SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಹೈಕೋರ್ಟ್ ಪೀಠ ಹೋರಾಟಕ್ಕೆ ಸಚಿವ ಬಸವಂತಪ್ಪ ಬೆಂಬಲ

ದಾವಣಗೆರೆ ಹೈಕೋರ್ಟ್ ಪೀಠ ಹೋರಾಟಕ್ಕೆ ಸಚಿವ ಬಸವಂತಪ್ಪ ಬೆಂಬಲ

0
77

ದಾವಣಗೆರೆ: ಮಧ್ಯ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ವಕೀಲರು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದರು.

ಸೋಮವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ. ಹನುಮಂತಪ್ಪ ಅವರ ನೇತೃತ್ವದ ವಕೀಲರ ನಿಯೋಗವು ಸಚಿವ ಕೆ.ಎಸ್.ಬಸವಂತಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಬಸವಂತಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ನಡೆಸಲಾಗುತ್ತದೆ.

ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಈ ಭಾಗದ ಅಕ್ಕಪಕ್ಕದ ಜಿಲ್ಲೆಗಳ ಜನರು ಬೆಂಗಳೂರಿಗೆ ಹೋಗಿ ಬರುವ ಸಮಸ್ಯೆ ತಪ್ಪುತ್ತದೆ. ಹೀಗಾಗಿ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಗತ್ಯ ಹಾಗೂ ಈ ಬೇಡಿಕೆಯನ್ನು ಈಡೇರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿಯೋಗವು ಸಚಿವರ ಗಮನ ಸೆಳೆಯಿತು. ಈ ವೇಳೆ ವಕೀಲರು ಮತ್ತು ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಸಮರ್ಥ್ ಶಾಮನೂರು ಅವರೊಂದಿಗೂ ವಕೀಲರ ನಿಯೋಗವು ಮಾತುಕತೆ ನಡೆಸಿತು. ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವವರೆಗೆ ಎಲ್ಲ ಹಂತಗಳಲ್ಲಿಯೂ ಸಂಘಟಿತವಾಗಿ ಪ್ರಯತ್ನ ಮುಂದುವರಿಸುವ ಸಂಕಲ್ಪವನ್ನು ಹೋರಾಟ ಸಮಿತಿ ವ್ಯಕ್ತಪಡಿಸಿತು.

ಸಭೆಯಲ್ಲಿ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಲೋಕಿಕೆರೆ ಸಿದ್ದಪ್ಪ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್. ಮಂಜುನಾಥ್, ಬಸವರಾಜ್ ಉಚ್ಚಂಗಿದುರ್ಗ, ಎಸ್. ಬಸವರಾಜ್, ಆಂಜನೇಯ ಗುರೂಜಿ, ರಾಜಪ್ಪ, ಎಲ್. ಶ್ಯಾಮ್, ವಿ. ಗೋಪಾಲ್ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.