ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಮೈಸೂರಿನತ್ತ ಕಲ್ಯಾಣ ನಾಡಿನ ಸ್ವಾಮೀಜಿ ಹೊರಟಿದ್ದಾರೆ!
ನಾಡ ದೇವತೆ ಚಾಮುಂಡೇಶ್ವರಿಯ ಲೋಕ ಪ್ರಸಿದ್ಧ ದಸರಾ ಮಹೋತ್ಸವವನ್ನು ಜಾಗೃತ ಮಠಾಧೀಶ ಮತ್ತು ಲೋಕಮನ್ನಿತ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಸಾಂಸ್ಕೃತಿಕ ಮತ್ತು ಸಾಮಾಜಿಕ ಹೋರಾಟಗಳಿಂದಲೇ ಧರ್ಮ ಸಂಸ್ಥಾನವನ್ನು ಜನರಿಗೆ ಹಾಗೂ ಸ್ಥಳೀಯ ಜನರ ಏಳ್ಗೆಗೆ ಮುಡಿಪಾಗಿಟ್ಟ ಕೊಪ್ಪಳದ ಗವಿಶ್ರೀ, ಕಲ್ಯಾಣ ಕರ್ನಾಟಕದ ಭಾಗದಿಂದ ಪ್ರಥಮ ಬಾರಿಗೆ ಮೈಸೂರು ದಸರಾಕ್ಕೆ ಚಾಲನೆ ನೀಡಲಿರುವುದು ಖಂಡಿತವಾಗಿಯೂ ವಿಶೇಷ.
ಶ್ರೀಗಳ ಬದುಕು, ಹೋರಾಟ ಮತ್ತು ಸಾಮಾಜಿಕ ಕಳಕಳಿ ಮೈಸೂರಿನ ಮಹಾಜನತೆಗೆ ಗೊತ್ತಿಲ್ಲವೆಂದೇನಿಲ್ಲ. ಆದರೆ ಸರ್ಕಾರ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿ ದೊಡ್ಡ ಗೌರವವನ್ನು ಕಲ್ಪಿಸಿದೆ.
ದಾನದಿಂದ ನಿರಂತರ ದಾಸೋಹದ ಜೊತೆಗೆ, ಜ್ಞಾನ ಬಿತ್ತಿ ಜಾಗೃತಿ ಮೂಡಿಸಿದ ಕೊಪ್ಪಳದ ಗವಿಸಿದ್ದೇಶ್ವರರು ಇತ್ತೀಚಿನ ವರ್ಷಗಳಲ್ಲಿ ದೇಶವ್ಯಾಪಿ ಎಲ್ಲರ ಗಮನವನ್ನು ಸೆಳೆದದ್ದು, ಪೀಠಾಧಿಪತಿಗಳು ಎನ್ನುವುದಕ್ಕಿಂತಲೂ ತಮ್ಮ ಸಾಮಾಜಿಕ ಕಳಕಳಿಯಿಂದ. ಪರಿಸರ, ಭೂಮಿ, ನೆಲಜಲ, ಬದುಕು ಇವುಗಳ ಸಂರಕ್ಷಣೆಯ ಕುರಿತಾದ ತಮ್ಮ ತಪಸ್ಸಿನಂತಹ ಬದ್ಧತೆಗಳಿಂದ.
2017ರಲ್ಲಿ ಅವರು ಕೈಗೊಂಡ ಜಲದೀಕ್ಷೆ ಮತ್ತು ಕೆರೆ ಹೂಳೆತ್ತುವಿಕೆ ಬೃಹತ್ ಆಂದೋಲನವಾಗಿ ರೂಪುಗೊಂಡಿತು. 2020ರಲ್ಲಿ ಬರಡು ನೆಲದಲ್ಲಿ ಲಕ್ಷಾಂತರ ಗಿಡ ನೆಟ್ಟು ಪೋಷಿಸುವ ವೃಕ್ಷೋತ್ಸವ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ಕೆ ತೊಡಗಿ ಹಸಿರು ಕ್ರಾಂತಿಗೆ ಶ್ರೀಗಳು ನಾಂದಿ ಹಾಡಿದ್ದು ಭಾರತದ ಎಲ್ಲ ಬಯಲು ಭಾಗಗಳಿಗೆ ಮಾದರಿ.
`ನೀವು ಸತ್ತಾಗ ನಿಮ್ಮ ಕಣ್ಣು, ಅಂಗಾಂಗಗಳೆಲ್ಲ ಮಣ್ಣು ಪಾಲಾಗುತ್ತವೆ. ಭಸ್ಮವಾಗುತ್ತವೆ. ಹೀಗಾಗುವುದು ಬೇಡ. ಮೌಢ್ಯ ಬೇಕಿಲ್ಲ. ನಿಮ್ಮವರ ಅಂಗಾಂಗ ದಾನ ಮಾಡಿ, ನೀವೂ ಅಂಗಾಂಗ ದಾನದ ವಾಗ್ದಾನ ಮಾಡಿ’ ಎಂದು 2019ರಿಂದ 2023ರವರೆಗೆ ಸಾವಿರಾರು ಭಕ್ತರು ಸ್ವಯಂ ಪ್ರೇರಿತವಾಗಿ ಅಂಗಾಂಗ ಹಾಗೂ ನೇತ್ರದಾನ ಮಾಡಲು ಪ್ರೇರಪಿಸಿದವರು ಶ್ರೀಗಳು.
ಹಾಗೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಅನಿಷ್ಟವಾಗಿರುವ ಬಾಲ್ಯ ವಿವಾಹ ಪದ್ಧತಿ ವಿರುದ್ಧ ಗವಿಶ್ರೀ ಬೃಹತ್ ಜನಜಾಗೃತಿ ಉಂಟು ಮಾಡಿದರು. `ನಿಮ್ಮ ಮಗಳ ಜೀವನ ಸುಂದರವಾಗಬೇಕು. ಬದುಕು ಬಂಗಾರವಾಗಬೇಕು. ಅವರನ್ನು ಬೆಳೆಸಿ, ಓದಿಸಿ; ನಿಮ್ಮಲ್ಲಾಗದಿದ್ದರೆ ನಮ್ಮಲ್ಲೇ ಓದಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಡಿ’ ಎಂದು ನೈಜ ಧರ್ಮದ ದಾರಿಯನ್ನು ಜನರಿಗೆ ತೋರಿಸಿ, ದೊಡ್ಡ ಅನಿಷ್ಟವನ್ನು ತಡೆದರು. ಈಗ ಒಂದು ವರ್ಷದಿಂದ ಪರಿಸರ ಆಂದೋಲನವನ್ನು ತೀವ್ರಗೊಳಿಸಿದ್ದಾರೆ.
ಕೊಪ್ಪಳ ಸುತ್ತಮುತ್ತಲಿನ ವಿವಿಧ ಗಣಿ ಮತ್ತು ಅದಿರು ಘಟಕಗಳಿಂದ ಇಡೀ ಜನರ ಬದುಕೇ ಆತಂಕಗೊಂಡಾಗ ಹೋರಾಟಕ್ಕೆ ಧುಮುಕಿದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ. ನಾಡು ಕಾಯಲು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಗೊತ್ತಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ, ಬಾಧ್ಯತೆ ನಮಗಿದೆ. `ನಾಡಿನ ನೆಲಕ್ಕೆ ಕುತ್ತು ಬಂದಾಗ ಮಠದಲ್ಲಿ ಕುಳಿತುಕೊಳ್ಳಲು ಆಗದು… ಹೀಗೆ ಕೂರುವುದರಿಂದ ನಾಡಿನ ಋಣ ತೀರಿಸಲು ಸಾಧ್ಯವಿಲ್ಲ. ಬನ್ನಿ ಹೋರಾಟ ಮಾಡೋಣ’ ಎಂದು ಆಂದೋಲನಕ್ಕೆ ಇಳಿದವರು ಶ್ರೀಗಳು.
ಕೊಪ್ಪಳ ಗವಿಸಿದ್ದೇಶ್ವರನ ಜಾತ್ರೆಗೆ ಕೋಟ್ಯಂತರ ಮಂದಿ ಆಗಮಿಸುತ್ತಾರೆ. ಇದನ್ನು ದಕ್ಷಿಣ ಭಾರತದ ಮಹಾಕುಂಭ ಎಂದೂ ಶ್ರದ್ಧಾಳುಗಳು ಬಣ್ಣಿಸುತ್ತಾರೆ. ಈ ಜಾತ್ರೆಯ ಶಿಸ್ತು, ರೊಟ್ಟಿ, ಮಿರ್ಚಿ, ಝುಣಕಗಳ ದಾಸೋಹ ಅದ್ಭುತ. ಲಕ್ಷಾಂತರ ಮಂದಿ ಗವಿಸಿದ್ದರ ಬಯಲಿನಲ್ಲಿ ಸೇರಿದರೂ ಈವರೆಗೆ ಒಂದೇ ಒಂದು ಅಹಿತರ ಘಟನೆಯಾಗಲೀ, ಅವಘಡಗಳಾಗಲೀ ನಡೆದಿಲ್ಲ. ಇದಕ್ಕೆ ಶ್ರೀಗಳು ರೂಪಿಸಿರುವ ಶಿಸ್ತು ಹಾಗೂ ಜನಸಮುದಾಯಕ್ಕೆ ಅವರು ಕಲಿಸಿರುವ ಬದುಕಿನ ಶ್ರದ್ಧೆ ಕಾರಣ.
ಶ್ರೀಗಳು ಹೇಳುವುದಿಷ್ಟು. ಪರಿಸರ ಸಂರಕ್ಷಣೆ ವಿಷಯದಲ್ಲಿ ನಾನು ಯಾರೊಂದಿಗೂ ರಾಜಿಯಾಗುವುದಿಲ್ಲ. ಜನರ ಬದುಕು ನುಂಗುವ ಕಾರ್ಖಾನೆಗಳು ಕಾಲು ಕೀಳುವವರೆಗೂ ನನ್ನ ಹೋರಾಟ. ಕೇವಲ ಒಂದು ದಿನದ ಹೋರಾಟ ಇದಲ್ಲ. ಸಾಮೂಹಿಕ ನಾಯಕತ್ವದಲ್ಲಿ ಹೋರಾಡೋಣ. ಕಾರ್ಖಾನೆ ಸ್ಥಾಪಿಸಿದರೆ ನಾನೇ ಕೊಪ್ಪಳ ತೊರೆಯುವೆ ಎಂದು ಕಳೆದ ವರ್ಷವಷ್ಟೇ ಅಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳು ಮತ್ತು ವಿಸ್ತರಣಾ ಘಟಕಗಳಿಗೆ ಅನುಮತಿ ಕೊಡಕೂಡದೆಂದು ಬಲವಾಗಿ ಆಗ್ರಹಿಸಿದ್ದರು. ನೀವು ಇಲ್ಲಿ ಬಂದು ಹೋರಾಟ ಮಾಡಬೇಕಾಗಿಲ್ಲ. ವಿಧಾನಸೌಧದಿಂದ ಈ ಕಾರ್ಖಾನೆಗೆ ಅನುಮತಿ ನೀಡಲ್ಲ ಎನ್ನುವ ಆದೇಶದೊಂದಿಗೆ ಊರಿಗೆ ಬನ್ನಿ ಎಂದು ಸಚಿವರು, ಶಾಸಕರುಗಳಿಗೆ ನೇರವಾಗಿ ಅಪ್ಪಣೆ ಕೊಟ್ಟಿದ್ದರು ಸ್ವಾಮೀಜಿ.
ಕೊಪ್ಪಳ ಸುತ್ತಮುತ್ತಲಿನ ಕಾರ್ಖಾನೆಗಳಿಂದ ರೈತನ ಬೆಳೆ ಬಾರದಾಗಿದೆ. ಕಪ್ಪು ಧೂಳಿನಿಂದ ಜನ ಊಟ ಮಾಡಲು ಆಗುತ್ತಿಲ್ಲ. ನೀರು ಕಲುಷಿತಗೊಂಡಿದೆ. ಹೊಸ ಕಾರ್ಖಾನೆಗಳೂ ಬೇಡ. ಈಗಿರುವ ಕಾರ್ಖಾನೆಗಳ ವಿಸ್ತರಣೆಗಳೂ ಬೇಡ. ಹಾಗೊಮ್ಮೆ ಇವನ್ನು ಆರಂಭಿಸಿದರೆ ಕೊಪ್ಪಳದಲ್ಲಿ ತೊಟ್ಟಿಲು ತೂಗುವುದಕ್ಕಿಂತ ಸ್ಮಶಾನಕ್ಕೆ ಹೋಗುವವರೇ ಹೆಚ್ಚಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದವರು ಅವರು. ಬಿಳಿ ಅರಳೆಯಂತೆ, ಗಂಗಾಜಲದಂತೆ ಇದ್ದ ಕೊಪ್ಪಳ ನಾಡಿನ ನೆಲ-ಜಲ, ಬೆಳೆ ಈಗ `ಕರಿ ಅರಳೆ’ಯಂತೆ ಆಗಿದೆ. ಬಿಳಿ ಅನ್ನ ಕಪ್ಪಾಗುತ್ತಿದೆ. ಭೂಮಿ ಕರಕಲಾಗಿದೆ. ಈ ಪರಿಸ್ಥಿತಿಯ ಬಗ್ಗೆ ಆಳುವವರನ್ನು ಬಡಿದೆಬ್ಬಿಸುವ ಕೆಲಸ ನಾವಲ್ಲದೇ ಇನ್ನಾರು ಮಾಡಬೇಕು ಎಂದು ಹೊರಟ ಗವಿಶ್ರೀಗಳಿಗೆ ಜನಮನ್ನಣೆಯೇನೋ ಸಿಕ್ಕಿತು. ಆದರೆ ಸರ್ಕಾರ, ಬಂಡವಾಳಶಾಹಿಗಳ ದರ್ಪ ಮತ್ತು ಕುಟಿಲತೆಗಳು ಭಂಡತನದಿಂದ ಕೂಡಿದ್ದವು. ಕಪ್ಪತ್ತಗುಡ್ಡದಿಂದ ಮೊದಲಾಗಿ ಬಳ್ಳಾರಿಯ ಗಣಿ ಸಂಪತ್ತಿನ ಬೆಟ್ಟ ಗುಡ್ಡಗಳನ್ನು ಸಂರಕ್ಷಿಸುವುದೇ ಈಗ ದೊಡ್ಡ ಸವಾಲು. ನಮ್ಮ ನಾಡು ಉಳಿಸಿ, ನಿಮ್ಮ ದುಷ್ಟತನ, ಕುಟಿಲತೆಗಳನ್ನು ನಮ್ಮ ಜೋಳಿಗೆಗೆ ಹಾಕಿಬಿಡಿ ಎಂದು ಹೊರಟ ಗವಿಶ್ರೀ ಈಗ ಸರ್ಕಾರದ ಆಮಂತ್ರಣದ ಮೇರೆಗೆ ನಾಡಹಬ್ಬವನ್ನು ಚಾಲನೆ ಕೊಡುವುದಕ್ಕೆ ಹೊರಟಿದ್ದಾರೆ.
ಈಗ, ಭಗವಂತ ಕರುಣಿಸಿರುವ ಬದುಕಿನ ಸಾರ್ಥಕತೆಗಾಗಿ ಉಸಿರು ನಿಂತರೂ, ಹೆಸರು ಉಳಿಯುವ ಕೆಲಸ ಮಾಡೋಣ' ಎನ್ನುವ ಸಂದೇಶದೊಂದಿಗೆ ಗವಿಶ್ರೀಗಳುಮಾನವ ಪ್ರೇಮ ಹಾಗೂ ಪರಿಸರ ಉಳಿಸುವ ಭಿಕ್ಷೆಯನ್ನು ಕೋರಿ’ ಜೋಳಿಗೆಯೊಂದಿಗೆ ಮೈಸೂರಿನತ್ತ ಹೊರಟಿದ್ದಾರೆ.
ಪರಿಸರ ಮತ್ತು ಬದುಕನ್ನು ಹಾಳು ಮಾಡುವ ಉದ್ದಿಮೆಗಳು ಬೇಡ. ನಮ್ಮ ನೆಲ-ಜಲ ಸಂರಕ್ಷಿಸೋಣ. ತುಂಗೆಭದ್ರೆಯರ ಮಡಿಲನ್ನು ಆರೋಗ್ಯಪೂರ್ಣವಾಗಿ ಬೆಳಗೋಣ; ಗಣಿ ಧೂಳು ಮೆತ್ತದಿರಲಿ ಜನರಿಗೆಲ್ಲ… ನಾಡಿಗೆಲ್ಲ… ಎನ್ನುವ ಸಂದೇಶಗಳು ಅವರ ಜೋಳಿಗೆಯಲ್ಲಿವೆ. ಸರ್ಕಾರಕ್ಕೆ ಕಲ್ಯಾಣ ನಾಡಿನ ಬೇಕು- ಬೇಡಗಳನ್ನು ಅರಹುವುದಕ್ಕೆ, ವಾದಿಸುವುದಕ್ಕೆ ಶ್ರೀಗಳಿಗಿದು ಸಕಾಲ ಎಂದು ಈಗಲೇ ಭಕ್ತಗಣ, ಕೋಪಣ ನಾಡಿನ ಮಂದಿ ಹೇಳುತ್ತಿದ್ದಾರೆ. ಬಹುಶಃ ಶ್ರೀಗಳು ಈ ಬೇಡಿಕೆಗಳನ್ನಿಟ್ಟರೆ ಸರ್ಕಾರಕ್ಕೆ ಕಿವಿಗೊಡುವುದು ಅನಿವಾರ್ಯವೇ ಆಗಲಿದೆ ಅಲ್ಲವೇ? ಶ್ರೀಗಳೂ ಈ ಅವಕಾಶಕ್ಕಾಗಿ ಕಾಯುತ್ತಿರಬಹುದೇನೋ…
ನಾವು ದುಡಿದು, ಸಂತೃಪ್ತಿಯ ಜೀವನ ನಡೆಸಬೇಕು. ಇರುವಷ್ಟು ದಿನ ಒಳ್ಳೆಯ ಹಾಗೂ ಪುಣ್ಯದ ಕಾರ್ಯ ಮಾಡಿ, ಶರಣರ ಮಾತುಗಳನ್ನು ಜೀವನದ ಬಂಡಿಗೆ ಕೀಲು ಮಾಡಿಕೊಂಡು ಸಾಗಬೇಕು. ಇನ್ನೊಬ್ಬರ ಇರುವಿಕೆಯನ್ನು ನೋಡಿ ತಾಪ ಮಾಡಿಕೊಳ್ಳಬಾರದು. ಇದುವೇ ಜೀವನದ ಸಾರ ಎನ್ನುತ್ತ ಗವಿಶ್ರೀಗಳು ಮೈಸೂರಿನೆಡೆ ಹೋಗುತ್ತಿದ್ದಾರೆ. ಹಾಗೇ ನೆಲ-ಜಲ, ಪರಿಸರ ರಕ್ಷಣೆಯ ಧ್ವನಿಯನ್ನು ಅವರ ಜೋಳಿಗೆಯಿಂದ ತೆಗೆದು ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ಅರಿಕೆಗೈಯುವ ಒಳ್ಳೆಯ ಅವಕಾಶ ಸ್ವಾಮೀಜಿಗಳಿಗೆ ನಿಶ್ಚಯವಾಗಿಯೂ ಇದೆ. ಹಾಗಂತ ಆಶಿಸೋಣ…!!














