ಅಯೋಧ್ಯೆ ರಾಮಮಂದಿರ ನಿಧಿ ದುರ್ಬಳಕೆ ಆರೋಪ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಇದೇ ವೇಳೆ ಜಾತಿ ಗಣತಿ, ಗ್ಯಾರಂಟಿ ಯೋಜನೆಗಳು ಹಾಗೂ ಆರ್ಥಿಕ ಆಧಾರಿತ ಮೀಸಲಾತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿರುವ ದೇಣಿಗೆಯ ಹಣದ ದುರ್ಬಳಕೆ ಹಾಗೂ ಅವ್ಯವಹಾರದ ಆರೋಪಗಳ ಕುರಿತು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಪ್ರಕರಣದ ಬಗ್ಗೆ ಸರ್ಕಾರವು ಯಾವುದೇ ಪಕ್ಷಪಾತವಿಲ್ಲದೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಶನಿವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಇತ್ತೀಚೆಗೆ ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿದ್ದ ಕಾರಣ ಈ ವಿಷಯದ ಸಂಪೂರ್ಣ ಮಾಹಿತಿ ತಿಳಿದಿರಲಿಲ್ಲ. ಆದರೆ ಯಾರ ಮೇಲೆಯೂ ಆರೋಪ ಮಾಡುವ ಮುನ್ನ ಸತ್ಯಾಸತ್ಯತೆಗಳನ್ನು ಪರಿಶೀಲಿಸುವುದು ಅತ್ಯಗತ್ಯ ಎಂದು ಹೇಳಿದರು.
ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ
ಭಕ್ತರು ತಮ್ಮ ನಂಬಿಕೆ, ಭಕ್ತಿ ಹಾಗೂ ಧಾರ್ಮಿಕ ಭಾವನೆಯಿಂದ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಅಂತಹ ಹಣದ ದುರ್ಬಳಕೆ ಅಥವಾ ಅವ್ಯವಹಾರ ನಡೆದಿದ್ದರೆ ಅದು ಕೇವಲ ಆರ್ಥಿಕ ಅಪರಾಧವಲ್ಲ, ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಧಾರ್ಮಿಕ ಸಂಸ್ಥೆಗಳ ಪಾವಿತ್ರ್ಯತೆ ಹಾಗೂ ಸಾರ್ವಜನಿಕರ ವಿಶ್ವಾಸ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಯಾವುದೇ ಧಾರ್ಮಿಕ ಸಂಸ್ಥೆ ಅಥವಾ ಸರ್ಕಾರ ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯ ಮಾಡಬಾರದು. ಆರೋಪಗಳಲ್ಲಿ ಸತ್ಯಾಂಶ ಕಂಡುಬಂದರೆ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅಥವಾ ಯಾವುದೇ ಸಂಸ್ಥೆಗೆ ಸೇರಿದವರಾಗಿದ್ದರೂ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಧಾರ್ಮಿಕ ಸಂಸ್ಥೆಗಳ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಜಾತಿ ಗಣತಿ ಕುರಿತು ಪಂಚಪೀಠಾಧೀಶರ ಸಭೆ : ಇದೇ ವೇಳೆ ಕೇಂದ್ರ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ವೀರಶೈವ-ಲಿಂಗಾಯತ ಸಮುದಾಯದವರು ಜಾತಿ ಗಣತಿಯಲ್ಲಿ ಯಾವ ರೀತಿಯ ವಿವರ ದಾಖಲಿಸಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಪಂಚಪೀಠಾಧೀಶರ ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು
ಈ ಸಭೆಯನ್ನು ದಾವಣಗೆರೆಯಲ್ಲಿ ನಡೆಸುವ ಉದ್ದೇಶವಿದ್ದು, ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಸಮಾನ ಮನಸ್ಕ ವಿರಕ್ತ ಪೀಠಗಳ ಶ್ರೀಗಳೊಂದಿಗೆ ಚರ್ಚಿಸಿದ ಬಳಿಕ ಸಮುದಾಯಕ್ಕೆ ಅಧಿಕೃತ ಮಾರ್ಗಸೂಚಿ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ನಡೆ ಕುರಿತು ಪ್ರಶ್ನೆ : ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ನಡೆಸುವ ಅಧಿಕಾರದ ಕುರಿತು ಕಾನೂನು ತಜ್ಞರು ಪ್ರಶ್ನೆ ಎತ್ತಿರುವುದನ್ನು ಉಲ್ಲೇಖಿಸಿದರು. ಈ ವಿಚಾರ ಈಗ ನ್ಯಾಯಾಲಯದ ಪರಿಶೀಲನೆಯಲ್ಲಿರುವಾಗ ವರದಿ ಬಿಡುಗಡೆ ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ನ್ಯಾಯಾಂಗವೇ ನಿರ್ಧರಿಸಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ತಪ್ಪಿದ ಮುಂಗಾರು ಅಬ್ಬರ: ಕೃಷಿ, ವಿದ್ಯುತ್ ಉತ್ಪಾದನೆಗೆ ಹೆಚ್ಚಿದ ಆತಂಕ
ಕೇಂದ್ರ ಸರ್ಕಾರವೇ ದೇಶವ್ಯಾಪಿ ಜಾತಿ ಗಣತಿ ಪ್ರಕ್ರಿಯೆ ಆರಂಭಿಸಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪ್ರತ್ಯೇಕ ಕ್ರಮದ ಅಗತ್ಯವೇನು ಎಂಬುದನ್ನು ಮರುಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳು ಮತ್ತು ಮೀಸಲಾತಿ ಕುರಿತು ಅಭಿಪ್ರಾಯ : ಗ್ಯಾರಂಟಿ ಯೋಜನೆಗಳ ಸರ್ವೆಯಲ್ಲಿ ಜಾತಿ ವಿವರ ಕೇಳುತ್ತಿರುವ ವಿಷಯದ ಮೇಲೂ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದರು. ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಜಾತಿಯ ಬದಲು ಆರ್ಥಿಕ ಪರಿಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಕ್ರಮ ಸಾಗಾಟಕ್ಕೆ ಬ್ರೇಕ್: ₹97 ಸಾವಿರ ಮೌಲ್ಯದ ಪಡಿತರ ಅಕ್ಕಿ ಜಪ್ತಿ
ಇಂದಿನ ಸಮಾಜದಲ್ಲಿ ಎಲ್ಲಾ ಜಾತಿಗಳಲ್ಲಿಯೂ ಆರ್ಥಿಕವಾಗಿ ಬಲಿಷ್ಠರು ಹಾಗೂ ಬಡವರು ಇದ್ದಾರೆ. ಆದ್ದರಿಂದ ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳು ಜಾತಿಯನ್ನು ಆಧಾರವಾಗಿಟ್ಟುಕೊಳ್ಳುವುದಕ್ಕಿಂತ ಆರ್ಥಿಕ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ನೀಡಿದರೆ ಹೆಚ್ಚು ನ್ಯಾಯಸಮ್ಮತವಾಗಿರುತ್ತದೆ ಎಂದು ಸ್ವಾಮೀಜಿ ಪ್ರತಿಪಾದಿಸಿದರು.






















