SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ವಾಕ್ಸಮರ

ದಾವಣಗೆರೆ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ವಾಕ್ಸಮರ

0
52

ದಾವಣಗೆರೆ: ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ಸಿಡಿ ಷಡ್ಯಂತ್ರದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರೇ ಮೊದಲ ಗುರು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಗಂಭೀರ ಆರೋಪ ಮಾಡಿದ್ದು, ಇಬ್ಬರು ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ.

ಚುನಾವಣೆಯ ಸಂದರ್ಭದಲ್ಲಿ ಬಿ.ಪಿ. ಹರೀಶ್ ತಮ್ಮ ಬಳಿ ಹಣ ಪಡೆದಿದ್ದರು ಎಂಬ ರೇಣುಕಾಚಾರ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಹರೀಶ್, ಹಣಕಾಸಿನ ವ್ಯವಹಾರಗಳು ಹಾಗೂ ಸಿಡಿ ಪ್ರಕರಣಗಳ ಕುರಿತು ಸೋಮವಾರ ಮಾಧ್ಯಮದವರೊಂದಿಗೆ ತೀವ್ರ ವಾಗ್ದಾಳಿ ನಡೆಸಿದರು.

‘ಚುನಾವಣೆಯಲ್ಲಿ ಅವನು ಹಣ ಕೊಟ್ಟಿದ್ದಲ್ಲ. ಬೇರೆಯವರು ಹಣ ಕೊಡಲು ಹೇಳಿದರೆಂದು ಕೊಟ್ಟರೆ ಅದನ್ನು ಸ್ವೀಕರಿಸುವ ಸಂಸ್ಕೃತಿ ನನ್ನದಲ್ಲ. ನನ್ನ ಎಲ್ಲ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಚೆಕ್ ಮೂಲಕವೇ ಮಾಡಿದ್ದೇನೆ. ನನ್ನ ವ್ಯವಹಾರಗಳಲ್ಲಿ ಯಾವುದೇ ಕಳ್ಳತನದ ವ್ಯವಹಾರ ಸಿಗುವುದಿಲ್ಲ’ಎಂದು ಸವಾಲು ಹಾಕಿದರು.

ರೇಣುಕಾಚಾರ್ಯ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಹರೀಶ್, ‘ನಮ್ಮ ಪಕ್ಷದ ನಾಯಕರ ಸಿಡಿ ಇದೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಮಂತ್ರಿಯಾದವನು. 2008ರಲ್ಲಿ ಆತನನ್ನು ಮಂತ್ರಿಮಂಡಲಕ್ಕೆ ಸೇರಿಸುವ ಸಂದರ್ಭದಲ್ಲಿ ಸ್ನೇಹಿತರು ಆತನ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ, ಆತನನ್ನು ಮಂತ್ರಿಮಂಡಲಕ್ಕೆ ಸೇರಿಸಿದ್ದೇ ನಾನು’ ಎಂದು ಹೇಳಿದರು.

‘ರಾಜ್ಯದಲ್ಲಿ ಸಿಡಿ ಷಡ್ಯಂತ್ರ ನಡೆಯುತ್ತಿದೆ. ಅದರಲ್ಲಿ ಇವನೇ ಮೊದಲ ಗುರು. ರಾಜ್ಯದ ನಾಯಕರ ಸಿಡಿಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾನೆ’ ಎಂದು ಆರೋಪಿಸಿದ ಅವರು, ಇಂತಹ ರಾಜಕೀಯ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.

ನಮ್ಮ ಕುಟುಂಬದ ಹಿನ್ನೆಲೆ ಏನು ಎಂಬುದು ಗೊತ್ತಿಲ್ಲ: ತಮ್ಮ ಕುಟುಂಬದ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಹರೀಶ್, ‘ನಮ್ಮ ತಾಯಿ ಶ್ರೀಮಂತ ಕುಟುಂಬದವರು. ನಮ್ಮನ್ನು ಸಾಕಿ ಬೆಳೆಸಿದ್ದಾರೆ. ನಾವು ನಾಡಗೌಡರು. ನಮ್ಮ ಅಜ್ಜ ಮೈಸೂರು ರಾಜ್ಯದ ವಿಧಾನಸಭೆ ಸದಸ್ಯರಾಗಿದ್ದರು. ನಾನು ಯಾವಾಗಲೂ ಸರಳ ಜೀವನ ನಡೆಸಿಕೊಂಡು ಬಂದಿದ್ದೇನೆ. ಕಳೆದ 30 ವರ್ಷಗಳಿಂದ ಬೆಂಗಳೂರಿನ ಜಯನಗರದ ಸನ್ಮಾನ ಹೋಟೆಲ್‌ನಲ್ಲೇ ವಾಸ್ತವ್ಯ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಹಿನ್ನೆಲೆ ಏನು ಎಂಬುದು ಆತನಿಗೆ ಗೊತ್ತಿಲ್ಲ’ ಎಂದು ಹೇಳಿದರು.

ತಮ್ಮ ಆಸ್ತಿ ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ಯಾವುದೇ ತನಿಖೆ ನಡೆಸಿದರೂ ಅಕ್ರಮ ವ್ಯವಹಾರಗಳು ಪತ್ತೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ‘ಅವರ ಅಪ್ಪ ಬಂದರೂ ನನ್ನ ವ್ಯವಹಾರಗಳಲ್ಲಿ ಯಾವುದೇ ಕಳ್ಳ ವ್ಯವಹಾರ ಸಿಗುವುದಿಲ್ಲ’ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ನಮ್ಮ ತಂದೆಯಿದ್ದಂತೆ ಎನ್ನುತ್ತಾರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನೂ ಪ್ರಸ್ತಾಪಿಸಿದ ಹರೀಶ್, ಯಡಿಯೂರಪ್ಪ ಅವರನ್ನು ತಮ್ಮ ತಂದೆಯಿದ್ದಂತೆ ಎಂದು ಹೇಳುವ ರೇಣುಕಾಚಾರ್ಯ, ಈ ಹಿಂದೆ ಅಪ್ಪ-ಮಕ್ಕಳ ವಿಚಾರಗಳನ್ನು ಬಯಲಿಗೆ ತರುತ್ತೇನೆ ಎಂದು ಹೇಳಿದ್ದರ ಬಗ್ಗೆ ಪ್ರಶ್ನಿಸಿದ ಅವರು, ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಹಾಗೂ ಬ್ಲ್ಯಾಕ್‌ಮೇಲ್ ಆರೋಪಗಳ ಬದಲಿಗೆ ಸತ್ಯಾಂಶ ಜನರ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯಲ್ಲಿರುವ ಇಂತಹ ನಾಯಕರು ಹೊರಹೋಗಲಿ: ‘ನೀನು ಪರಮ ನೀಚ. ರಾಜಕೀಯದಲ್ಲಿ ನಿನ್ನ ಕೊನೆಯ ದಿನಗಳು ಶುರುವಾಗಿವೆ. ಬಿಜೆಪಿಯಲ್ಲಿ ಇರುವ ಇಂತಹ ಕೆಟ್ಟ ಪ್ರವೃತ್ತಿಯ ನಾಯಕರು ಹೊರ ಹೋಗಬೇಕು. ಇಂತಹ ದುಷ್ಟರು ಮತ್ತು ಮ್ಯಾಚ್‌ಫಿಕ್ಸಿಂಗ್ ನಾಯಕರು ಪಕ್ಷದಲ್ಲಿದ್ದು ಏನು ಪ್ರಯೋಜನ?’ ಎಂದು ಕಿಡಿಕಾರಿದರು.

ಕಾಂಗ್ರೆಸ್ ಆಗಿರಲಿ, ಬಿಜೆಪಿ ಆಗಿರಲಿ, ರಾಜಕೀಯದಲ್ಲಿ ನೀಚ ಪ್ರವೃತ್ತಿಗಳಿಗೆ ಅವಕಾಶ ಇರಬಾರದು. ಇಂತಹ ಆರೋಪಗಳ ಕುರಿತು ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಹಿತಿ ಇರಬಹುದು ಎಂದು ಹೇಳಿದರು.