SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕೆಪಿಎಸ್‌ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಸೇರಿ 21 ಸ್ಥಳಗಳಲ್ಲಿ ಇಡಿ ದಾಳಿ

ಕೆಪಿಎಸ್‌ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಸೇರಿ 21 ಸ್ಥಳಗಳಲ್ಲಿ ಇಡಿ ದಾಳಿ

0
42

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹು ಅವರ ಇಲ್ಲಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಕಲಬುರಗಿ ನಗರದ ಆನಂದ ಹೋಟೆಲ್ ಬಳಿಯಿರುವ ಸಾಹು ನಿವಾಸಕ್ಕೆ ಬಂದ ಅಧಿಕಾರಿಗಳು ಮನೆಯಲ್ಲಿನ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.

ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಕರ್ನಾಟಕ ಹಾಗೂ ಗುಜರಾತ್‌ನ ವಿವಿಧೆಡೆ ಒಟ್ಟು 21 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಸ್. ಶಿವಶಂಕರಪ್ಪ ಸಾಹುಕಾರ್ ಅವರ ಬೆಂಗಳೂರಿನ ನಿವಾಸ, ಕಲಬುರಗಿ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೆಪಿಎಸ್‌ಸಿ ಕಚೇರಿ, ಆಯೋಗದ ಸದಸ್ಯರು, ಮಧ್ಯವರ್ತಿಗಳು ಹಾಗೂ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಕೆಲ ಅಭ್ಯರ್ಥಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿಯೂ ಶೋಧ ನಡೆಸಲಾಗಿದೆ ಎಂದು ವರದಿಯಾಗಿದೆ.

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ಭಾರಿ ಪ್ರಮಾಣದ ಹಣ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಪ್ರತಿ ಅಭ್ಯರ್ಥಿಯಿಂದ ಸುಮಾರು ₹70 ರಿಂದ ₹80 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂಬ ಆರೋಪ ಪ್ರಕರಣದಲ್ಲಿದೆ. ಉತ್ತರ ಪತ್ರಿಕೆ/ಒಎಂಆರ್‌ ಹಾಳೆಗಳಲ್ಲಿ ಅಕ್ರಮ ತಿದ್ದುಪಡಿ ಹಾಗೂ ಕೆಲ ಅಭ್ಯರ್ಥಿಗಳಿಗೆ ಅಕ್ರಮವಾಗಿ ಅನುಕೂಲ ಮಾಡಿಕೊಟ್ಟಿರುವ ಆರೋಪಗಳೂ ಕೇಳಿಬಂದಿವೆ.

ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಅಕ್ರಮದ ಮೂಲಕ ಸಂಗ್ರಹವಾಗಿರಬಹುದಾದ ಹಣದ ವರ್ಗಾವಣೆ ಹಾಗೂ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸುವ ಉದ್ದೇಶದಿಂದ ಇಡಿ ಶೋಧ ಕಾರ್ಯಾಚರಣೆ ಕೈಗೊಂಡಿದೆ ಎನ್ನಲಾಗಿದೆ.

ಇಡಿ ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳಲ್ಲಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು, ಹಣಕಾಸು ವ್ಯವಹಾರಗಳ ವಿವರಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರ್ಯಾಚರಣೆಯ ವೇಳೆ ಲಭ್ಯವಾಗುವ ದಾಖಲೆಗಳು ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯುವ ಸಾಧ್ಯತೆಯಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜುಲೈ 13ರಂದು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿತ್ತು. ಇದೀಗ ಹಣಕಾಸು ಅಕ್ರಮದ ಆಯಾಮದ ಕುರಿತು ಇಡಿ ತನಿಖೆ ಆರಂಭಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.