SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಶಿಮುಲ್ ಕೇಂದ್ರಕ್ಕೆ ಸಚಿವ ಬಸವಂತಪ್ಪ ಭೇಟಿ: ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚನೆ

ಶಿಮುಲ್ ಕೇಂದ್ರಕ್ಕೆ ಸಚಿವ ಬಸವಂತಪ್ಪ ಭೇಟಿ: ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚನೆ

0
66

ದಾವಣಗೆರೆ: ಗ್ರಾಹಕರಿಗೆ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪೂರೈಸುವ ನಿಟ್ಟಿನಲ್ಲಿ ಹಾಲಿನ ಶೇಖರಣೆ, ಸಂಸ್ಕರಣೆ ಮತ್ತು ಉತ್ಪಾದನಾ ಪ್ರಕ್ರಿಯೆಗಳಲ್ಲಿ ಅಗತ್ಯ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಬಾತಿ ಗ್ರಾಮದಲ್ಲಿರುವ ಶಿವಮೊಗ್ಗ–ಚಿತ್ರದುರ್ಗ–ದಾವಣಗೆರೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) ನಿಯಮಿತ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹಾಲಿನ ಸಂಗ್ರಹಣೆಯಿಂದ ಗ್ರಾಹಕರಿಗೆ ತಲುಪಿಸುವವರೆಗಿನ ವಿವಿಧ ಹಂತಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು.

ಹಾಲು ಶೇಖರಣೆ, ಸಂಸ್ಕರಣೆ, ಉತ್ಪಾದನೆ, ಪ್ಯಾಕಿಂಗ್, ಸ್ವಚ್ಛತೆ, ಗುಣಮಟ್ಟದ ಪರೀಕ್ಷೆ ಹಾಗೂ ಸಂಗ್ರಹಣಾ ಪ್ರಕ್ರಿಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾಲಿನ ಗುಣಮಟ್ಟವನ್ನು ಕಾಪಾಡುವುದು, ಉತ್ಪಾದನಾ ಘಟಕಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಮತ್ತು ಗ್ರಾಹಕರಿಗೆ ಸುರಕ್ಷಿತವಾದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ನಂತರ ಶಿಮುಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಚ್.ಕಲ್ಪನಹಳ್ಳಿ ಸಮೀಪ ನೂತನವಾಗಿ ಹಾಲು ಒಕ್ಕೂಟದ ಕಟ್ಟಡ ನಿರ್ಮಿಸುವ ಕುರಿತು ಪೂರ್ವಭಾವಿ ಚರ್ಚೆ ನಡೆಸಿದರು. ಉದ್ದೇಶಿತ ಕಟ್ಟಡ ನಿರ್ಮಾಣ ಕಾಮಗಾರಿಯ ಯೋಜನೆ, ಅಗತ್ಯ ಸಿದ್ಧತೆಗಳು ಹಾಗೂ ಸಂಬಂಧಿತ ಪ್ರಕ್ರಿಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿಯನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಿದರು.

ಹೈನುಗಾರಿಕೆ ಮತ್ತು ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಹಾಲು ಒಕ್ಕೂಟದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಿಮುಲ್ ಉಪಾಧ್ಯಕ್ಷ ಎಸ್. ಚೇತನ್ ನಾಡಿಗೇರ್, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ನಿರ್ದೇಶಕರಾದ ಎಚ್.ಕೆ.ಬಸಪ್ಪ, ಬಾವರಾಜಪ್ಪ, ಜಿ.ಪಿ. ರೇವಣಸಿದ್ದಪ್ಪ, ಜಗದೀಶಪ್ಪ ಬಣಕಾರ್, ರವಿಕುಮಾರ್, ಶೇಖರಪ್ಪ, ಡೈರಿ ಮ್ಯಾನೇಜರ್ ನವೀನ್, ಜನರಲ್ ಮ್ಯಾನೇಜರ್ ಜಯಪ್ರಕಾಶ್, ಡೆಪ್ಯುಟಿ ಮ್ಯಾನೇಜರ್ ಬಿ.ಎಸ್. ವಿಜಯ್ ಸೇರಿದಂತೆ ಬಾತಿ ಶಿಮುಲ್ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.