SK Home Ad
Home ಕ್ರೀಡೆ T20 World Cup: ಭಾರತ vs ಪಾಕಿಸ್ತಾನ ಮುಖಾಮುಖಿ

T20 World Cup: ಭಾರತ vs ಪಾಕಿಸ್ತಾನ ಮುಖಾಮುಖಿ

0
45

ಬರ್ಮಿಂಗ್‌ಹ್ಯಾಮ್: ಕ್ರಿಕೆಟ್ ಜಗತ್ತಿನ ಅತ್ಯಂತ ರೋಚಕ ಮತ್ತು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಭಾನುವಾರ ಮುಖಾಮುಖಿಯಾಗುತ್ತಿವೆ. ಬರ್ಮಿಂಗ್‌ಹ್ಯಾಮ್‌ನ ಪ್ರಸಿದ್ಧ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಭಾರತ ಮತ್ತು ಪಾಕಿಸ್ತಾನದ ಎರಡೂ ತಂಡಗಳ ಮೊದಲ ಪಂದ್ಯ ಇದಾಗಿದ್ದು, ಭಾರಿ ಕುತೂಹಲ ಕೆರಳಿಸಿದೆ.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಮುಕುಟ ಧರಿಸಿ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದ್ದ ಭಾರತದ `ವುಮೆನ್ ಇನ್ ಬ್ಲೂ’ ತಂಡ, ಈಗ ಟಿ20 ವಿಶ್ವಕಪ್‌ನಲ್ಲೂ ಅದೇ ವಿಜಯಯಾತ್ರೆಯನ್ನು ಮುಂದುವರಿಸುವ ತವಕದಲ್ಲಿದೆ. ಈವರೆಗೆ ಐದು ಬಾರಿ ಸೆಮಿಫೈನಲ್ ಹಾಗೂ ಒಂದು ಬಾರಿ ಫೈನಲ್ ತಲುಪಿದ್ದರೂ ಭಾರತಕ್ಕೆ ಚುಟುಕು ಕ್ರಿಕೆಟ್‌ನ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ನೇತೃತ್ವದಲ್ಲಿ ಇತಿಹಾಸ ಬರೆಯಲು ತಂಡ ಸಜ್ಜಾಗಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಭಾರತದ ಪ್ರದರ್ಶನ ಅಸ್ಥಿರತೆಯಿಂದ ಕೂಡಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಅನುಭವಿಸಿದ ಸೋಲು ಹಾಗೂ ಅಭ್ಯಾಸ ಪಂದ್ಯಗಳಲ್ಲಿನ ಸಾಧಾರಣ ಪ್ರದರ್ಶನ ತಂಡಕ್ಕೆ ಕೊಂಚ ಆತಂಕ ತಂದಿದೆ. ಆದಾಗ್ಯೂ, ಪಾಕಿಸ್ತಾನದ ವಿರುದ್ಧ ಭಾರತ ಹೊಂದಿರುವ ಐತಿಹಾಸಿಕ ದಾಖಲೆ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ತುಂಬಿದೆ. ಉಭಯ ತಂಡಗಳು ಮುಖಾಮುಖಿಯಾದ 16 ಟಿ20 ಪಂದ್ಯಗಳಲ್ಲಿ ಭಾರತ 13 ಬಾರಿ ಜಯಗಳಿಸಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನಷ್ಟೇ ಗೆದ್ದಿದೆ.

ಮತ್ತೊಂದೆಡೆ, ವಿಶ್ವ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಕೂಡ ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದೆ. ಕಳೆದ ಐದು ಪಂದ್ಯಗಳಲ್ಲಿ ತಂಡ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ. ಆದರೆ, ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿರುವ ಮೂರು ಪಂದ್ಯಗಳ ಪೈಕಿ ಎರಡು ಜಯ ವಿಶ್ವಕಪ್‌ನಲ್ಲೇ ಬಂದಿರುವುದರಿಂದ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಗ್ರೂಪ್-1ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳಿರುವುದರಿಂದ, ಸೆಮಿಫೈನಲ್ ಹಾದಿಯನ್ನು ಸುಲಭಗೊಳಿಸಿಕೊಳ್ಳಲು ಉಭಯ ತಂಡಗಳಿಗೂ ಈ ಮೊದಲ ಪಂದ್ಯದ ಗೆಲುವು ಅತ್ಯಂತ ನಿರ್ಣಾಯಕವಾಗಿದೆ. ಭಾನುವಾರದ ರಜಾದಿನದಂದು ಕ್ರಿಕೆಟ್ ಪ್ರೇಮಿಗಳಿಗೆ ಜಿದ್ದಾಜಿದ್ದಿನ ಪಂದ್ಯದ ರಸದೌತಣ ಸಿಗುವುದು ಖಚಿತ.

ಪಂದ್ಯ ಆರಂಭ: ರಾತ್ರಿ 7ಕ್ಕೆ