SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕಡೂರು: ಕುರುಬರಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ – ಗ್ರಾಮಸ್ಥರು ನಿರಾಳ

ಕಡೂರು: ಕುರುಬರಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ – ಗ್ರಾಮಸ್ಥರು ನಿರಾಳ

0
62

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನ್‌ಗೆ ಚಿರತೆಯೊಂದು ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸೆರೆಹಿಡಿದಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ದೇವರಕಾರೇಹಳ್ಳಿ, ಚಿಕ್ಕದೇವನೂರು ಹಾಗೂ ಕುರುಬರಹಳ್ಳಿ ಸುತ್ತಮುತ್ತ ನಿರಂತರವಾಗಿ ಓಡಾಡುತ್ತಾ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಸಿಕ್ಕಿರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಇದಾಗಿದ್ದು, ಈ ಭಾಗದ ದಾಳಿಂಬೆ ಹಾಗೂ ಶುಂಠಿ ತೋಟಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ತೋಟಗಳಲ್ಲಿ ಚಿರತೆಯ ಓಡಾಟದಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದರು. ಜಮೀನುಗಳಿಗೆ ತೆರಳಲು ಭಯಪಡುವಂತಾಗಿದ್ದು, ಚಿರತೆಯನ್ನು ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ, ಚಿರತೆಯ ಸಂಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಮೂರು ಕಡೆಗಳಲ್ಲಿ ಬೋನ್‌ಗಳನ್ನು ಇರಿಸಿತ್ತು. ಬುಧವಾರ ತಡರಾತ್ರಿ ಕುರುಬರಹಳ್ಳಿ ಗ್ರಾಮದ ಬಳಿ ಇರಿಸಿದ್ದ ಬೋನ್‌ನಲ್ಲಿದ್ದ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನ್‌ನೊಳಗೆ ಸಿಲುಕಿಕೊಂಡಿದೆ.

ಚಿರತೆ ಸೆರೆಯಾಗಿರುವುದು ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಖರಾಯಪಟ್ಟಣ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿರಂತರವಾಗಿ ಚಿರತೆಯ ಭೀತಿಯಲ್ಲಿದ್ದ ಗ್ರಾಮಸ್ಥರು ಇದೀಗ ನಿರಾಳರಾಗಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಚಿರತೆಯ ಓಡಾಟದ ಬಗ್ಗೆ ಆತಂಕ ವ್ಯಕ್ತವಾಗುತ್ತಿತ್ತು. ಇದೀಗ ಚಿರತೆ ಸೆರೆ ಸಿಕ್ಕಿರುವುದರಿಂದ ರೈತರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.