ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಯುವಕನನ್ನು ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಎಂಪಿ ಪ್ರಕಾಶ್ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಯೂನೂಸ್ (28) ಎಂದು ಗುರುತಿಸಲಾಗಿದೆ. ಆರೋಪಿಗಳು ಮೊದಲು ಯೂನೂಸ್ ಕಣ್ಣಿಗೆ ಕಾರದ ಪುಡಿ ಎರಚಿ, ಬಳಿಕ ಸುಮಾರು 100 ಮೀಟರ್‌ಗಳಷ್ಟು ದೂರ ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ರಸ್ತೆಯಲ್ಲೇ ಬಿದ್ದಿದ್ದ ಯೂನೂಸ್ ಮೃತದೇಹವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್, ಡಿವೈಎಸ್ಪಿ ಮುರಳೀಧರರಾವ್ ಹಾಗೂ ಗ್ರಾಮೀಣ ಠಾಣೆ ಪಿಐ ಗುರುರಾಜ್ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಯೂನೂಸ್ ಅವರ ತಂದೆ ನಜೀರ್ ಅಹಮ್ಮದ್ ಮಾತನಾಡಿ, “ನನ್ನ ಮಗ ತನ್ನ ಕೆಲಸ ಮಾಡಿಕೊಂಡು ಯಾರ ಸಂಗಡವೂ ತಲೆ ಹಾಕದೇ ಇರುತ್ತಿದ್ದ. ಅವನಿಗೆ ಮದುವೆಯಾಗಿದ್ದು ಒಂದು ಮಗು ಇದೆ. ಪತ್ನಿ ಗರ್ಭಿಣಿಯಾಗಿದ್ದಾಳೆ. ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದ. ರಾತ್ರಿ 9.45ಕ್ಕೆ ಊಟಕ್ಕೆ ಮನೆಗೆ ಬರ್ತಿಯಾ ಎಂದು ಕರೆ ಮಾಡಿದಾಗ ಇನ್ನೂ ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ಅವನ ಕೊಲೆಯಾದ ಸುದ್ದಿ ತಿಳಿಯಿತು. ಕೊಲೆಗೆ ಕಾರಣ ಏನು ಎಂಬುದು ನಮಗೆ ಗೊತ್ತಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಹೊಸಪೇಟೆಯ ಖಾಜಾ ಮತ್ತು ಇರ್ಫಾನ್ ಎಂಬುವರು ಪಟ್ಟಣ ಪೊಲೀಸ್ ಠಾಣೆಗೆ ತೆರಳಿ, “ನಾವು ಕೊಲೆ ಮಾಡಿ ಬಂದಿದ್ದೇವೆ” ಎಂದು ಹೇಳಿ, ಕೃತ್ಯಕ್ಕೆ ಬಳಸಿದ ಚಾಕು ಸಮೇತ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಯ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.






















