಳಿತ ಮತ್ತು ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳು ಮೂಡಿವೆ.

ಪರಾರಿಯಾದ ಕೈದಿಗಳನ್ನು ಮಸ್ತಾನ್, ಸಂತೋಷ್ ಮತ್ತು ಸಾಗರ್ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಈ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಜೈಲಿನ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳ ಕಣ್ತಪ್ಪಿಸಿ ಮೂವರು ಕೈದಿಗಳು ಪರಾರಿಯಾಗಿರುವುದು ಕಾರಾಗೃಹ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವಶ

ಮಾಹಿತಿಯ ಪ್ರಕಾರ, ಮೂವರು ಕೈದಿಗಳು ಜೈಲಿನ ಎತ್ತರದ ಗೋಡೆಯನ್ನು ಹಾರಿ ಹೊರಬಂದಿದ್ದಾರೆ. ಘಟನೆಯ ಬಗ್ಗೆ ಬೆಳಗಿನ ಜಾವ ಮಾಹಿತಿ ದೊರಕುತ್ತಿದ್ದಂತೆಯೇ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡು ಜೈಲಿನ ಸುತ್ತಮುತ್ತ ಹಾಗೂ ವಿವಿಧ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಫರಹತಾಬಾದ್ ಪೊಲೀಸ್ ಠಾಣೆ ಪೊಲೀಸರು ಹಾಗೂ ಕಾರಾಗೃಹ ಸಿಬ್ಬಂದಿ ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ನಗರದ ಹೊರವಲಯಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಕೂಡ ಪರಾರಿಯಾದ ಕೈದಿಗಳ ಮಾಹಿತಿ ರವಾನಿಸಲಾಗಿದ್ದು, ಶೀಘ್ರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ CEO ನೇಮಕ: ಅರ್ಜಿ ಆಹ್ವಾನಿಸಿದ ಟ್ರಸ್ಟ್

ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆಯ ಮೇಲೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಷ್ಟೊಂದು ಎತ್ತರದ ಗೋಡೆಯನ್ನು ಹಾರಿ ಕೈದಿಗಳು ಹೇಗೆ ಪರಾರಿಯಾಗಲು ಸಾಧ್ಯವಾಯಿತು? ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ಪೂರ್ವಯೋಜಿತವಾಗಿ ಪರಾರಿಯಾಗಿದ್ದಾರೆಯೇ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಜೈಲಿನ ಭದ್ರತಾ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ. ಪರಾರಿಯಾದ ಕೈದಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.