ದಾವಣಗೆರೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟಿದ್ದ ಮೀಸಲಾತಿ ತಡೆಯಾಜ್ಞೆಯನ್ನು ಕೂಡಲೇ ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ (ಎಸ್‌ಟಿ) ಸಮುದಾಯಕ್ಕೆ ಶೇ. 3ರಿಂದ ಶೇ. 7ಕ್ಕೆ ಹಾಗೂ ಎಸ್‌ಸಿ ಸಮುದಾಯಕ್ಕೆ ಶೇ. 15 ರಿಂದ ಶೇ. 17ಕ್ಕೆ ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ಹೆಚ್ಚುವರಿ ಮೀಸಲಾತಿ ಕಸಿದುಕೊಳ್ಳುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೊಸಪೇಟೆಯಲ್ಲಿ ಯುವಕನ ಬರ್ಬರ ಹತ್ಯೆ
ಸರ್ಕಾರದ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ ಅವರು, ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ತಕ್ಷಣವೇ ಕೋರ್ಟ್‌ಗೆ ಹೋಗಿ ನ್ಯಾಯಾಲಯದಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಅದನ್ನು ಬಿಟ್ಟು ಕೇವಲ ‘9ನೇ ಶೆಡ್ಯೂಲ್’ ನೆಪ ಹೇಳಿ ಸಮುದಾಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಸರ್ಕಾರದ ಕಿವಿ ಹಿಂಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಕಡಿತಗೊಳಿಸಿದ ಪರಿಣಾಮ ಪ್ರಸ್ತುತ ಶಾಲಾ-ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಎಸ್‌ಟಿ ಸಮುದಾಯದ ಮಕ್ಕಳಿಗೆ ಕೇವಲ ಶೇ. 3ರಷ್ಟು ಮಾತ್ರ ಅವಕಾಶ ಸಿಗುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ನೀಟ್ ಹಗರಣ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆ
ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಸಚಿವರು ಹಾಗೂ ಶಾಸಕರಿದ್ದರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ದೂರಿದ ಅವರು, ಬಿಜೆಪಿಯಿಂದ ಈ ಬಾರಿ ಯಾರೂ ಗೆದ್ದಿಲ್ಲದಿರಬಹುದು. ಆದರೆ ಕಾಂಗ್ರೆಸ್‌ನಿಂದ ಗೆದ್ದಿರುವ ಶಾಸಕರು ತಮ್ಮ ಸ್ವಾರ್ಥ ಬದಿಗಿಟ್ಟು, ಸಮುದಾಯದ ಹಿತದೃಷ್ಟಿಯಿಂದ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಬೆಂಚ್ ತಟ್ಟಿ ಮೀಸಲಾತಿ ಮರಳಿ ಕೊಡಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಈ ಕಾಂಗ್ರೆಸ್ ಸರ್ಕಾರ ಮೀಸಲಾತಿ ನೀಡಲು ವಿಫಲವಾದರೆ, 2028ರಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ನೀಡಿದ್ದ ಹಳೆಯ ಮೀಸಲಾತಿಯನ್ನು ಯಥಾಸ್ಥಿತಿಯಲ್ಲಿ ಮರು ಸ್ಥಾಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.





















