SK Home Ad
Home ಅಂಕಣ ಅಂಕಣ ಬರಹ | ಸಿಎಂ ಮಾತಿಗೆ ಸಣ್ಣ ಪ್ರತಿಕ್ರಿಯೆಯೂ ಬೇಡ್ವೇ ಪಿಎಂ ಸರ್!?

ಅಂಕಣ ಬರಹ | ಸಿಎಂ ಮಾತಿಗೆ ಸಣ್ಣ ಪ್ರತಿಕ್ರಿಯೆಯೂ ಬೇಡ್ವೇ ಪಿಎಂ ಸರ್!?

0
3

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಮಾನ್ಯ ಪ್ರಧಾನ ಮಂತ್ರಿಗಳೇ, ಜಗತ್ತು ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಕರ್ನಾಟಕದ ಅಭಿವೃದ್ಧಿಗೆ ನೆರವು ನೀಡಿ. ಯೋಜನೆಗಳಿಗೆ ಅಂಗೀಕಾರ ಕೊಡಿ…

ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಎದಿರು ಈ ಮಾತುಗಳನ್ನಾಡುವ ಮೂಲಕ ಮುತ್ಸದ್ದಿತನ ಮೆರೆದಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಗೌರವಿಸುವುದರಿಂದ ಹಿಡಿದು, ಬೀಳ್ಕೊಡುವವರೆಗೂ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯವರನ್ನು ಹೇಗೆ ಗೌರವಿಸಬೇಕೋ, ಸಾಂವಿಧಾನಿಕವಾಗಿ ಮನ್ನಣೆ ನೀಡಬೇಕೋ, ಸೌಜನ್ಯ- ಸಹಕಾರ ತೋರಬೇಕೋ, ಒಕ್ಕೂಟ ವ್ಯವಸ್ಥೆಯ ಧರ್ಮ ಪಾಲನೆ ಹೇಗೆ ಮಾಡಬೇಕೋ ಅವೆಲ್ಲವುಗಳನ್ನು ಮೆರೆದಿದ್ದಾರೆ!

ಪ್ರಧಾನಿ ಆಗಮಿಸುವ ಪೂರ್ವ ಮೆಟ್ರೋ, ಮೇಕೆದಾಟು ವಿವಾದ, ಕಬ್ಬು ಬೆಳೆಗಾರರ ಸಮಸ್ಯೆ, ಎಲ್ಲಕ್ಕೂ ಹೆಚ್ಚಾಗಿ ರಾಜ್ಯ ಎದಿರಿಸುತ್ತಿರುವ ಬರಗಾಲ ಪರಿಸ್ಥಿತಿಗೆ ನೆರವು ಇವೆಲ್ಲವುಗಳ ವಿವಾದಗಳು ಮೆತ್ತಿಕೊಂಡಿದ್ದವು.

ಮೆಟ್ರೋ ಅಂತೂ ತಾವೇ ಮಾಡಿದ್ದೇವೆ; ಇದು ಕೇಂದ್ರದ ಯೋಜನೆ. ಮೋದಿಯವರ ಕಾರಣದಿಂದಲೇ ಮೆಟ್ರೋ ನೂರು ಕಿಮೀ ವ್ಯಾಪ್ತಿ ದಾಟಿದೆ ಎಂದು ಬಿಜೆಪಿ ಸಂಸದರು, ರಾಜ್ಯ ಪ್ರತಿಪಕ್ಷದ ನಾಯಕರೆಲ್ಲ ಕ್ರೆಡಿಟ್ ವಾರ್‌ಗೆ ಇಳಿದಿದ್ದರು. ಸರ್ಕಾರದ ಕಡೆಯಿಂದ ಪ್ರತಿಯಾದ ಚಾಟಿಯನ್ನು ಬೀಸಲಾಗಿತ್ತು..

ಏನೇ ಇರಲಿ. ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ಎದಿರು ವಿವರಿಸಿದ ಡಿ.ಕೆ. ಶಿವಕುಮಾರ್ ಅವರ ಪರಿ ಮತ್ತು ಅದರ ವಿಧಾನ, ಅವರು ಸಲ್ಲಿಸಿದ ಮನವಿ, ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆ.

ಮೆಟ್ರೋ ಪಿಂಕ್ ಲೈನ್ (ಗುಲಾಬಿ ಮಾರ್ಗ) ಉದ್ಘಾಟನೆ ಸಂದರ್ಭದಲ್ಲಿ ಸಿಎಂ ಅವರು ಪ್ರಧಾನ ಮಂತ್ರಿಗಳನ್ನು ಸ್ವಾಗತಿಸುತ್ತಲೇ, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಮಾಡಿಕೊಂಡಿದ್ದ ಒಪ್ಪಂದದಂತೆ ಭೂಸ್ವಾಧೀನ, ಪಡೆದ ಸಾಲದ ಬಡ್ಡಿ, ಮತ್ತು ಕೇಂದ್ರದ ಅನುದಾನವನ್ನು ಬಿಚ್ಚಿಟ್ಟು ಬೆಂಗಳೂರು ಮೆಟ್ರೋ ಯೋಜನೆಗೆ ಪ್ರಸ್ತುತ ಕೇಂದ್ರದಿಂದ ಶೇಕಡಾ 50:50ರ ಅನುದಾನ ನೀತಿ ಪಾಲನೆಯಾಗಿಲ್ಲ. ಈ ಯೋಜನೆಗೆ ದೆಹಲಿ ಮಾದರಿಯಲ್ಲೇ ಆರ್ಥಿಕ ನೆರವು ನೀಡಿ ಎಂದು ಕೋರಿಕೊಂಡರು.

ಜಾಗತಿಕ ಹಣಕಾಸು ಸಂಸ್ಥೆಗಳು ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿ ವೇಳೆ ಆಗುವ ಬದಲಾವಣೆಗಳಲ್ಲಿ ಬೀಳುತ್ತಿರುವ ಹೆಚ್ಚಿನ ಬಡ್ಡಿ ಕಂತಿನಲ್ಲಿ, ಕೇಂದ್ರವೂ ತನ್ನ ಪಾಲು ಭರಿಸಬೇಕು ಎಂದು ಕೋರಿದರು. ಹಾಗೇ ಶೇ. 75ಕ್ಕೂ ಅಧಿಕ ಪಾಲನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂಬುದರ ಬಗ್ಗೆ ಗಮನ ಸೆಳೆದರು.

ಈಗ ನೂರು ಕಿಮೀ ಮೆಟ್ರೋ ವ್ಯಾಪ್ತಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ. ನಮ್ಮ ಮೆಟ್ರೋ ಕೆಂಪು ಲೈನಿನ ಯೋಜನಾ ವರದಿ ಸಲ್ಲಿಸಿ, ಮಂಜೂರಾತಿಗಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದೇವೆ. ಯೋಜನಾ ವೆಚ್ಚ ಹೆಚ್ಚುತ್ತಿದೆ. ದಯವಿಟ್ಟು ಮಂಜೂರಾತಿ ಕೊಡಿ ಎಂದು ಮನವಿ ಮಾಡುವ ಮೂಲಕ, ಕೇಂದ್ರದಿಂದ ಯೋಜನೆಗೆ ವಿಳಂಬವಾಗುತ್ತಿದೆ ಮತ್ತು ನೆರವು ದೊರೆಯುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಎಲ್ಲರೆದುರು ಬಿಚ್ಚಿಟ್ಟರು.

ಹಾಗೆಯೇ ರಾಜ್ಯದ ಜನತೆ ಎಪ್ಪತ್ತು ವರ್ಷಗಳ ನಂತರ ಇಂತಹ ಭೀಕರ ಬರವನ್ನು ಎದುರಿಸಿ, ಮಳೆ ಇಲ್ಲದೇ ನಲವತ್ತೆಂಟು ಲಕ್ಷ ಹೆಕ್ಟೇರ್‌ಗೂ ಅಧಿಕ ಭೂಮಿ ಬರಡಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಕೇಂದ್ರಕ್ಕೆ ಮೂರು ಮನವಿ ಮಾಡಿಕೊಂಡಿದ್ದೇವೆ. ದಯವಿಟ್ಟು 22,500 ಕೋಟಿ ನೆರವಿನ ಅಗತ್ಯವಿದೆ. ಕೇಂದ್ರ ತಂಡ ಬಂದು ಹೋಗಿದೆ. ಆದರೆ ನೆರವು ಇನ್ನೂ ಬಂದಿಲ್ಲ. ರೈತರಿಗಾಗಿ ಸ್ಪಂದಿಸಿ ಎಂದು ಕೋರಿದಾಗ ಸಭೆಯಲ್ಲಿದ್ದವರೆಲ್ಲ ಹೌದೆಂದು ತಲೆಯಾಡಿಸಿದ್ದರು. ಇದು ಸಿಎಂ ತೋರಿದ ಮುತ್ಸಿದ್ದಿತನವೇ ಸರಿ.

ಕಬ್ಬಿನ ಬೆಳೆಗಾರರು ಮುಷ್ಕರ ಮಾಡುತ್ತಿದ್ದಾರೆ. ಕಬ್ಬಿಗೆ 5,500 ರೂಪಾಯಿ (ಟನ್‌ಗೆ) ದರ ಕೇಳಿದ್ದಾರೆ. ಆದರೂ ಎಂಎಸ್‌ಪಿ (ಕನಿಷ್ಠ ಮಾರಾಟ ದರ) ಎಂಟು ವರ್ಷಗಳಿಂದ ಏರಿಕೆಯಾಗಿಲ್ಲ. ಎಂಎಸ್‌ಪಿ ದರವನ್ನು ಹೆಚ್ಚಿಸಿ, ಎಥಿನಾಲ್ ಖರೀದಿ ಪ್ರಮಾಣ ಹೆಚ್ಚಿಸಿ ಎಂದು ಕೂಡ ಸಿಎಂ ಕೋರಿದ್ದು ಗಮನ ಸೆಳೆಯಿತು.

ಮೇಕೆದಾಟು ಯೋಜನೆಗೆ ಯಾವುದೇ ಅಡೆತಡೆ ಇಲ್ಲ. ಮಂಜೂರಾತಿ ಕೊಡಿಸಿ. ಇದರಿಂದ ಬೆಂಗಳೂರು ನಗರ ಸೇರಿದಂತೆ ಹತ್ತಾರು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಹಾಗೇ ತಮಿಳುನಾಡಿಗೂ ಸರಾಗವಾಗಿ ನೀರು ಲಭ್ಯವಾಗುತ್ತದೆ. ಈ ಕಡತದ ಅಂತಿಮ ತೀರ್ಮಾನ ಕೇಂದ್ರದ ಬಳಿಯೇ ಉಳಿದಿದೆ.

ದೇಶದಲ್ಲಿ ಜಿಎಸ್‌ಟಿ ಪಾವತಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ನಮಗೆ ತೆರಿಗೆಯ ನ್ಯಾಯಯುತ ಪಾಲು ಬರುತ್ತಿಲ್ಲ. ಈ ಸಂಬಂಧ ಹತ್ತಾರು ಮನವಿಗಳನ್ನು ಸಲ್ಲಿಸಿದ್ದೇವೆ. ನಮ್ಮ ನ್ಯಾಯಯುತ ಪಾಲು ಕೊಡಿ. ಕೇಂದ್ರದ ಯೋಜನೆಗಳನ್ನೆಲ್ಲ ಅನುಷ್ಠಾನಗೊಳಿಸಿದ ರಾಜ್ಯ ನಮ್ಮದು. ಆದರೆ ಕೇಂದ್ರ ಪಾಲಿನಲ್ಲಿ ಅನ್ಯಾಯವಾಗಿದೆ. ಕೇಂದ್ರ ಸರ್ಕಾರವೇ ಘೋಷಿಸಿದ ಭದ್ರಾ ಮೇಲ್ದಂಡೆ ಯೋಜನೆಯ 5300 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿ.

ರಾಜ್ಯದ ಮೂಲಭೂತ ಸೌಲಭ್ಯ, ಬೆಂಗಳೂರಿನ ಮೆಟ್ರೋ ವಿಸ್ತರಣೆ ಹಾಗೂ ಡಬಲ್ ಡೆಕ್ಕರ್ ನಿರ್ಮಾಣ ಹಾಗೂ ಟ್ರಾಫಿಕ್ ಸಮಸ್ಯೆಯ ಪರಿಹಾರಕ್ಕೆ ಅಂಡರ್‌ಗ್ರೌಂಡ್ ಯೋಜನೆ ಮಂಜೂರಾತಿ ಕೋರಿದ್ದೇವೆ ಎಂಬೆಲ್ಲ ಅಂಶಗಳನ್ನೂ ಡಿ.ಕೆ. ಶಿವಕುಮಾರ್ ಮನವಿ ರೂಪದಲ್ಲಿ ವಿವರಿಸುತ್ತಿರುವಾಗ ಪ್ರಧಾನಿ ಕೂಡ ಮೌನವಾಗಿ ಎಲ್ಲವನ್ನೂ ಆಲಿಸಿದರು.

ಕೇಂದ್ರವನ್ನು ಪ್ರಧಾನಿ ಎದಿರು ಶ್ಲಾಘಿಸಲೂ ಸಿಎಂ ಸಣ್ಣತನ ತೋರಲಿಲ್ಲ. ಮೈಸೂರು ತಾರಾಲಯ ಉದ್ಘಾಟನೆ ವೇಳೆ, `ಇದು ನಿರ್ಮಲಾ ಸೀತಾರಾಮನ್ ಅವರ ಆಸಕ್ತಿಯ ಕೊಡುಗೆ’ ಎಂದು ಬಣ್ಣಿಸಿದರು. ಆದರೆ, ಪ್ರಧಾನಿಯವರು ಈ ಮನವಿಗೆ, ರಾಜ್ಯದ ಬೇಡಿಕೆಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ!. ಭಾಷಣದಲ್ಲಿರಬಹುದು. ವೈಯಕ್ತಿಕವಾಗಿಯೂ ಇರಬಹುದು. ಅಧಿಕಾರಿಗಳ ಮಟ್ಟದಲ್ಲಿ ಮಾತನಾಡುವುದೂ ಇರಬಹುದು. ಎಲ್ಲಿಯೂ ಪ್ರತಿಕ್ರಿಯೆಯೇ ಬರಲಿಲ್ಲ. ಯಾವ ಭರವಸೆ ಇಲ್ಲದೇ ಮರಳಿದರು. ಏಕೆ? ಇದು ಜನ ಕೇಳುತ್ತಿರುವ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರು ಮುಜುಗರ ಪಡುವಂತಾಗಿದೆ.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ಜೂನ್ 26ರಂದು ಪ್ರಥಮ ಬಾರಿಗೆ ದೆಹಲಿಯ ಪ್ರಧಾನಿ ಕಚೇರಿಯಲ್ಲೇ ಭೇಟಿಯಾಗಿ ಹದಿನೆಂಟು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದರು. ಶ್ರೀಗಂಧ ಗಣೇಶ ವಿಗ್ರಹ ನೀಡಿ ಇವನ್ನು ದಯವಿಟ್ಟು ಪೂರೈಸಿ ಎಂದು ಕೋರಿದ್ದರು.

ಆಗಲೂ ಇದ್ದುದು ಬೆಂಗಳೂರು ಮೆಟ್ರೋ, ಮೇಕೆದಾಟು, ಮಹದಾಯಿ, ಬರ, ಕಸ್ತೂರಿ ರಂಗನ್ ವರದಿ, ರಾಜ್ಯದ ತೆರಿಗೆ ಪಾಲು ಇವುಗಳೇ. ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆಯನ್ನು ಆಗ ಪ್ರಧಾನಿ ನೀಡಿದ್ದರು. ಇದರಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಡಿಕೆ ವಿಶ್ವಾಸ ವ್ಯಕ್ತಪಡಿಸಿದ್ದರು.

ಈಗ ಐದು ತಿಂಗಳು ಸಂದಿವೆ. ಹದಿನೆಂಟು ಬೇಡಿಕೆಗಳಲ್ಲಿ ಯಾವುವೂ ಈಡೇರಿಲ್ಲ. ರಾಜ್ಯಕ್ಕೆ ಆಗುತ್ತಿರುವ ತಾರತಮ್ಯದ ಕುರಿತು ಸಿದ್ದರಾಮಯ್ಯನವರು, ಅವರ ಸ್ಟೈಲೇ ಬೇರೆ ಇತ್ತಲ್ಲ, ಸಿಎಂ ಆದ ನಂತರ ಕೇಂದ್ರದ ಅನುದಾನ ತಾರತಮ್ಯ ವಿರೋಧಿಸಿ ಎಲ್ಲ ಕಾಂಗ್ರೆಸ್ ಶಾಸಕರೊಂದಿಗೆ ದೆಹಲಿಯಲ್ಲಿ ಒಂದು ದಿನದ ಧರಣಿ ನಡೆಸಿ ಗಮನ ಸೆಳೆದಿದ್ದರು. ನೀತಿ ಆಯೋಗದ ಸಭೆಗೂ ಹೋಗಲಿಲ್ಲ.

2024ರಲ್ಲಿ ಅತಿವೃಷ್ಟಿಯಿಂದ ಇಡೀ ರಾಜ್ಯ ಸಂಕಷ್ಟಕ್ಕೆ ಒಳಗಾದ ಬಗ್ಗೆ ನೆರವು ಕೋರಿ ಪ್ರಧಾನಿಯವರನ್ನು ಭೇಟಿಯೂ ಆಗಿದ್ದರು. ಆದರೆ ನೆರವು ಬಾರದಿದ್ದಾಗ, ಬೇಡಿಕೆಗಳಿಗೆ ಸ್ಪಂದನೆ ದೊರೆಯದೇ ಇದ್ದಾಗ, ಕೇಂದ್ರ ಹಳದಿ ಕಣ್ಣಿನ ಧೋರಣೆ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರದ ಮಂತ್ರಿಗಳು, ಸಂಸದರನ್ನು ಗುರಿಯಾಗಿಸಿ, `ಪ್ರಧಾನಿ ಎದಿರು ನಿಲ್ಲುವ ಧೈರ್ಯ ನಿಮಗಿಲ್ಲ’ ಎಂದು ಖಂಡಿಸಿದ್ದರು.

ಈಗಲೂ ಅಷ್ಟೇ. ಕಸ್ತೂರಿ ರಂಗನ್ ವರದಿ ಹಾಗೂ ಬರ ಕುರಿತು ಮೂರು ದಿನಗಳ ವಿಶೇಷ ಅಧಿವೇಶನ ನಡೆಸಿದ ರಾಜ್ಯ ಸರ್ಕಾರ, ಪಕ್ಷಾತೀತವಾಗಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ, ವಾಸ್ತವ ಸ್ಥಿತಿ ಅಧ್ಯಯನಕ್ಕೆ ಸಮಿತಿಯನ್ನು ಮಾಡಿ ಕೇಂದ್ರದ ಗಮನ ಸೆಳೆದಿತ್ತು. ಏಳನೇ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಮಾಡಿತ್ತು. ಈವರೆಗೆ ಸ್ಪಂದನೆ ಬಂದಿಲ್ಲ.

ಕಬ್ಬಿನ ಎಂಎಸ್‌ಪಿ ಕುರಿತು ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ. ಈಗ ಸರಿಸುಮಾರು ಒಂದು ತಿಂಗಳಾದರೂ ಕೇಂದ್ರ ಸಮಿತಿಯ ವರದಿ ಇಲ್ಲ. ರೈತರ ಕಬ್ಬು ಕಾರ್ಖಾನೆ ಸೇರುತ್ತಿವೆ. ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಲಿ ಎಂದು ಕೇಂದ್ರದ ಸಚಿವರು ಕರ್ನಾಟಕದ ಕಡೆ ಬೊಟ್ಟು ಮಾಡಿದ್ದಾರೆ. `ಅನ್ನದಾತನಾದ ನಾನು ನಿಮ್ಮ ಮನೆ ಮುಂದೆ ಬಂದಿದ್ದೇನೆ..’ ಸಚಿವ ಪ್ರಲ್ಹಾದ ಜೋಶಿ ಎಂದು ಗುಡುಗಿದ ರೈತರೇ ಕಬ್ಬು ಒಣಗುವುದನ್ನು ನೋಡಲಾಗದೇ ಕಾರ್ಖಾನೆಗಳಿಗೆ ಕಬ್ಬನ್ನು ಹೊಡೆಯುತ್ತಿದ್ದಾರೆ.

ಇವುಗಳನ್ನೆಲ್ಲ ಕೇಳಲು ಕೇಂದ್ರದ ಬಳಿ ಸರ್ವಪಕ್ಷ ನಿಯೋಗದೊಂದಿಗೆ ತೆರಳಲು ಸಿಎಂ ಸಮಯವನ್ನು ಕೇಳಿದ್ದಾರೆ. ಭಾಷಣದಲ್ಲೂ ಮೊನ್ನೆ ಪ್ರಧಾನಿ ಎದಿರು ಕೋರಿದ್ದಾರೆ. ಈವರೆಗೆ ಸಮಯ ಸಿಕ್ಕಿಲ್ಲ!

ಸಮಯ ಕೊಡಿಸುವ ತಾಕತ್ತು ನಿಮಗಿಲ್ಲವೇ ಎಂದು ಸಂಸದರು ಹಾಗೂ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರನ್ನು ರಾಜ್ಯದ ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ ಮೊದಲಾದವರು ಕೇಳಿ, ಕೇಂದ್ರ ಸಚಿವರ ಸಾಮರ್ಥ್ಯವನ್ನು ಅಣಕಿಸುತ್ತಿದ್ದಾರೆ.

ಈಗ ಸಾರ್ವಜನಿಕವಾಗಿಯೇ ಜನ, ಪ್ರಧಾನ ಮಂತ್ರಿಗಳೇಕೆ ಯಾವ ಅಂಶಗಳ ಕುರಿತೂ ಪ್ರತಿಕ್ರಿಯಿಸಲೇ ಇಲ್ಲವಲ್ಲ ಎಂದು ಕೇಳಲಾರಂಭಿಸಿದ್ದಾರೆ. ಬಿಜೆಪಿ ನಾಯಕರೇನೋ, ಕೇಂದ್ರ ಸರ್ಕಾರ ಎಲ್ಲವನ್ನೂ ಪರಿಶೀಲಿಸುತ್ತಿದೆ; ಕಾಲಾವಧಿ, ದಾಖಲೆಗಳು, ನಿಖರ ಅಂಕಿ-ಸಂಖ್ಯೆಗಳು ಬೇಕಾಗಿವೆ; ಇವರು ಗ್ಯಾರಂಟಿಗಾಗಿ ಖಜಾನೆ ಖಾಲಿ ಮಾಡಿ ಕೇಂದ್ರದಿಂದ ನೆರವು ಕೇಳುತ್ತಿದ್ದಾರೆ ಎಂಬ ಆರೋಪವನ್ನು ಪುನರುಚ್ಚರಿಸಿದೆ!

ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಜಾಕಲ್ಯಾಣ'ದ ಮನೋಭಾವವನ್ನು ಈಗ ಕಾಂಗ್ರೆಸ್ ನೆನಪು ಮಾಡುತ್ತಿದೆ. ಢರೋಪ್ಯ ದೇಶಗಳ ಪ್ರತಿನಿಧಿಗಳು ಕರ್ನಾಟಕಕ್ಕೆ ಬಂದು ನಂತರ ದೆಹಲಿಗೆ ಬರುತ್ತಿದ್ದಾರೆ ಎಂದು ಇಲ್ಲಿಯ ಬೆಳವಣಿಗೆಗೆ ಹೆಮ್ಮೆ ಪಟ್ಟವರು ವಾಜಪೇಯಿ. ಎಷ್ಟು ಸ್ಪಂದನೆ, ನೆರವು ಆಗ ದೊರೆಯುತ್ತಿದ್ದವು ಎಂಬುದನ್ನು ನೆನಪಿಸಿಕೊಳ್ಳಲಾಗುತ್ತಿದೆ. ಆಗಲೂ ಇಲ್ಲಿ ಡಬಲ್ ಎಂಜಿನ್ ಸರ್ಕಾರ ಇರಲಿಲ್ಲ. ಆದರೆ, ಕೇಳುವ, ಸ್ಪಂದಿಸುವ, ಕೈಜೋಡಿಸುವ ರಾಗ, ದ್ವೇಷ ಇಲ್ಲದ ಪ್ರಜಾಭೂಮಿಕೆ ಇತ್ತು! ಕೇವಲ ನಾಲ್ಕು ವರ್ಷಗಳ ಹಿಂದೆ ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕೇಂದ್ರದ ಮಲತಾಯಿ ಧೋರಣೆಗಳ ಬಗ್ಗೆ ಆರೋಪಗಳು ಮೇರೆ ಮೀರಿದಂತೆಯೇ ಇದ್ದವು !! ಕೇಂದ್ರ-ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ ಯಡಿಯೂರಪ್ಪ, ಬೊಮ್ಮಾಯಿ ನೆರವಿಗೆ ಅಂಗಾಲಾಚಿದರೂಜಾಣ ಕಿವುಡುತನ’ ಕ್ಕೆ ಸುಸ್ತಾಗಿದ್ದರು! ಪ್ರಧಾನ ಮಂತ್ರಿಗಳ ಮುಂದೆ ಮುಖ್ಯಮಂತ್ರಿ ತೋರಿದ ಮುತ್ಸದ್ದಿತನಕ್ಕೆ ಗೌರವ ಬೇಕಲ್ಲವೇ? ಮುಖ್ಯಮಂತ್ರಿ ಇಟ್ಟಿರುವುದು ಜನ ನಿತ್ಯ ಬವಣೆ ಪಡುತ್ತಿರುವ ವಿಷಯಗಳನ್ನು; ಹಲವು ವರ್ಷಗಳಿಂದ ಜೀವಂತ ಇರುವ ಪ್ರಚಲಿತ ಬೇಡಿಕೆಗಳು. ಒಕ್ಕೂಟ ವ್ಯವಸ್ಥೆಯ ಬೇರುಗಳನ್ನು ಗೌರವಿಸಲೇಬೇಕಿದೆಯಲ್ಲವೇ..