SK Home Ad
Home ಅಂಕಣ ಅಂಕಣ ಬರಹ | ಹುಬ್ಬಳ್ಳಿ ರೈತ ಹೋರಾಟ: ಹತ್ತಿಕ್ಕದಿರಿ, ಸ್ಪಂದಿಸಿ

ಅಂಕಣ ಬರಹ | ಹುಬ್ಬಳ್ಳಿ ರೈತ ಹೋರಾಟ: ಹತ್ತಿಕ್ಕದಿರಿ, ಸ್ಪಂದಿಸಿ

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ರೈತ ಮತ್ತೆ ಬೀದಿಗೆ ಇಳಿದಿದ್ದಾನೆ
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ರೈತರ ಬೃಹತ್ ಪ್ರತಿಭಟನೆ 1980-83ರ ಕಾಲದ ರೈತ ಚಳವಳಿಯನ್ನು ನೆನಪಿಸಿದೆ. ಈಗ ಕಬ್ಬು ಬೆಳೆಗಾರರು, ವಿಶೇಷವಾಗಿ ರಾಜ್ಯ ಮತ್ತು ಪಕ್ಕದ ಮಹಾರಾಷ್ಟ್ರದ ಕಬ್ಬು ಬೆಳೆಯುವ ರೈತರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.

ಕಬ್ಬಿನ ಬೆಲೆ ನಿರ್ಧಾರ (ಎಫ್‌ಆರ್‌ಪಿ) ಹಾಗೂ ಎಥಿನಾಲ್ ಖರೀದಿ, ಸಕ್ಕರೆಯ ಎಂಎಸ್‌ಪಿ ದರ ಇತ್ಯಾದಿ ಪ್ರಮುಖ ಬೇಡಿಕೆಗಳ ಈಡೇರಿಸುವುದು, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕರ ವ್ಯವಹಾರಗಳ ಖಾತೆಗೆ ಸಂಬಂಧಿಸಿದ್ದು. ಇದು ಸಚಿವ ಪ್ರಲ್ಹಾದ ಜೋಶಿ ಅವರ ಖಾತೆ. ಕೃಷಿ, ಸಹಕಾರ, ಪೆಟ್ರೋಲಿಯಂ ಸಚಿವರ ಖಾತೆಗೂ ಸಂಬಂಧಿಸಿದ್ದು ಎನ್ನಿ.

ರೈತರಿಗೆ ಸುಲಭವಾಗಿ ಸನಿಹದಲ್ಲಿ ಸಿಗುವವರು ಜೋಶಿ ಆಗಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ಸಚಿವರ ತವರು ನೆಲ ಹುಬ್ಬಳ್ಳಿಯಲ್ಲಿ ಬೀದಿಗಿಳಿದರು. ಅವರ ಬೇಡಿಕೆ ಟನ್ ಕಬ್ಬಿಗೆ ಕನಿಷ್ಠ 5500 ರೂಪಾಯಿ ಕೊಡಬೇಕು. ಸಕ್ಕರೆ ದರ ಎಂಎಸ್‌ಪಿ 60 ರೂಪಾಯಿಗೆ ನಿರ್ಧರಿಸಬೇಕು. ಎಫ್‌ಆರ್‌ಪಿ ಹೆಚ್ಚಿಸಬೇಕು. ಹಾಗೆಯೇ ರಾಜ್ಯದಲ್ಲಿ ಉತ್ಪನ್ನವಾಗುವ ಎಥಿನಾಲ್‌ಅನ್ನು ಸಂಪೂರ್ಣವಾಗಿ ಖರೀದಿಸಬೇಕು ಎನ್ನುವುದು.

ಜೊತೆಗೆ ಈ ನಾಡಿನ ಜೀವನಾಡಿ ಕಳಸಾ-ಬಂಡೂರಿ (ಮಹದಾಯಿ) ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎನ್ನುವುದೂ ರೈತರ ಬೇಡಿಕೆಯಾಗಿತ್ತು. ಎಲ್ಲಕ್ಕೂ ಪ್ರಮುಖವಾಗಿ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿ ರೈತ ಪರ ಶಿಫಾರಸುಗಳ ಮಾಡಿರುವ ಡಾ.ಸ್ವಾಮಿನಾಥನ್ ವರದಿಯನ್ನು ಅಂಗೀಕರಿಸಬೇಕು ಎನ್ನುವುದು.

ರೈತರ ಬೇಡಿಕೆ ನಿರ್ಲಕ್ಷಿಸುವಂತಿಲ್ಲ. ಇವರು ಕೇಳುತ್ತಿರುವುದು ಬಹುತೇಕ ನ್ಯಾಯಯುತವೇ. ಇಡೀ ದೇಶದಲ್ಲಿ ಪೆಟ್ರೋಲಿಯಂ, ಕಾರ್ಪೋರೇಟ್ ಉದ್ಯಮಿಗಳ, ಶಿಕ್ಷಣ ಸಂಸ್ಥೆಗಳ, ಗುತ್ತಿಗೆದಾರರ ಲಾಬಿಗಳಷ್ಟೇ ಸಕ್ಕರೆ ಲಾಬಿ ಕೂಡ ರಾಜಕಾರಣವನ್ನು ನಿಯಂತ್ರಿಸುತ್ತಿದೆ. ರಾಜಕಾರಣಿಗಳ, ಆಳುವವರ ಹೊಟ್ಟೆಯನ್ನು ಭರಪೂರ `ದುಂಡ’ಗೆ ಮಾಡುತ್ತಿದೆ!

ಕಳೆದ ವರ್ಷವೂ ಕರ್ನಾಟಕದ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದರು. ಸರ್ಕಾರದ ಬೆಂಬಲ ಬೆಲೆಗೆ ಆಗ್ರಹಿಸಿ… ಕಾರ್ಖಾನೆಗಳು ಮೋಸ ಮಾಡುತ್ತಿವೆ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಕೊಡುತ್ತಿಲ್ಲ ಎಂದು ಆಕ್ರೋಶ ತೋಡಿಕೊಂಡಿದ್ದರು. ಆಗ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡಾ ಬೀದಿಗಿಳಿದಿದ್ದರು..

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ, ರಾಜ್ಯ ಸರ್ಕಾರ ತಾನು ಟನ್‌ಗೆ 50ರೂ, ಕಾರ್ಖಾನೆಗಳು 50ರೂಪಾಯಿ ಹೆಚ್ಚಿಸಿ ಸಮಾಧಾನ ಮಾಡಿತ್ತು. ತಕ್ಷಣ ಸಮಾಧಾನ ಮಾಡಲು ಕಟಾವು ಅರ್ಧದಷ್ಟಾಗಿತ್ತು. ಆರೋಪವೂ ಬಂತು, ಆಗ ಸಕ್ಕರೆ ಕಾರ್ಖಾನೆ ಮಾಲೀಕರೇ ರೈತರನ್ನು ಎತ್ತಿ ಕಟ್ಟಿ ಇನ್ನಷ್ಟು ಕಬ್ಬು ಒಣಗಲೆಂದು ಈ ರೀತಿ ಮಾಡಿದ್ದಾರೆಂಬ ಆರೋಪವೂ ಬಂದಿತ್ತು. ಅದೇನೇ ಇರಲಿ. ಕಳೆದ ಹಂಗಾಮು ಮುಗಿಯಿತು. ಈ ಸಾರೆ ಕೇಂದ್ರ ಸರ್ಕಾರ ಇದೇ ಅಕ್ಟೋಬರ್ 15ರಿಂದ ಕಬ್ಬು ನುರಿಸುವಿಕೆ ಆರಂಭವಾಗಬೇಕು ಎಂದು ಆದೇಶ ಹೊರಡಿಸಿದೆ. ಕೇನ್ ಆಯುಕ್ತರು, ಸಹಕಾರಿ ಸಂಘಗಳ ಮುಖ್ಯಸ್ಥರು, ಸಕ್ಕರೆ ಕಾರ್ಖಾನೆಗಳ ನಿಯಂತ್ರಕರು ಎಲ್ಲ ಒತ್ತಡ ಆರಂಭಿಸಿದ್ದಾರೆ. ಆದರೆ ಬೆಳೆಗಾರ ಹೇಳುವುದು ಈ ಸಾರೆ ಕಬ್ಬು ಉತ್ಪಾದನೆ ಕಡಿಮೆ; ಮೇಲಾಗಿ ಇನ್ನೂ ಬಲಿತಿಲ್ಲ. ಈಗ ಇಳುವರಿ ಇಲ್ಲದ ಕಬ್ಬನ್ನು ನುರಿಸಿದರೆ ರೈತನಿಗೇ ಹಾನಿ ಎಂದು.

ಒಂದು ರೀತಿಯ ಪ್ರಾಣ ಸಂಕಟ. ಇನ್ನೂ ಕಬ್ಬು ಬಲಿತಿಲ್ಲ. ಈಗಲೇ ಕಟಾವಿಗೆ ಕಾರ್ಖಾನೆಗಳು ದುಂಬಾಲು ಬಿದ್ದಿವೆ. ರೈತರಿಗೆ ಎಫ್‌ಆರ್‌ಪಿ 9.5 ಕೂಡ ಸಿಗಲ್ಲ. ಈಗ ಕಬ್ಬನ್ನು ಕೊಡುವುದು ಎಂದರೆ ಕಬ್ಬಿನ ಗಾಣಕ್ಕೆ ಕೈ ಕೊಟ್ಟಂತೆ…!

ರೈತರಿಗೆ ಎಫ್‌ಆರ್‌ಪಿ, ಎಂಎಸ್‌ಪಿ ದರ ಘೋಷಣೆ ಪೂರ್ವವೇ ಕಾರ್ಖಾನೆ ತೆರೆದರೆ ರೈತರ ಒಂದು ವರ್ಷದ ಉತ್ಪನ್ನಕ್ಕೇ ಮೋಸ ಮಾಡಿದಂತೆ. ಕರ್ನಾಟಕದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಬಹುತೇಕ ಕಾರ್ಖಾನೆಗಳು ರಾಜಕಾರಣಿಗಳದ್ದೇ, ಶಾಸಕರು- ಮಂತ್ರಿಗಳದ್ದೇ ಆಗಿವೆ!! ಅಥವಾ ಸಹಕಾರಿ ಸಕ್ಕರೆ ಕಾರ್ಖಾನೆಗಳಿದ್ದರೂ ಅವೆಲ್ಲವೂ ರಾಜಕಾರಣಿಗಳ ಕಪಿಮುಷ್ಟಿಯಲೇ ಇವೆ. ಹಾಗಾಗಿ ಕಬ್ಬು ಬೆಳೆಗಾರ ಕೂಡ ಉದ್ಧಾರ ಆಗಲ್ಲ. ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಹ ನಷ್ಟ ಅಥವಾ ಸಾಲ ಸೋಲದಿಂದ ಹೊರಬರಲ್ಲ. ಇವುಗಳ ನಿರ್ವಹಣೆ ನಡೆಸುವವರು ಮಾತ್ರ ಬಲಾಢ್ಯರಾಗುತ್ತಲೇ ಹೋಗುತ್ತಿದ್ದಾರೆ!!

ಈ ಎಲ್ಲ ಮೋಸಗಳನ್ನೂ, ಮೋಡಿಯನ್ನೂ ಕಂಡುಂಡ ರೈತ ಈಗ ಜಾಗೃತಗೊಂಡತಿದೆ. 5500 ರೂಪಾಯಿ ಪ್ರತಿ ಟನ್‌ಗೆ ದರ ಕೊಡಿ. ಸಕ್ಕರೆ ಇಳುವರಿ ಪ್ರಮಾಣದಲ್ಲಿ ಮೋಸ ತಪ್ಪಿಸಿ, ಕಾರ್ಖಾನೆಗಳ ಕಬ್ಬು ಖರೀದಿಸಿ ಹಣ ಕೊಡದೇ ಇರುವ `ಉದ್ರಿ’ ಪದ್ಧತಿಯನ್ನು ನಿಲ್ಲಿಸಿ. ಸಕ್ಕರೆ ಇಳುವರಿ ತಪಾಸಣೆಗೆ ಪ್ರಯೋಗಾಲಯಗಳನ್ನು ಸ್ಥಾಪಿಸಿ ಎನ್ನುವ ಬೇಡಿಕೆಗಳ ಜೊತೆಗೆ, ಒಂದೊಂದು ರಾಜ್ಯಕ್ಕೆ ಒಂದೊಂದು ಕಬ್ಬು ಮತ್ತು ಸಕ್ಕರೆ ನೀತಿಯನ್ನು ಕೇಂದ್ರ ತೆಗೆದು ಹಾಕಬೇಕು ಎನ್ನುವುದು ರೈತರ ಪ್ರಬಲ ಒತ್ತಾಯ.

ಪಂಜಾಬ್, ಗುಜರಾತ್, ಮಹಾರಾಷ್ಟ್ರ ರೈತರಿಗೆ ದರ ಹಾಗೂ ಇಳುವರಿ ನೀತಿ ಬೇರೆ. ಕರ್ನಾಟಕ, ತಮಿಳುನಾಡು, ಆಂಧ್ರದ ರೈತರ ಕಬ್ಬು ಖರೀದಿ ನೀತಿಯೇ ಬೇರೆ. ಇಳುವರಿ ಕೂಡ ಅಷ್ಟೇ. 335 ರೂಪಾಯಿ ಎಫ್‌ಆರ್‌ಪಿ ನಿರ್ಧರಿಸುವ ಸರ್ಕಾರ, ಕರ್ನಾಟಕದ ಕಬ್ಬಿಗೆ ಶೇ 9.5 ಎಫ್‌ಆರ್‌ಪಿಯನ್ನು 10.5ಕ್ಕೆ ಏರಿಸಿ, ಕಾಣದ ರೀತಿಯಲ್ಲಿ ರೈತರಿಗೆ ಮೋಸವನ್ನೇ ಮಾಡಿತು. ಆಗ 10.5ಎಫ್‌ಆರ್‌ಪಿ ದರಕ್ಕಿಂತ ಕಡಿಮೆ ಇಳುವರಿ ಇರುವವರಿಗೆ ಕಡಿಮೆ ದರ ಹಾಕಿತ್ತು. ಒಂದೆಡೆ ಎಫ್‌ಆರ್‌ಪಿ ದರ ಹೆಚ್ಚಿಸಿದಂತೆ ಮಾಡಿ, ಇನ್ನೊಂದೆಡೆ ಕಿತ್ತುಕೊಂಡಿತ್ತು.

ಹಾಗೇ ಇಳುವರಿ ಪ್ರಮಾಣ, ಕಾರ್ಖಾನೆ ಮಾಲೀಕರ ಮೋಸಗಳದ್ದೇ ಒಂದು ಪ್ರತ್ಯೇಕ ವಿಷ ವರ್ತುಲ. ಈ ಸಾರೆ ಎಲ್‌ನಿನೋ ಪರಿಣಾಮದಿಂದಾಗಿ ದೇಶಾದ್ಯಂತ ಕಬ್ಬಿನ ಉತ್ಪಾದನೆ ಹಾಗೂ ಇಳುವರಿ ಪ್ರಮಾಣ ಇನ್ನಿಲ್ಲದಂತೆ ಕುಸಿದಿದೆ. ಉತ್ಪಾದನೆಯ ಗುರಿ 340 ಲಕ್ಷ ಮೆಟ್ರಿಕ್ ಟನ್ ಇದ್ದರೂ ಈ ಸಲ 35 ಲಕ್ಷ ಮೆಟ್ರಿಕ್ ಟನ್ ಕಬ್ಬು ಬೆಳೆ ಕಡಿಮೆಯಾಗುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ 2025-26ರಲ್ಲಿ 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಇದರಲ್ಲಿ 6.10 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕಬ್ಬನ್ನು ಕಾರ್ಖಾನೆಗಳಿಗೆ ಪೂರೈಸಲಾಗಿತ್ತು. ಇದರಿಂದ 256 ಲಕ್ಷ ಮೆಟ್ರಿಕ್ ಟನ್ ನುರಿಸಿ, 50 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಮಾಡಲಾಗಿತ್ತು. ಕರ್ನಾಟಕದ ಸಕ್ಕರೆ ಬಳಕೆ 25ರಿಂದ 28 ಲಕ್ಷ ಮೆಟ್ರಿಕ್ ಟನ್ ಒಂದು ವರ್ಷಕ್ಕೆ. ಇನ್ನುಳಿದ ಶೇ. 50ರಷ್ಟು ಸಕ್ಕರೆಯನ್ನು ಪಶ್ಚಿಮ ಬಂಗಾಳ, ಮಣಿಪುರ, ಕೇರಳ ಹೀಗೆ ಕಬ್ಬು ಬೆಳೆಯದ ಬಹುತೇಕ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.

ಈಗ ಸದ್ಯಕ್ಕೆ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ಕೇವಲ 9 ಲಕ್ಷ ಮೆಟ್ರಿಕ್ ಟನ್ ಮಾತ್ರ ದಾಸ್ತಾನು ಇದೆ. ಎಲ್‌ನಿನೋ ಪರಿಣಾಮ ಅರಿತ ಉದ್ಯಮಿಗಳು, ಕಾರ್ಪೋರೇಟ್ ಕಂಪನಿಗಳು, ದಲ್ಲಾಳಿಗಳು ಈಗಾಗಲೇ ಸಂಗ್ರಹಿಸಿಟ್ಟುಕೊಂಡು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಈಗ ಕಿರುಕುಳ ವ್ಯಾಪಾರದಲ್ಲಿ ಕೆ.ಜಿ ಸಕ್ಕರೆ ಬೆಲೆ 80 ರೂಪಾಯಿ ದಾಟಿದೆ. ದುರಂತ ಎಂದರೆ ಇದ್ಯಾವುದರ ಲಾಭವೂ ಬೆಳೆಗಾರರಿಗೆ ದೊರೆಯುತ್ತಿಲ್ಲ.

ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಾಡಿರುವುದೇನು ಗೊತ್ತಾ? ಬ್ರೆಝಿಲ್ ಮತ್ತು ಇತರ ದೇಶಗಳಿಂದ 50 ರೂಪಾಯಿ ದುಬಾರಿ ದರದಲ್ಲಿ ಸಕ್ಕರೆ ಖರೀದಿಸಿ ತಂದಿರುವುದು! ಇದನ್ನೇ ಹುಬ್ಬಳ್ಳಿ ಪ್ರತಿಭಟನೆಯಲ್ಲಿ ರೈತ ಕೇಳಿದ್ದು. ಹೊರ ದೇಶದಿಂದ ದುಬಾರಿ ಬೆಲೆ ಕೊಟ್ಟು ತಂದಿದ್ದೀರಿ. ನಮಗೆ ಮಾತ್ರ ಏಕೆ ಕೊಡುತ್ತಿಲ್ಲ ಎಂದು. ಆದ್ದರಿಂದ ಎಂಎಸ್‌ಪಿ ದರದ ಹೆಚ್ಚಳವನ್ನು ರೈತರು ಬಯಸಿದ್ದಾರೆ.

ಈ ಸಾರೆ ಎಥಿನಾಲ್ ವಿಷಯವನ್ನು ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ. ಈ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥಿನಾಲ್‌ನ ಶೇ 100ರಷ್ಟನ್ನೂ ಕೇಂದ್ರವೇ ಖರೀದಿಸಬೇಕು ಎನ್ನುತ್ತಾರೆ ರೈತರು. ಗುಜರಾತ್, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಉತ್ಪಾದನೆಯಾಗುವ ಎಥಿನಾಲ್‌ಅನ್ನು ಕೇಂದ್ರ ಸರ್ಕಾರ ಖರೀದಿಸುತ್ತಿದೆ. ನಮ್ಮ ರಾಜ್ಯಕ್ಕೆ ಮಾತ್ರ ಉತ್ಪಾದನೆಯಾಗುವ ಶೇ 40, 50, ಅಥವಾ 60ರಷ್ಟು ಮಾತ್ರ ಖರೀದಿಸುತ್ತಿದೆ.

ಏಕೆ ಹೀಗೆ? ಎಥಿನಾಲ್‌ಗೆ ಇಷ್ಟು ಬೇಡಿಕೆ ಇದ್ದರೂ ಕರ್ನಾಟಕದಿಂದ ಮಾತ್ರ ಏಕೆ ಪೂರ್ಣವಾಗಿ ಖರೀದಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ಎಥಿನಾಲ್ ಖರೀದಿಯಿಂದ ಕೇವಲ ಕಬ್ಬಿಗಷ್ಟೇ ಅಲ್ಲ. ಭತ್ತ, ಗೋವಿನ ಜೋಳ ಇತ್ಯಾದಿ ರೈತ ಉತ್ಪನ್ನಗಳಿಗೂ ಬೇಡಿಕೆ ಬರುತ್ತದೆ. ಪೆಟ್ರೋಲಿಯಂ ಲಾಬಿಯಷ್ಟೇ `ಎಥಿನಾಲ್ ಲಾಬಿ-ಹಗರಣ’ ದೇಶಾದ್ಯಂತ ಈಗ ಸದ್ದು ಮಾಡುತ್ತಿದೆ.

ಅದೇನೇ ಇದ್ದರೂ, ರೈತ ಕೇಳಿದ್ದು ಸ್ವಾಮಿನಾಥನ್ ಆಯೋಗದ ವರದಿ ಜಾರಿಯನ್ನು ಎಂಬುದಿಲ್ಲಿ ಮುಖ್ಯ. ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತರ ಆಯೋಗದ ಶಿಫಾರಿಸನಂತೆ ಕನಿಷ್ಟ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ರೈತ ಬೆಳೆಯನ್ನು ಬೆಳೆಯಲು ತಗಲುವ ಸಮಗ್ರ ವೆಚ್ಚಕ್ಕಿಂತ ಕನಿಷ್ಠ ಶೇ. 50ರಷ್ಟು ಹೆಚ್ಚಿಸಲೇಬೇಕು ಎಂಬುದು. ರೈತನ, ಅವನ ಕುಟುಂಬದ ಸ್ವಂತ ದುಡಿಮೆ, ಮಾಡುವ ಖರ್ಚು ವೆಚ್ಚ, ಕೂಲಿ ಆಳುಗಳ ಸಂಬಳ, ಕೃಷಿ ಉತ್ಪನ್ನಗಳ ಮೇಲಿನ ಬಂಡವಾಳ ಎಲ್ಲವನ್ನೂ ಕೂಡ ಪರಿಗಣಿಸಿ ಬಿತ್ತನೆಗೆ ಮುನ್ನವೇ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂಬುದು ಸ್ವಾಮಿನಾಥನ್ ಪ್ರಮುಖ ಶಿಫಾರಸು.

ಸೂಜಿಯಿಂದ ಕಾರುವರೆಗೆ, ಪೆಪ್ಪರಮೆಂಟ್‌ನಿಂದ ಸ್ಟಾರ್ ಹೊಟೇಲ್ ಊಟದವರೆಗೂ ಅದರ ಮಾಲಿಕ, ಉದ್ಯಮಗಳು, ಉದ್ಯಮಿಗಳೇ ದರ ನಿಷ್ಕರ್ಷಿಸುತ್ತಿರುವಾಗ, ರೈತರಿಗೇಕೆ ಮಾರಾಟ ದರವನ್ನು ನಿರ್ಧರಿಸುವ ಹಕ್ಕಿಲ್ಲ ಎನ್ನುವುದು ರೈತರ ಒಕ್ಕೊರಲ ಅನಿಸಿಕೆ. ಹುಬ್ಬಳ್ಳಿಯ ರೈತ ಹೋರಾಟ, ಸ್ಥಳೀಯ ಸಂಸದರೋ, ಶಾಸಕರೋ, ಇಲ್ಲವೇ ಸಚಿವರ ವಿರುದ್ಧವೇ ಎಂದು ತಿಳಿದುಕೊಳ್ಳುವುದಕ್ಕಿಂತ ಗಂಭೀರವಾಗಿ ಹಾಗೂ ವಿಷಯಾಧಾರಿತವಾಗಿ ಪರಿಗಣಿಸಿದರೆ, ನಾಡಿನ ಮಣ್ಣಿನ ಮಕ್ಕಳ ಬವಣೆ ಬಗೆಹರಿಸುವಲ್ಲಿ ಇದೊಂದು ಒಂದು ಮೈಲುಗಲ್ಲಾದೀತು.

ಮಹದಾಯಿ, ಭದ್ರೆ, ಕೃಷ್ಣೆ ಇತ್ಯಾದಿಗಳಲ್ಲಿ ಎಡವಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಈಗ ರೈತರ ಕಣ್ಣೀರು ಒರೆಸುವ ಸದಾವಕಾಶವಿದೆ. ವಿಶೇಷವಾಗಿ ಸಚಿವ ಪ್ರಲ್ಹಾದ ಜೋಶಿಯವರಿಗೆ. ಅಕ್ಟೋಬರ್ 10ರೊಳಗೆ ರೈತರೊಟ್ಟಿಗೆ ಸಭೆ ನಡೆಸುವ ಭರವಸೆ ನೀಡಿರುವ ಜೋಶಿ ಅವರಿಗೆ ರೈತರ ಒಡಲ ಉರಿಯನ್ನು ಶಮನಗೊಳಿಸುವ ಜೊತೆಗೆ, ಸಹಾನುಭೂತಿಯನ್ನು ಗಳಿಸುವ ಅವಕಾಶವೂ ಇದೆ. ಇದರ ಸದ್ಬಳಕೆ ಅವರಿಗೇ ಬಿಟ್ಟಿದ್ದು… ಅಲ್ಲವೇ…!?