ಚಿಕ್ಕಮಗಳೂರು: ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಒಳಗೊಂಡ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಭವಿಷ್ಯದ ರಾಜಕಾರಣದ ದಿಕ್ಸೂಚಿಯಾಗಿದೆ. ವಿದ್ಯಾವಂತ ಮತದಾರರು, ಶಿಕ್ಷಕರು ರಾಜ್ಯ ಸರ್ಕಾರದ ಆಡಳಿತಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಜಯಗಳಿಸಿರುವುದು ವಿಶೇಷ. ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆದಿದ್ದರೂ ಬಿಜೆಪಿ–ಜೆಡಿಎಸ್ ಮೈತ್ರಿಗೆ ಗೆಲುವು ಲಭಿಸಿದೆ. ಇವಿಎಂನಲ್ಲಿ ನಡೆದಿದ್ದರೆ ಫಲಿತಾಂಶ ಬೇಗ ಬರುತ್ತಿತ್ತು, ಬ್ಯಾಲೆಟ್ ಪೇಪರ್ ಎಣಿಕೆಯಿಂದ ತಡವಾಗಿ ಫಲಿತಾಂಶ ಪ್ರಕಟವಾಗಿದೆ ಅಷ್ಟೇ ಎಂದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರ ಹನಿಮೂನ್ ಅವಧಿ ಮುಗಿಯುವ ಮುನ್ನವೇ ಕಾಂಗ್ರೆಸ್ಗೆ ಮತದಾರರು ಮರ್ಮಾಘಾತ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿ ಸೋಲು ಕಂಡಿದೆ. ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯಕ್ಕೆ ಮತದಾರರು ಉತ್ತರ ನೀಡಿದ್ದಾರೆ. ವಿಶೇಷವಾಗಿ ಶಿಕ್ಷಕರು ಮತ್ತು ಪದವೀಧರರು ನೀಡಿರುವ ಈ ತೀರ್ಪು ಮುಂದಿನ ಚುನಾವಣೆಗಳಿಗೂ ಸಂದೇಶವಾಗಿದೆ ಎಂದರು.
ನಾಲ್ಕು ಕ್ಷೇತ್ರಗಳ ವಿಜೇತರನ್ನು ಅಭಿನಂದಿಸಿದ ಅವರು, ಎ.ಪಿ. ರಂಗನಾಥ್ ಮತ್ತು ಸುರೇಶ್ ಮೊದಲ ಬಾರಿಗೆ, ಶಶಿಲ್ ನಮೋಶಿ ಐದನೇ ಬಾರಿಗೆ ಹಾಗೂ ಶಂಕರನೂರು ಮೂರನೇ ಬಾರಿಗೆ ಗೆಲುವು ಸಾಧಿಸಿರುವುದು ಎನ್ಡಿಎಗೆ ದೊರೆತ ಅಭೂತಪೂರ್ವ ಬೆಂಬಲವನ್ನು ತೋರಿಸುತ್ತದೆ. ಮತಗಳಿಕೆ ಹಾಗೂ ಮತಗಳ ಶೇಕಡಾವಾರು ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.




















