SK Home Ad
Home ನಮ್ಮ ಜಿಲ್ಲೆ ಹಾವೇರಿ ಪರಿಷತ್ ಚುನಾವಣೆ ಫಲಿತಾಂಶ, ರಾಜ್ಯದ ಜನತೆಯ ಮಧ್ಯಂತರ ತೀರ್ಪು

ಪರಿಷತ್ ಚುನಾವಣೆ ಫಲಿತಾಂಶ, ರಾಜ್ಯದ ಜನತೆಯ ಮಧ್ಯಂತರ ತೀರ್ಪು

0
43

ಹಾವೇರಿ:​ ಪಶ್ಚಿಮ ಪದವೀಧರರ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಅಭೂತಪೂರ್ವ ಜಯ ಸಾಧಿಸಿದ್ದು ರಾಜ್ಯ ಸರ್ಕಾರದ ಜನವಿರೋಧಿ ಆಡಳಿತಕ್ಕೆ ತಕ್ಕ ಉತ್ತರ ನೀಡಿದ್ದು, ಇದು ರಾಜ್ಯದ ಜನತೆಯ ಮಧ್ಯಂತರ ತೀರ್ಪಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಜಯ ಗಳಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಂಡು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 19 ಜಿಲ್ಲೆಗಳು ಮತ್ತು ಬೆಂಗಳೂರು ಮಹಾನಗರ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ನಡೆದ ಈ ಚುನಾವಣೆ ಫಲಿತಾಂಶವು ಕರ್ನಾಟಕದ ಜನತೆಯ ಮಧ್ಯಂತರ ತೀರ್ಪಾಗಿದೆ. ಈ ಫಲಿತಾಂಶ ಭ್ರಷ್ಟ ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆದು, ಜನಪರ ಸರ್ಕಾರ ಬರಬೇಕೆನ್ನುವುದು ಸ್ಪಷ್ಡ ಸಂದೇಶ ಇದೆ. ಹೀಗಾಗಿ ಇದು ರಾಜಕೀಯವಾಗಿ ಬಹಳ ಮಹತ್ವ ಪಡೆದಿದೆ ಎಂದು ಹೇಳಿದರು.

ಇವಿಎಂ ಹಾಗೂ ಬ್ಯಾಲೆಟ್ ಪೇಪರ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಎನ್ನುವ ಅವರು, ವಿರೋಧ ಪಕ್ಷಗಳು ಅಥವಾ ಬಿಜೆಪಿ ಗೆದ್ದಾಗ ಇವಿಎಂ ಹ್ಯಾಕ್ ಮಾಡುತ್ತಾರೆ ಎಂದು ಸುಳ್ಳು ಆರೋಪ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.

ದಿಕ್ಸೂಚಿ ಚುನಾವಣೆ ಫಲಿತಾಂಶ: ಮುಂಬರುವ ಚುನಾವಣೆಗೆ ಈ ಚುನಾವಣೆಯು ದಿಕ್ಸೂಚಿಯಾಗಿದೆ ಎಂದು ವಿಪಕ್ಷಗಳು ಹೇಳಿದ್ದವು, ಆದರೆ ಈಗ ದಿಕ್ಸೂಚಿ ಏನು ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

​ಮತಗಳ ಅಕ್ರಮ ಮತ್ತು ದುರ್ಬಳಕೆ: ಹಿಂದಿನ ಚುನಾವಣೆಯಲ್ಲಿ 67,000 ಮತಗಳಿದ್ದವು, ಆದರೆ ಇತ್ತೀಚೆಗೆ ಮತಗಳು ಹೆಚ್ಚಾಗಿದ್ದರೂ 10,000ಕ್ಕೂ ಅಧಿಕ ಮತಗಳು ಅಮಾನ್ಯ ಆಗಿರುವುದು ಹಾಗೂ ಒಂದೇ ಅಭ್ಯರ್ಥಿಯ ಮತಗಳ ಮುಂದೆ ಟಿಕ್ ಹಾಕಿರುವುದು ಬಹಳ ದುರ್ದೈವಕರ ಮತ್ತು ತಪ್ಪಾದ ಕೆಲಸ ಎಂದು ಹೇಳಿದ್ದಾರೆ.

​ಚುನಾವಣಾ ಆಯೋಗ ಸವಾಲು: ಇವಿಎಂ ಹ್ಯಾಕ್ ಮಾಡುವುದನ್ನು ಸಾಬೀತುಪಡಿಸಲು ಚುನಾವಣಾ ಆಯೋಗವು ಮುಕ್ತ ಸವಾಲು ನೀಡಿದ್ದರೂ, ಅದನ್ನು ತೋರಿಸಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇವಿಎಂ ಮತದಾನದಲ್ಲಿ ಯಾವುದೇ ಅಕ್ರಮಗಳಾಗಲು ಸಾಧ್ಯವಿಲ್ಲ. ಒಂದು ವೇಳೆ ಎಸ್‌ಐಆರ್‌ ಮತಗಳು ಸ್ವಚ್ಛವಾದರೆ ತಮ್ಮ ಬಣ್ಣ ಬಯಲಾಗುತ್ತದೆ ಮತ್ತು ಸೋಲು ಖಚಿತವಾಗುತ್ತದೆ ಎಂಬ ಭಯದಿಂದಲೇ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ನಾಟಕವಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ವೋಟ್ ಚೋರಿ: ​ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಚುನಾವಣೆಯಲ್ಲಿ ಅನ್ಯಾಯ, ಅನಾಹುತ ಹಾಗೂ ವೋಟ್ ಚೋರಿಗೆ ಅವಕಾಶವಿರುವಿದೆ. ಹಿಂದಿನ ಅನುಭವಗಳ ಪ್ರಕಾರ ಬಂಡಲ್ ಮಾಡಿ ಕಟ್ಟುಹಾಕುವಾಗ ಸಿಕ್ಕಿಬೀಳುವ ನೂರಾರು ಅಧಿಕಾರಿಗಳು ಮತ್ತು ತಪ್ಪುಗಳ ಕಾರಣದಿಂದಲೇ ಇವಿಎಂ ಬಂದಿದೆ ಎಂದು ಅವರು ವಿವರಿಸಿದ್ದಾರೆ.

​ಕಾಂಗ್ರೆಸ್‌ನ ಆಡಳಿತ ವೈಫಲ್ಯ ಮತ್ತು ಭಯ: ಕಾಂಗ್ರೆಸ್ ಸರ್ಕಾರದ ಆಡಳಿತದ ಅಧಿಕಾರಿಗಳು ಬೂತ್ ಮಟ್ಟದಿಂದ ಚುನಾವಣಾ ಆಯುಕ್ತರವರೆಗೂ ಇದ್ದರೂ, 1 ಕೋಟಿಗೂ ಅಧಿಕ ಮತದಾರರು ಕೈತಪ್ಪಿ ಹೋಗಲು ಮತದಾರರ ಮರಣ, ನಕಲಿ ಹೆಸರುಗಳು ಮತ್ತು ಬೇರೆ ರಾಜ್ಯಗಳಲ್ಲಿದ್ದವರ ಹೆಸರುಗಳನ್ನು ಸ್ವಚ್ಛಗೊಳಿಸದೆ ನೈತಿಕವಲ್ಲದ ಮತಗಳನ್ನು ಬಳಸಿಕೊಂಡಿರುವುದೇ ಕಾರಣ ಎಂದು ಆರೋಪಿಸಿದ್ದಾರೆ. ಎಸ್‌ಐಆರ್ ಮತಗಳು ಸ್ವಚ್ಛವಾದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಕಾಂಗ್ರೆಸ್ ನಾಯಕರು ಡ್ರಾಮಾ ಮಾಡುತ್ತಿದ್ದಾರೆ. ಪೀಪಲ್ಸ್ ರೆಪ್ರೆಸೆಂಟೇಟಿವ್ ಆಕ್ಟ್ ಪ್ರಕಾರ ಯಾವುದೇ ದೂರು ಅಥವಾ ಕೇಸ್ ಹಾಕಬೇಕಾದರೆ ದೂರುದಾರರು ಚುನಾವಣಾ ಆಯೋಗದ ಅಧಿಕಾರಿಯಾಗಿರಬೇಕೇ ಹೊರತು ಪೊಲೀಸ್ ಅಧಿಕಾರಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ನವೆಂಬರ್‌ನಲ್ಲಿ ಪಾದಯಾತ್ರೆ: ಚುನಾವಣೆಯಲ್ಲಿ ಮತದಾರರ ಮನವೊಲಿಸಿ ಕೆಲಸ ಮಾಡಿದ್ದರೂ ಹಣಬಲ ಹಾಗೂ ಅಧಿಕಾರಬಲದಿಂದ ಮುಂದಿನ ವಿಧಾನಸಭೆಯಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದವರಿಗೆ ಇದು ತಕ್ಕ ಉತ್ತರವಾಗಿದೆ. ಜನಪರ ಹೋರಾಟವನ್ನು ಎಂದಿಗೂ ಕೈಬಿಡುವುದಿಲ್ಲ, ಮತ್ತು ನವೆಂಬರ್ ತಿಂಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಈ ಷಡ್ಯಂತ್ರವನ್ನು ಬಯಲುಗೊಳಿಸಲು ಪಾದಯಾತ್ರೆ ನಡೆಸಲಾಗುವುದು ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

​ಸರ್ಕಾರದ ವೈಫಲ್ಯ: ಕಳೆದ ಮೂರೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲಾ ಮುಖಿಯಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಜನರನ್ನು ಪದೇ ಪದೇ ಮೋಸ ಮಾಡಲು ಸಾಧ್ಯವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಗ್ಯಾರಂಟಿಗಳ ಮುಖಾಂತರ ಹಲವು ಚುನಾವಣೆಗಳನ್ನು ಗೆಲ್ಲುತ್ತೇವೆ ಎಂಬುದು ತಪ್ಪು, ಕರ್ನಾಟಕದ ಜನತೆ ಕಾಂಗ್ರೆಸ್‌ಗೆ “ನಿಮ್ಮನ್ನು ಮನೆಗೆ ಕಳುಹಿಸುವುದೇ ಗ್ಯಾರಂಟಿ” ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

​ಕಾಂಗ್ರೆಸ್ ಕಾಕ್ರೋಚ್ ಪಾರ್ಟಿ: ಕಾಂಗ್ರೆಸ್ ಪಕ್ಷವು ಕಾಕ್ರೋಚ್ ಪಾರ್ಟಿಯ ಜೊತೆಗೆ ಸೇರಿಕೊಂಡು ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. “ಕಾಂಗ್ರೆಸ್ ಪಕ್ಷವನ್ನು ಕಾಕ್ರೋಚ್ ಪಕ್ಷದ ಜೊತೆ ವಿಲೀನಗೊಳಿಸುವುದು ಉತ್ತಮ” ಎಂದು ವ್ಯಂಗ್ಯವಾಡಿದ್ದಾರೆ.

ನಕಲಿ ಮತದಾನ ಕ್ರಮವಾಗಲಿ: ಹಾವೇರಿಯ ಮತಗಟ್ಟೆ ಸಂಖ್ಯೆ 85 ರಲ್ಲಿ ನಕಲಿ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬ್ಯಾಲೆಟ್ ಮೂಲಕ ವೋಟ್ ಚೋರಿ ಮಾಡೋದನ್ನು ಕಾಂಗ್ರೆಸ್ ತೋರಿಸಿದೆ. ವೋಟ್ ಚೋರಿ ಪ್ರಕರಣದಲ್ಲಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಪ್ರಕರಣಕ್ಕೆ ಯಾವುದೇ ತನಿಖೆಯ ಅಗತ್ಯವಿಲ್ಲ, ಸಾಕ್ಷಿಗಳೇ ಇವೆ. ರಾಜ್ಯ ಚುನಾವಣಾ ಆಯೋಗದಿಂದ ಅಧಿಕಾರಿಗಳ ವಿರುದ್ಧ ಕ್ರಮ ಆಗಲಿ.

ಮಹಿಳೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡುತ್ತೇನೆ. ವೋಟ್ ಚೋರಿ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವೇಕೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಏನು ಮಾಡುತ್ತಿದೆ. ನೀತಿ ಸಂಹಿತೆ ವೇಳೆ ಭಾಷಣ ಮಾಡಿದರೆ ನಮಗೆ ನೋಟಿಸ್ ನೀಡುತ್ತೀರಿ. ಆದರೆ ಇಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಇನ್ನೂ ಸಹ ಕ್ರಮವಿಲ್ಲ. ಇದರಿಂದಾಗಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ.

ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೆ ಖಾಸಗಿಯಾಗಿ ದೂರು ನೀಡಲು ಬೂತ್ ಏಜೆಂಟ್ ಬರಲೇಬೇಕು ಎಂಬ ನಿಯಮವಿಲ್ಲ. ತಪ್ಪು ಮಾಡಿಲ್ಲ ಎಂದಾದರೆ ಶಿಕ್ಷಕನನ್ನು ಅಮಾನತು ಮಾಡಿದ್ದೇಕೆ. ನಮ್ಮನ್ನು ಕಳ್ಳರೆಂದು ಆರೋಪಿಸುವವರು ಪುರಾವೆ ನೀಡಲಿ. ನಾವು ಸಾಕ್ಷ್ಯ ಇಟ್ಟುಕೊಂಡೇ ಮಾತನಾಡುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿ ಪಡೆದು ತನಿಖೆ ನಡೆಸಲಿ, ಅದಕ್ಕೆ ನಮ್ಮ ಸ್ವಾಗತವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಸಿ ಪಾಟೀಲ ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಮುಖಂಡರುಗಳಾದ ಭರತ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು ‌