ಚಿತ್ರದುರ್ಗ: ರಾಜಕಾರಣಿಗಳು ಹಾಗೂ ಸ್ವಾಮಿಗಳಿಗೆ ನಿವೃತ್ತಿ ಎಂಬುದಿಲ್ಲ. ಆದರೆ ಮಠದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಯೋಗ್ಯ ಉತ್ತರಾಧಿಕಾರಿಯನ್ನು ರೂಪಿಸುವುದು ಅಗತ್ಯ. ಸಾಣೇಹಳ್ಳಿ ಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಬೇಕೆಂಬ ಆಶಯವನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದೆ ಎಂದು ಸಾಣೇಹಳ್ಳಿ ತರಳಬಾಳು ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ತಮ್ಮ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯ ತರಳಬಾಳು ಜಗದ್ಗುರು ಶಿವಕುಮಾರ ಶ್ರೀಗಳು 60ನೇ ವಯಸ್ಸಿಗೆ ನಿವೃತ್ತಿಯಾಗಿ, 65ನೇ ವಯಸ್ಸಿನವರೆಗೆ ಸೇವಾಕಾರ್ಯ ಮಾಡಿದ್ದರು. ಅವರ ಮಾರ್ಗದರ್ಶನ ನಮಗೆ ಆದರ್ಶವಾಗಿದೆ ಎಂದರು.
ನಾವು ಕೂಡ 60ನೇ ವಯಸ್ಸಿನಲ್ಲಿ ಸಮಾಜ ಬಾಂಧವರಿಗೆ ಈ ವಿಷಯ ತಿಳಿಸಿ, ಮತ್ತೊಬ್ಬರನ್ನು ಪೀಠಕ್ಕೆ ನೇಮಕ ಮಾಡಿಕೊಳ್ಳುವಂತೆ ಹೇಳಿದ್ದೆವು. ಗರಡಿಯಲ್ಲಿ ಪಳಗಿದವರಿಗೆ ಜವಾಬ್ದಾರಿ ನೀಡಿದರೆ ಉತ್ತಮವಾಗಿ ಮುನ್ನಡೆಯುವ ಸಾಧ್ಯತೆ ಇರುತ್ತದೆ. ಈ ವೇದಿಕೆಯ ಮೂಲಕ ಮತ್ತೊಮ್ಮೆ ಆ ವಿಚಾರವನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಯಾರನ್ನಾದರೂ ರಾಜಕಾರಣಿಯನ್ನಾಗಿ ಮಾಡಬಹುದು. ಆದರೆ ಯೋಗ್ಯ ಸ್ವಾಮೀಜಿಯನ್ನು ರೂಪಿಸುವುದು ಸುಲಭದ ಕೆಲಸವಲ್ಲ. ಸ್ವಾಮಿಯಾಗಲು ಯೋಗ್ಯತೆ ಇರುವಂತೆ ಮಕ್ಕಳನ್ನು ಬೆಳೆಸಬೇಕು. ಮಕ್ಕಳನ್ನು ಕೊಡಿ ಎಂದು ಕೇಳಿದರೆ ಎಷ್ಟು ಮಂದಿ ಮುಂದೆ ಬರುತ್ತಾರೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಬಸವ ಮಂಟಪ ಕೃತಿ ವಿವಾದಕ್ಕೆ ಆಕ್ರೋಶ: ಬಸವ ಮಂಟಪ ಕೃತಿ ವಿವಾದದ ಕುರಿತು ಮಾತನಾಡಿದ ಶ್ರೀಗಳು, 12ನೇ ಶತಮಾನದಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳು ಇಂದಿಗೂ ಮುಂದುವರಿದಿವೆ. ಅಂತಹ ಹಿತಾಸಕ್ತಿಗಳೊಂದಿಗೆ ರವಿ ಹಂಜ್ ಕೂಡ ಸೇರಿಕೊಂಡಿದ್ದಾರೆ. ಬಸವಣ್ಣ ಮತ್ತು ಶರಣರಿಗೆ ಅವಮಾನ ಮಾಡುವಂತಹ ಕೃತಿಯನ್ನು ಪ್ರಕಟಿಸಿ ಜನರ ಮುಂದಿಟ್ಟಿದ್ದಾರೆ ಎಂದು ಆರೋಪಿಸಿದರು.
ಕೃತಿಯ ವಿರುದ್ಧ ಇಷ್ಟೊಂದು ಪ್ರತಿಭಟನೆಗಳು ನಡೆಯುತ್ತವೆ ಎಂದು ರವಿ ಹಂಜ್ ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಕೇರಳದಲ್ಲಿ ವಿಮಾನ ಹತ್ತುವ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಆದರೂ ತಾನು ಬರೆದಿರುವುದೇ ಸತ್ಯ ಎಂದು ಅವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ರವಿ ಹಂಜ್ ಅವರ ತಲೆಗೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವ ವಿಚಾರ ಪ್ರಸ್ತಾಪಿಸಿದ ಅವರು, ತಲೆ ತೆಗೆಯುವುದು ನಮ್ಮ ಕೆಲಸವಲ್ಲ; ತಲೆಯಲ್ಲಿ ಇರುವ ಕಸ ತೆಗೆಯುವುದು ನಮ್ಮ ಕೆಲಸ ಎಂದು ಮಾರ್ಮಿಕವಾಗಿ ಹೇಳಿದರು.
ಬಸವ ಮಂಟಪ ಕೃತಿಯನ್ನು ಪ್ರಕಟಿಸಿದವರಷ್ಟೇ ಅಲ್ಲದೆ, ಅದಕ್ಕೆ ಪ್ರೋತ್ಸಾಹ ನೀಡಿದವರ ಮೇಲೆಯೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 75 ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.





















