ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಸಿರಿಗನ್ನಡಂ ಗೆಲ್ಗೆ… ಸಿರಿಗನ್ನಡಂ ಬಾಳ್ಗೆ… ಜಯ ಹೇ ಕರ್ನಾಟಕ ಮಾತೆ… ಬಾರಿಸು ಕನ್ನಡ ಡಿಂಡಿಮವ… ಕನ್ನಡವೇ ನನ್ನುಸಿರು….!
ನವೆಂಬರ್ ತಿಂಗಳಲ್ಲಿ ಈ ಘೋಷಣೆಗಳು ಮೊಳಗಲಾರಂಭಿಸುತ್ತವೆ. ಎಪ್ಪತ್ತು ವರ್ಷಗಳಿಂದ ಇವೇ ಘೋಷಣೆಗಳು… ನವೆಂಬರ್ ಎಂದರೆ ಕನ್ನಡದ ಕಿಚ್ಚು ಮತ್ತು ಆವೇಶದ ಭರಾಟೆ ಮಾತುಗಳು. ಈ ವರ್ಷವೂ ಇವನ್ನೇ ಕೇಳಲಿದ್ದೀರಿ. ಮುಂದಿನ ಏಳು ದಶಕಗಳಲ್ಲೂ ಈ ಘೋಷಣೆಗಳು ಬದಲಾಗಲ್ಲ ಬಿಡಿ!.
ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಪರಿವರ್ತನೆ ಎಂದರೆ ನಾಡಿನ ವಿಚಾರವಂತರು, ಸಾಹಿತಿಗಳು, ಕನ್ನಡವನ್ನು ಕಸುಬಾಗಿಸಿಕೊಂಡವರು, `ಅನ್ನದ ಭಾಷೆಯಾಗಲಿ ಕನ್ನಡ’ ಎಂಬ ಹೊಸ ಶ್ಲೋಗನ್!
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆಯಬೇಕು; ಕನ್ನಡ ಮೊದಲ ಭಾಷೆಯಾಗಬೇಕು; ಕನ್ನಡ ಆಡಳಿತ ಭಾಷೆಯಾಗಬೇಕು ಇವಿಷ್ಟು ಈಗ ಹೊಸ ಸೇರ್ಪಡೆ ಎನ್ನಬಹುದೇನೋ…?
ಈ ಘೋಷಣೆಗಳು ಕೂಡ ಇನ್ನೂ ದಶಕಗಳ ಕಾಲ ಯಾವ, ಯಾರ ಅಪ್ಪಣೆ ಇಲ್ಲದೇ ಮೊಳಗುತ್ತಲೇ ಇರುತ್ತವೆ ನವೆಂಬರ್ ಬಂತೆಂದರೆ…!!
ತಥಾಕಥಿಕ ಬರಹಗಾರರು, ಕಾಳಜಿಯುಳ್ಳವರು, ಸಾಹಿತಿಗಳು, ಡೈಲಾಗ್ ಕಿಂಗ್ಗಳಿರುವವರೆಗೆ ಈ ಘೋಷಣೆಗಳಿಗೆ ಬರವೂ ಬಾರದು. ಕನ್ನಡದ ನೆಲ- ಜಲ- ಕನ್ನಡತನ- ಸಂಸ್ಕೃತಿಗಳು, ಕನ್ನಡದ ಸ್ವಾಭಿಮಾನ ಠೇಂಕಾರಕ್ಕೆ ಬರ ಬಂದು, ಗರ ಬಡಿದರೂ ಘೋಷಣೆಗಳಿಗೆ ಖಂಡಿತ ಬರ ಬರಲು ಸಾಧ್ಯವಿಲ್ಲ.
ಐಟಿ ಕಂಪನಿಯ ಉದ್ಯೋಗಾಕಾಂಕ್ಷಿ ತರುಣಿಯೋರ್ವಳು ಇತ್ತೀಚೆಗೆ ಒಂದು ವಿಡೀಯೋ ಹಾಕಿದ್ದಾರೆ. `ರೆಸ್ಯೂಮ್ನಲ್ಲಿ (ಸ್ವ ಪರಿಚಯ) ಉದ್ಯೋಗಾಕಾಂಕ್ಷಿಗಳು ಮಾತೃಭಾಷೆ ಕನ್ನಡ ಎಂದು ನಮೂದಿಸಿದರೆ ಸಾಕು; ಇಂಥವುಗಳನ್ನು ಸೀದಾ ಕಸದ ಬುಟ್ಟಿಗೆ ಎಸೆಯುವ ಕಾರ್ಯ ವ್ಯವಸ್ಥಿತವಾಗಿ ಎಲ್ಲೆಡೆ ನಡೆಯುತ್ತಿದೆ’ ಎಂದು.
ಅದೇ ಹಿಂದಿ ಭಾಷಿಕ, ತೆಲಗು, ತಮಿಳು, ಮಲಯಾಳಿ ಮಾತೃಭಾಷೆ ಎಂದು ನಮೂದಿಸಿದರೆ ನೇರವಾಗಿ ಸಂದರ್ಶನಕ್ಕೆ ಆಹ್ವಾನ ಬರುತ್ತದೆ. ಇದು ಬೆಂಗಳೂರಿನ, ಕನ್ನಡದ ರಾಜಧಾನಿಯ ಉದ್ಯೋಗಾಕಾಂಕ್ಷಿಗಳ ಗೋಳು ಎಂದೂ ಆಕೆ ಹೇಳಿದ್ದಾರೆ. ಕನ್ನಡ ಮಾತೃಭಾಷೆ ಎಂದು ಹೇಳಿದವ ಎಷ್ಟೇ ಜಾಣ ಇರಲಿ; ಎಷ್ಟೇ ಕುಶಲಮತಿ ಇರಲಿ, ಆತನ ರೆಸ್ಯೂಮ್ಗಳು `ಕಬು’ ಸೇರುತ್ತವೆ. ಅಂದರೆ ಆ ತರುಣಿಯೇ ಹೇಳಿದಂತೆ ಬಹುತೇಕ ಕಂಪನಿಗಳ ಎಚ್ಆರ್ಗಳು ತೆಲಗು, ತಮಿಳು, ಮಲಯಾಳಿ ಮತ್ತು ಹಿಂದಿ ಭಾಷಿಕರು. ಕಡಿಮೆ ಸಂಬಳಕ್ಕಾಗಿ ಅವರನ್ನು ಮೊದಲು ಸೇರ್ಪಡೆ ಮಾಡಿಕೊಳ್ಳುತ್ತಾರೆ. ನಂತರ ಆ ಮಂದಿಗೆ ಸೌಲಭ್ಯ ಒದಗಿಸಿ ಬೆಳೆಸುತ್ತಾರೆ.
ಸರಿ. ಈ ಕಂಪನಿಗಳ ಬೆಂಗಳೂರಿನ ಎಚ್ಆರ್ಗಳು ಇಂತಹ ಕುತ್ಸಿತ ಬುದ್ಧಿಯನ್ನು ತೋರಿಸಿದರೆ, ಅದೇ ಕೇರಳ, ಚೆನ್ನೈ, ಮುಂಬೈ, ದೆಹಲಿ, ಲಕ್ನೋ ಕಂಪನಿಗಳಲ್ಲಿಯ ಎಚ್ಆರ್ಗಳು ಕರ್ನಾಟಕದ ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುವುದಿಲ್ಲ!
ಕನ್ನಡ ಭಾಷಿಕರಿಗೆ ಎರಡಲಗಿನ ಕೊರೆತ. ಹೀಗಾಗಿಯೇ ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಲವತ್ತು ಲಕ್ಷಕ್ಕೂ ಅಧಿಕ ವಲಸಿಗರು ಆಗಮಿಸಿದ್ದಾರೆಂದು ಸ್ವತಃ ಮುಖ್ಯಮಂತ್ರಿಗಳೇ ಇತ್ತೀಚೆಗೆ ಘೋಷಿಸಿದ್ದರು. ಈ ಸಂಖ್ಯೆ ಇಷ್ಟೇ ಅಲ್ಲ. ಎಪ್ಪತ್ತು ಲಕ್ಷದ ಸನಿಹ ಬಂದಾಗಿದೆ!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇನೋ ಕನ್ನಡಿಗರಿಗೆ ಉದ್ಯೋಗ ನಿರಾಕರಿಸುವ ಕಂಪನಿಗಳ ವಿರುದ್ಧ ಗುಡುಗಿ, ಎಚ್ಚರಿಸಿ, ಎಕ್ಸ್ ಖಾತೆಯಲ್ಲಿ ಬರೆದು ತಾಕೀತು ಮಾಡಿದ್ದಾರೆ. ಆದರೆ ಇದರಿಂದ ಕನ್ನಡಿಗರಿಗೆ ನ್ಯಾಯ ಸಿಗಲ್ಲ.
ಯುವ ಕನ್ನಡಿಗ, ನಿರುದ್ಯೋಗಿ ಕನ್ನಡಿಗ, ವಿದ್ಯಾವಂತ, ಅರ್ಹ ಕನ್ನಡಿಗರೆಲ್ಲ ಅಪೇಕ್ಷಿಸುವುದು ಈ ನೆಲದಲ್ಲಿಯ ತಮ್ಮ ಬದುಕು ಮತ್ತು ಉದ್ಯೋಗದ ಹಕ್ಕನ್ನು ಮತ್ತು ನ್ಯಾಯವನ್ನು. ಈ ನೆಲದ ನೀರು, ವಿದ್ಯುತ್, ಮಣ್ಣು, ಗಾಳಿ, ಅನ್ನ-ಆಹಾರ ಎಲ್ಲವನ್ನೂ ಬಳಸಿಕೊಳ್ಳುವ (ಅದೂ ರಿಯಾಯ್ತಿ ದರದಲಿ) ಸಂಸ್ಥೆಗಳಿಗೆ ನಮ್ಮ ಜನ ಬೇಡವೆಂದರೆ ಹೇಗೆ? ಇದನ್ನು ಕೇವಲ `ಎಕ್ಸ್’ ಖಾತೆಯ ಎಚ್ಚರಿಕೆಯಿಂದ ಸರಿ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲವಲ್ಲ…?!
ಇನ್ನು ವಲಸಿಗಿರಿಂದ ಈ ನೆಲದ ಮೇಲಾಗುತ್ತಿರುವ ಸಮಸ್ಯೆಯಾದರೆ, ಕನ್ನಡ ಸಂಸ್ಕೃತಿಯ ಮೇಲಿನ ಪ್ರಹಾರ ಕೂಡ ಜೋರಾಗಿದೆ. ಇಡೀ ಬೆಂಗಳೂರಿನಲ್ಲಿ ಕನ್ನಡ ಭಾಷಿಕರು ಅಲ್ಪಸಂಖ್ಯಾತರಾಗಿದ್ದಾರೆ. ಬೃಹತ್ ಕಂಪನಿಗಳಲ್ಲಿ ಕನ್ನಡಿಗ ಕಡೆಗಣಿತನಾಗಿದ್ದಾನೆ. ಮಲಯಾಳಿ, ತಮಿಳು, ತೆಲಗು, ಹಿಂದಿ ಲೋಕಗಳೇ ಸೃಷ್ಟಿಯಾಗಿವೆ.
ಸಿಂಹ ಘರ್ಜನೆಯ ಸ್ವಾಭಿಮಾನಿ ಬಾಳಾಸಾಹೇಬ್ ಠಾಕ್ರೆ ಅವರು ಕೆಲ ದಶಕಗಳ ಹಿಂದೆಯೇ `ಮುಂಬೈನಲ್ಲಿ ನೆಲೆಸುತ್ತೀರಾದರೆ ಅಥವಾ ಮಹಾರಾಷ್ಟ್ರದಲ್ಲಿ ವಾಸಿಸುತ್ತೀರಿ ಎಂದಾದರೆ ಮರಾಠಿಗರಾಗಿ’ ಎಂದು ಎಚ್ಚರಿಸಿ, ಅದು ಈಡೇರುವಂತೆ ಅವರು ನೋಡಿಕೊಂಡರು.
ಲಾಲೂ ಪ್ರಸಾದ್ ರೈಲ್ವೆ ಮಂತ್ರಿಯಾಗಿದ್ದಾಗ ದೇಶಾದ್ಯಂತ ಬಿಹಾರಿಗಳೇ ರೈಲ್ವೆಯ ಕಬ್ಜಾ ಪಡೆದುಕೊಂಡರೇನೋ ಎನ್ನುವಷ್ಟರ ಮಟ್ಟಿಗೆ ತುಂಬಿಕೊಂಡಿದ್ದರು. ಈಗಲೂ ಅಲ್ಲಿ ಬಿಹಾರಿಗಳದ್ದೇ ಪಾರುಪತ್ಯ. ನೈಋತ್ಯ ರೈಲ್ವೆ ವಲಯ ಸೃಷ್ಟಿಯ ಮೊದಲು ತಮಿಳು, ತೆಲಗು ಜೋರಾಗಿತ್ತು. ಅವರದ್ದೇ ಪಾರಪತ್ಯವಿತ್ತು. ಈಗ ಕರ್ನಾಟಕದ ಪ್ರತ್ಯೇಕ ನೈಋತ್ಯ ವಲಯವಾದರೂ ಮುಂದುವರಿದಿದೆ.
ಗ್ರಾಮೀಣ ಬ್ಯಾಂಕುಗಳು, ಐಬಿಪಿಎಸ್ಗಳಲ್ಲಿ ಮೊದಲು ಪ್ರಾದೇಶಿಕ ಪ್ರತಿಭಾವಂತರಿಗೆ ಪ್ರಾತಿನಿಧ್ಯ ದೊರಕುತ್ತಿತ್ತು. ಆದರೆ ಇತ್ತೀಚೆಗೆ ಹಿಂದಿ, ಇಂಗ್ಲಿಷ್ ಪರೀಕ್ಷೆಗೆ ಮಾತ್ರ ಅವಕಾಶ ನೀಡಿ ಪ್ರಾದೇಶಿಕ ಯುವಕರ ಪ್ರವೇಶಕ್ಕೆ ಕಡಿವಾಣ ಹಾಕಿದೆ. ಕಳೆದ ವರ್ಷ ನಡೆದ ಐಬಿಪಿಎಸ್ ಫಲಿತಾಂಶವೇ ಇದಕ್ಕೆ ನಿದರ್ಶನ. ಕನ್ನಡಿಗರು, ಕರ್ನಾಟಕ ಸರ್ಕಾರ ಕನ್ನಡದಲ್ಲೇ ಪರೀಕ್ಷೆ ನಡೆಸುವಂತೆ ಮಾಡಿದ ಆಗ್ರಹಕ್ಕೆ ಮನ್ನಣೆ ದೊರಕಿಲ್ಲ. ರೈಲ್ವೆ ಕೂಡ ಹೋರಾಟ ಮಾಡಿದಾಗ ಬೆದರಿದಂತೆ ಮಾಡಿ, ನಂತರ ಅದೇ ಚಾಳಿ!
ಕಳೆದ ವರ್ಷ ಎಚ್ಎಎಲ್ನಲ್ಲಿ ನೂರ ಐವತ್ತು ತಂತ್ರಜ್ಞರ ನೇಮಕವಾಯಿತು. ಕೈ ಎಣಿಸುವಷ್ಟು ಮಾತ್ರ ಕನ್ನಡಿಗರು ಅಲ್ಲಿ ಆಯ್ಕೆಯಾದರು. ಉಳಿದವರೆಲ್ಲ ಹಿಂದಿ, ಮಲಯಾಳಿ, ತಮಿಳು ಭಾಷಿಕರು. ತರುಣಿ ಮಾತೃಭಾಷೆ ಕನ್ನಡ ಎನ್ನುವವರ ಅರ್ಜಿಗಳನ್ನು ಕಬುಗೆ ಎಸೆಯಲಾಗುತ್ತಿದೆ ಎನ್ನುವುದನ್ನು ಬಹಿರಂಗ ಪಡಿಸಿದ್ದರಲ್ಲಿ ಯಾವ ಉತ್ಪ್ರೆಕ್ಷೆಯೂ ಇಲ್ಲ. ಯಾವ ಕಂಪನಿಗಳೂ ತಾವು ಹಾಗೆ ಮಾಡಿಲ್ಲ ಅಥವಾ ಆಗುತ್ತಿಲ್ಲ ಎಂದೂ ಸ್ಪಷ್ಟನೆ ನೀಡಿಲ್ಲ. ಆದರೆ ಐಟಿ ದಿಗ್ಗಜರು ಮಾತ್ರ, `ಕೌಶಲ್ಯವಿಲ್ಲ; ಇನ್ನಷ್ಟು ಶಿಕ್ಷಣ- ಕೌಶಲ್ಯಕ್ಕೆ ಪ್ರಾಧಾನ್ಯತೆ ನೀಡಿ’ ಎನ್ನುವ ಅದೇ ಬಾಲಿಷ ಮಾತು ಆಡುತ್ತಿದ್ದಾರೆ. ಅಂದರೆ ಕನ್ನಡಿಗರಿಗೆ ಕೌಶಲ್ಯಕ್ಕೆ ಬರವಿದೆಯೇ ಸ್ವಾಮೀ?
ಮುಖ್ಯಮಂತ್ರಿ ಎಚ್ಚರಿಕೆ ನೀಡಿರುವುದು ಸಾಂದರ್ಭಿಕವಾದರೂ, ಸಮೀಕ್ಷೆ ನಡೆಸಿ, ಕರ್ನಾಟಕದ ನೆಲದಲ್ಲಿರುವ ಕಂಪನಿಗಳು ಯಾವ ಭಾಷಿಕರ ಅರ್ಜಿಗಳನ್ನು ಅಂಗೀಕರಿಸಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಯಾವ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ? ಯಾವ ಮಾನದಂಡ ಪಾಲಿಸಿವೆ? ಅಲ್ಲಿಯ ಎಚ್ಆರ್ಗಳು, ಮುಖ್ಯಸ್ಥರುಗಳು ಎಲ್ಲಿಯವರು? ಇವೆಲ್ಲವುಗಳನ್ನು ಆಂತರಿಕ ಅಧ್ಯಯನ ಮತ್ತು ಇಂಟೆಲಿಜೆನ್ಸ್ ಮೂಲಕ ಡೇಟಾ ಸಂಗ್ರಹ ಮಾಡುವುದು ಈಗ ಅಗತ್ಯವಿದೆ.
2024ರ ಜುಲೈ 15ರ ಸಂಪುಟ ಸಭೆಯಲ್ಲಿ ಕರಡು ಮಸೂದೆಯೊಂದು ಒಪ್ಪಿಗೆ ಪಡೆಯಿತು. ಕರ್ನಾಟಕದ ಕೈಗಾರಿಕೆಗಳು, ಕಾರ್ಖಾನೆಗಳು, ಕಂಪನಿಗಳು, ಖಾಸಗಿ ಸಂಸ್ಥೆಗಳು, ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ `ಕರ್ನಾಟಕ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ 2024′ ಎಂಬುದೇ ಈ ಕರಡು ಮಸೂದೆಯಾಗಿತ್ತು.
ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಲ್ಲಿ ಶೇ. 100ರಷ್ಟು ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು. ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 50ರಷ್ಟು ಮೀಸಲಾತಿ ಇರಬೇಕು. ನಾನ್ ಮ್ಯಾನೇಜ್ಮೆಂಟ್ ಪೋಸ್ಟ್ಗಳಲ್ಲಿ ಶೇ. 70ರಿಂದ 75ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬ ಮಸೂದೆಯನ್ನು ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಜುಲೈ 15, 2024 ರಂದು ಸಂಪುಟದಲ್ಲಿ ಮಂಡಿಸಿ, ಒಪ್ಪಿಗೆ ಪಡೆದುಕೊಂಡರು.
ತಕ್ಷಣವೇ ಶುರುವಾಯ್ತು ನೋಡಿ. `ಅಯ್ಯೋ ಬೇಡ. ಇದರಿಂದ ಹೊರ ರಾಜ್ಯದಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಹಾಗೇ ಇಲ್ಲಿರುವ ಕಂಪನಿಗಳು ಬೇರೆಡೆ ಹೋಗಬಹುದು. ಇದು ಭಾರತೀಯ ಒಕ್ಕೂಟ. ಎಲ್ಲಿಯೂ ಕೆಲಸ ಮಾಡಬಹುದು ಎಂಬ ಕಾಯ್ದೆಗೆ ವಿರುದ್ಧ’ ಎಂದೆಲ್ಲ ಬೊಬ್ಬೆ ಶುರುವಾಯ್ತು.
ಹೀಗಾಗಿ ಸಂಪುಟದ ಒಪ್ಪಿಗೆ ದೊರೆತೂ ಕರಡು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಇದನ್ನು ಮಂಡಿಸಿ ನಾವೆಲ್ಲ ಬದ್ಧರಿದ್ದೇವೆ, ಒಪ್ಪಿಗೆ ಕೊಡುತ್ತೇವೆ ಎಂದು ಪ್ರತಿಪಕ್ಷದವರೂ ಹೇಳಲಿಲ್ಲ. ಕೆಲ ಶಾಸಕರು ಮತ್ತು ಮಂತ್ರಿಗಳು ಮಸೂದೆ ವಿರುದ್ಧವೇ ಪರೋಕ್ಷವಾಗಿ ಅಭಿಪ್ರಾಯಪಟ್ಟರು.
ಸರಿ. ಈಗ ಉದ್ಯಮಪತಿಗಳು, ಅಂದು ವಿರೋಧಿಸಿದವರು ಕೂಗು ಮಾರಿಗಳಾದರೇ ವಿನಾ ಕನ್ನಡಿಗರಿಗೆ ನ್ಯಾಯ ಸಿಗಲೇ ಇಲ್ಲವಲ್ಲ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿಗೆ ಹೊರಗಿನಿಂದ ಬಂದವರದ್ದೇ ಪಾರಮ್ಯವಾಗಿದೆ. ಸ್ಥಳೀಯರಿಗೆ ಉದ್ಯೋಗವೇ ದೊರಕುತ್ತಿಲ್ಲ. `ಮಾತೃಭಾಷೆ ಕನ್ನಡ’ ಎನ್ನುವುದು ಬೇರೆ ಭಾಷಿಕರಿಂದ ಅವಗಣನೆಗೆ ಒಳಗಾಯಿತು ಹಾಗೇ ಹೊರರಾಜ್ಯದವರ ಅಟ್ಟಹಾಸವೂ ಈಗ ಮುಂದುವರಿದಿದೆ.
ಇಲ್ಲಿ ಶಿಕ್ಷಣ ಮತ್ತು ಕೌಶಲ್ಯ ದೊರಕಿಸಿಕೊಡಿ, ಅನ್ಯಭಾಷಿಕರನ್ನು ತಡೆಯಬೇಡಿ ಎಂದು ಮತ್ತೆ ಪರ ರಾಜ್ಯದ ಒಲವಿನವರು ಧ್ವನಿ ಎತ್ತಿದ್ದಾರೆ. ಈ ಹಿಂದಿನ ಡಾ.ಸರೋಜಿನಿ ಮಹಿಷಿ ವರದಿ, ಆ ನಂತರದ ಪುರುಷೋತ್ತಮ ಬಿಳಿಮಲೆ ಮತ್ತು ಡಾ.ಬರಗೂರು ರಾಮಚಂದ್ರಪ್ಪ ವರದಿ, ಅಲ್ಲದೇ ಕನ್ನಡ ಪ್ರಾಧಿಕಾರದ ಹತ್ತಾರು ವರದಿಗಳೆಲ್ಲವೂ ಶೈತ್ಯಾಗರದಲ್ಲೇ ಉಳಿದು, ಅನುಷ್ಠಾನ ಬದ್ಧತೆಯೇ ಯಾವ ಸರ್ಕಾರಗಳಿಗೂ ಇಲ್ಲದಾಗಿದೆ!
2024, ಜುಲೈ 15ರ ಸಂಪುಟ ಸಭೆಯ ಕರಡು ಪ್ರತಿಯನ್ನು ಶಾಸನವನ್ನಾಗಿಸಲು ಇದು ಸಕಾಲ. ವಿಳಂಬವಾಯಿತು ನಿಜ. ಆದರೆ ಈಗ ಈ ಕಾಯ್ದೆ ತರುವುದು ಅಗತ್ಯ. ಕನ್ನಡಿಗರಿಗೆ ಇರುವ ಔದಾರ್ಯ ಬೇರೆ ಭಾಷಿಕರಿಗೆ ಇಲ್ಲವಲ್ಲ. ಕಾಯ್ದೆ ವಿರೋಧಿಸುವರು ಈ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ನೈತಿಕತೆ ಇಲ್ಲದೇ ಹೋದಾಗ ಹೀಗಾಗುತ್ತೆ ಎಂಬುದನ್ನು ಜಡ ಮನಸ್ಸುಗಳು ಅರಿತುಕೊಳ್ಳಬೇಕು.
ಇಲ್ಲಿ ಮಾತೃಭಾಷೆ ಕನ್ನಡದವರಿಗೇ ಪ್ರಥಮ ಆದ್ಯತೆ ಎನ್ನುವುದನ್ನು ಸರ್ಕಾರ ಈ ರಾಜ್ಯೋತ್ಸವದ ದಿನ ಸುಸ್ಪಷ್ಟವಾಗಿ ಘೋಷಿಸಲಿ. ಎಲ್ಲ ಉದ್ಯಮ- ಉದ್ಯೋಗಕ್ಕೆ ಕನ್ನಡವೇ ಬೆನ್ನೆಲುಬು ಎನ್ನುವುದನ್ನು ಅಧಿಕೃತವಾಗಿ ಸಾರಲಿ.
ಗುತ್ತಿಗೆ ನೀಡುವುವರಿಂದ ಹಿಡಿದು, ಆಟೊ ಓಡಿಸುವವರ ಆದಿಯಾಗಿ; ಹಾಗೂ ಶಾಲಾ- ಕಾಲೇಜು, ಉದ್ಯಮ- ಉದ್ಯೋಗದಿಂದ ಹಿಡಿದು ಕರ್ನಾಟಕದ ಬದುಕಿನ ಎಲ್ಲ ಅಂಗಗಳೆಲ್ಲವೂ ಕನ್ನಡ ಮಾತೃಭಾಷೆಯ ನೆರಳಲ್ಲೇ ನಡೆಯಬೇಕು… ಈ ಅಂಶವನ್ನು ಕಡ್ಡಾಯಗೊಳಿಸುವ ತಾಕತ್ತು ಪ್ರದರ್ಶಿಸಲು ಈಗ ಸರ್ಕಾರಕ್ಕೆ ಸಕಾಲ.. ಅಲ್ಲವೇ !?
















