SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪತಿಯನ್ನು ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಪತಿಯನ್ನು ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

0
47
(File Photo)

ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯನ್ನು ಕೊಡಲಿಯಿಂದ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಪತ್ನಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅ. 19ರಂದು ತೀರ್ಪು ನೀಡಿದೆ.

ಚನ್ನಗಿರಿ ತಾಲ್ಲೂಕಿನ ಚಿಕ್ಕಕೋಗಲೂರು ಗ್ರಾಮದ ರೇಖಾ (36) ಶಿಕ್ಷೆಗೊಳಗಾದವರು. 2023ರ ಮಾರ್ಚ್ 21ರಂದು ರಾತ್ರಿ ಪತಿ ಶಾಂತಕುಮಾರ ಮಲಗಿದ್ದಾಗ ರೇಖಾ ಕೊಡಲಿಯಿಂದ ತಲೆಗೆ ಹೊಡೆದಿದ್ದರು. ತೀವ್ರವಾಗಿ ಗಾಯಗೊಂಡ ಶಾಂತಕುಮಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅದೇ ವರ್ಷದ ಆಗಸ್ಟ್ 25ರಂದು ಅವರು ಮೃತಪಟ್ಟಿದ್ದರು.

ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸಿಪಿಐ ಲಿಂಗನಗೌಡ ನೆಗಳೂರು ತನಿಖೆ ನಡೆಸಿ, ಸಾಕ್ಷ್ಯಾಧಾರ ಹಾಗೂ ವೈದ್ಯಕೀಯ ದಾಖಲೆಗಳ ಆಧಾರದಲ್ಲಿ ರೇಖಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೃಷ್ಣಮೂರ್ತಿ ಆರ್. ಪಡಸಲಗಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಜಯ್ಯಪ್ಪ ಕೆ. ವಾದ ಮಂಡಿಸಿದ್ದರು.