SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಎನ್‌ಡಿಎ ಅಭ್ಯರ್ಥಿ ಸುರೇಶ್ ವಿರುದ್ಧ ಶಾಸಕ ಬಿ.ಪಿ.ಹರೀಶ್ ವಾಗ್ದಾಳಿ

ಎನ್‌ಡಿಎ ಅಭ್ಯರ್ಥಿ ಸುರೇಶ್ ವಿರುದ್ಧ ಶಾಸಕ ಬಿ.ಪಿ.ಹರೀಶ್ ವಾಗ್ದಾಳಿ

0
60
(file Photo)

ಸಚಿವ ಮಲ್ಲಿಕಾರ್ಜುನ ಕಾಲಿಗೆ ಬೀಳುವ ಅಗತ್ಯವೇನಿತ್ತು?’ ಎಂದು ಪ್ರಶ್ನೆ

ದಾವಣಗೆರೆ: ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಕಾಲಿಗೆ ಬಿದ್ದಿರುವ ವಿಚಾರವಾಗಿ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಕಾಲಿಗೆ ಅಭ್ಯರ್ಥಿ ಸುರೇಶ್ ಸಾರ್ವಜನಿಕವಾಗಿ ಬೀಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮುಂದೆಯೂ ಸಹಕಾರ ನೀಡುವುದಾಗಿ ಹೇಳಿರುವುದರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ನೋಡಿದ ತಕ್ಷಣ ಸಚಿವ ಮಲ್ಲಿಕಾರ್ಜುನ ಅವರಿಗೆ ಅಷ್ಟೊಂದು ಸಂತೋಷವಾಗುವುದೇಕೆ ಎಂದು ವ್ಯಂಗ್ಯವಾಡಿದ ಹರೀಶ್, ಈ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಎ ಮತ್ತು ಬಿ ತಂಡಗಳಿವೆ ಎಂಬ ಸಚಿವ ಮಲ್ಲಿಕಾರ್ಜುನ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದಾವಣಗೆರೆಯಲ್ಲಿ ಬಿಜೆಪಿ ಕಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಕೆಲವರು ಹಿಂದೆ ಕಾಂಗ್ರೆಸ್‌ನ ಬಿ ಟೀಮ್ ಆಗಿದ್ದರು ಎಂದು ಪರೋಕ್ಷವಾಗಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಒಂದೇ ತಂಡವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಶಾಮನೂರು ಮನೆತನದವರು ಚುನಾವಣೆಗೆ ಸ್ಪರ್ಧಿಸಿದಾಗ ಕೆಲವರು ಅವರಿಗೆ ಬೆಂಬಲ ನೀಡುತ್ತಾರೆ; ಇತರ ಅಭ್ಯರ್ಥಿಗಳು ಕಣಕ್ಕಿಳಿದಾಗ ಪರಸ್ಪರ ಬೆಂಬಲಿಸುವ ರಾಜಕೀಯ ನಡೆಯುತ್ತದೆ. ಇಂತಹ ಬೆಳವಣಿಗೆಗಳಿಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ನೋವಾಗುತ್ತಿದೆ ಎಂದರು.

ಕಾಂಗ್ರೆಸ್‌ನವರು ಪಾಕಿಸ್ತಾನದವರೇ ಎಂದು ಸುರೇಶ್ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಹರೀಶ್, ವಿದೇಶದಿಂದ ಹಣ ಬರುತ್ತಿದೆ ಎಂದು ಆರೋಪಿಸಿ, ಸುರೇಶ್ ಅವರ ವಿರುದ್ಧವೂ ಕಟುವಾದ ಪದಗಳನ್ನು ಬಳಸಿ ಟೀಕಿಸಿದರು. ಗೌರವಯುತ ವಿಧಾನ ಪರಿಷತ್‌ಗೆ ಇಂತಹವರನ್ನು ಕಳುಹಿಸಬೇಕಾಗಿರುವುದು ನೋವಿನ ಸಂಗತಿ. ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡುವುದಕ್ಕೂ ಬಿಜೆಪಿ ಕಾರ್ಯಕರ್ತರಿಗೆ ಮನಸ್ಸಿಗೆ ನೋವಾಗುತ್ತಿದೆ ಎಂದು ಹೇಳಿದರು.

ಬಿಜೆಪಿಯಲ್ಲಿನ ಮ್ಯಾಚ್ ಫಿಕ್ಸಿಂಗ್ ರಾಜಕೀಯಕ್ಕೆ ಅಂತ್ಯ ಹಾಡಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದ ಅವರು, ಪಕ್ಷದೊಳಗಿನ ಭಿನ್ನಮತ ಹಾಗೂ ಕಾರ್ಯಕರ್ತರ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ವಿಜಯೇಂದ್ರ ವಿರುದ್ಧವೂ ವಾಗ್ದಾಳಿ: ಹೊಂದಾಣಿಕೆ ರಾಜಕೀಯದ ವಿರುದ್ಧ ಹೋರಾಟದ ಎಚ್ಚರಿಕೆ

ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದ್ದು, ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಅವರನ್ನು ಮಂತ್ರಿ ಮಾಡುವಲ್ಲಿ ತಮ್ಮ ಪಾತ್ರವಿತ್ತು ಎಂದು ಹೇಳಿಕೊಂಡು, ಇಂತಹ ವ್ಯಕ್ತಿಯನ್ನು ಮಂತ್ರಿ ಮಾಡಿದೆನಲ್ಲ ಎಂಬ ನೋವು ತನಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕೀಯದ ಬಗ್ಗೆ ಸಾರ್ವಜನಿಕರ ಗಮನ ಸೆಳೆದು ಹೋರಾಟ ನಡೆಸುವುದಾಗಿ ತಿಳಿಸಿದರು. ಈ ವಿಚಾರವನ್ನು ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿ ಅವರ ಗಮನಕ್ಕೂ ತರುವುದಾಗಿ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ ಹರೀಶ್, ಸದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಜಯೇಂದ್ರ ಅವರನ್ನು ಉದ್ದೇಶಿಸಿ, ನಾಗರಾಜಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೆ ನೀವು ಗೆಲ್ಲುತ್ತಿರಲಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಉಲ್ಲೇಖಿಸಿದರು. ಇಂತಹ ಹೇಳಿಕೆಗಳು ಸದನದಲ್ಲಿ ಕೇಳಿಬರುತ್ತಿರುವುದು ರಾಜಕಾರಣ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ತಮ್ಮ ಮಗನನ್ನು ಗೆಲ್ಲಿಸುವ ಉದ್ದೇಶದಿಂದ ಗೆಲ್ಲುವ ಸಾಮರ್ಥ್ಯವಿಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಬಿಜೆಪಿಯ ಒಂದು ಗುಂಪು ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿತ್ತು ಎಂದು ದೂರಿದರು.

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧವೂ ಆರೋಪ ಮಾಡಿದ ಹರೀಶ್, ಚನ್ನಗಿರಿಯ ನಾಯಕರು ಲೋಕಾಯುಕ್ತ ತನಿಖೆಯಿಂದ ಹೊರಬರಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ರೇಣುಕಾಚಾರ್ಯ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಗರಣಗಳ ಮಾಹಿತಿ ತಮ್ಮ ಬಳಿ ಇದೆ ಎಂದು ಹೇಳಿಕೊಳ್ಳುತ್ತಿದ್ದರು. ನೂತನ ಶಾಸಕರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಬಳಿಕ ಮಂತ್ರಿಯಾದರು ಎಂದು ಹರೀಶ್ ಆರೋಪಿಸಿದರು.
ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾದ ಹೊಂದಾಣಿಕೆ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿಗಳ ಕುರಿತು ಪಕ್ಷದ ವರಿಷ್ಠರ ಗಮನ ಸೆಳೆಯುವುದಾಗಿ ತಿಳಿಸಿದ ಅವರು, ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಈ ವಿಚಾರದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.