SK Home Ad
Home ಅಂಕಣ ಅಂಕಣ ಬರಹ | ಕೃಷ್ಣೆ-ತುಂಗೆಯ ಕಣ್ಣೀರಿಗೆ ನೆಪದ ಶಿಖರಗಳೇಕೆ?

ಅಂಕಣ ಬರಹ | ಕೃಷ್ಣೆ-ತುಂಗೆಯ ಕಣ್ಣೀರಿಗೆ ನೆಪದ ಶಿಖರಗಳೇಕೆ?

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ರಾಜ್ಯದ ನೀರಾವರಿ ಯೋಜನೆಗಳೆಲ್ಲ ಅಪೂರ್ಣ ಸ್ಥಿತಿಯಲ್ಲಿ ಬಳಲುತ್ತಿರುವುದೇಕೆ? ವಿಷಯ ಸಿಂಪಲ್. ಹೊರ ರಾಜ್ಯಗಳಲ್ಲಿ ರೈತರ ಭೂಮಿಗೆ ನೀರು ಹರಿಯಲು ಮೊದಲು ಕಾಲುವೆಗಳನ್ನು ನಿರ್ಮಿಸುತ್ತಾರೆ. ಆ ನಂತರ ಆಣೆಕಟ್ಟು ಕಟ್ಟುತ್ತಾರೆ. ಇದಾದ ಮೇಲೆ ಪುನರ್ವಸತಿ ಪ್ರದೇಶಗಳ ನಿರ್ಮಾಣ ಕಾರ್ಯ ನಡೆಯುತ್ತದೆ.

ಕರ್ನಾಟಕದಲ್ಲಿ ಹಾಗಿಲ್ಲ. ಯೋಜನೆ ಪ್ರಸ್ತಾಪ ಆಗುತ್ತಿದ್ದಂತೇ, ಐಬಿ, ಸರ್ಕ್ಯೂಟ್ ಹೌಸ್ ಮತ್ತು ಅಧಿಕಾರಿಗಳ ವಸತಿ ಗೃಹಗಳನ್ನು ಕಟ್ಟುತ್ತಾರೆ. ಆ ಮೇಲೆ ಆಣೆಕಟ್ಟೆ. ತದನಂತರ ರೈತರ ಹೊಲಗಳಿಗೆ ನೀರು ಹರಿಯುವ ಕಾಲವೆಗಳು!!

ನೀರಾವರಿ ವ್ಯವಸ್ಥೆ-ಅವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿರುವ ಸಹೋದ್ಯೋಗಿ ಮಿತ್ರ ಥಟ್ಟನೆ ಈ ವಿಷಯ ಹೇಳಿದಾಗ, ವಾಸ್ತವಿಕತೆಗೆ ಎಷ್ಟು ಸನಿಹವಲ್ಲವೇ' ಎನಿಸಿತು. ಕರ್ನಾಟಕದ ನೀರಾವರಿಯಷ್ಟೇ ಅಲ್ಲ, ವಿದ್ಯುತ್, ಕೈಗಾರಿಕೆಯಂಥ ಬೃಹತ್ ಯೋಜನೆಗಳನ್ನೇ ತೆಗೆದುಕೊಳ್ಳಿ,ಇವು ಪೂರ್ಣಗೊಂಡಿವೆ’ ಎಂದು ಫಲಕ ಕಾಣುತ್ತೀರಾ? ಇಲ್ಲ.

ನೀರಾವರಿ ಯೋಜನೆಗಳಿಗೆ `ಇನ್ನು ಕೇವಲ ನಿರ್ವಹಣಾ ಅನುದಾನ ಮಾತ್ರ; ಕಾಮಗಾರಿ ಬಾಕಿ ಉಳಿದಿಲ್ಲ’ ಎಂದು ಘೋಷಿಸುವ ಮಟ್ಟಕ್ಕೆ ಈ ಎಪ್ಪತ್ತು ವರ್ಷಗಳವರೆಗೆ ಒಂದೂ ಯೋಜನೆ ಕಾಣದು. ಕಾವೇರಿಯಿಂದ ಕಾರಂಜಾವರೆಗೆ, ಕೈಗಾದಿಂದ ಪೀಣ್ಯವರೆಗೆ ಇದೇ ಕಥೆ.

ಹಿಂದಿನ ನೀರಾವರಿ ಹಾಗೂ ಈಗಿನ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯೋತ್ಸವದ ಕಾರ್ಯಕ್ರಮದ ವೇಳೆ `ಮಹಾರಾಷ್ಟ್ರ ಸರ್ಕಾರ ಭೀಮಾ ನದಿಯ ನೀರನ್ನು ಅಕ್ರಮವಾಗಿ ತಿರುಗಿಸಿ ಸಾಗಿಸುವ ಯೋಜನೆ ರೂಪಿಸುತ್ತಿದೆ; ಕೃಷ್ಣಾ ನದಿಯ ನೀರನ್ನು ಉಜನಿ ಜಲಾಶಯಕ್ಕೆ ವರ್ಗಾಯಿಸುವ ನೂತನ ಯೋಜನೆಯನ್ನು ಗಪ್‌ಚುಪ್ ಆಗಿ ಕೈಗೆತ್ತಿಕೊಂಡಿದೆ. ಇದರಿಂದ ಆಲಮಟ್ಟಿಗೂ ನೀರು ಹರಿದು ಬರುವುದು ನಿಂತೀತು. ಭೀಮಾ ಕರ್ನಾಟಕದಲ್ಲಿ ಬರಿದಾದೀತು. ಕೃಷ್ಣೆಯ ಕಣ್ಣೀರು ಬತ್ತೀತು’ಎಂಬೆಲ್ಲ ಆತಂಕಗಳನ್ನು ತೋಡಿಕೊಂಡರು!

ಹಾಗಂತ, ಕೃಷ್ಣೆಗೆ ಕನ್ನ ಹಾಕುವ ಯೋಜನೆ 22 ವರ್ಷಗಳ ಹಿಂದೆಯೇ ನಡೆದ ಹುನ್ನಾರ. ಆಗ ಸುಶೀಲಕುಮಾರ್ ಶಿಂಧೆ ಮಹರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ 4932 ಕೋಟಿ ರೂಪಾಯಿ ಇರಿಸಿದ್ದರು. ಇದಕ್ಕೆ ಭೀಮಾ ತೀರದ ಜನರೇ ಸರ್ವೋಚ್ಚ ನ್ಯಾಯಾಲಯದವರೆಗೆ ಹೋದಾಗ ನೆರೆ ರಾಜ್ಯ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು.

ಈಗ ಅದೇ ಯೋಜನೆಗಾಗಿ ಮಹಾರಾಷ್ಟç ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. 19 ಸಾವಿರ ಕೋಟಿ ರೂಪಾಯಿ ಯೋಜನೆಗೆ ವಿಶ್ವಬ್ಯಾಂಕ್ ನೆರವು ಪಡೆಯುವ ಪ್ರಯತ್ನವನ್ನು ಆರಂಭಿಸಿದೆ ಎಂದು ಸ್ವತಃ ಅಲ್ಲಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಹೇಳಿದ್ದಾರೆ.

ಜನ ಪ್ರಶ್ನಿಸುತ್ತಿರುವುದು, ಅವರೇನೋ ಯೋಜನೆ ರೂಪಿಸುತ್ತಾರೆ, ನೀವೇನು ಮಾಡಿದಿರಿ? ಎಂದು. ಆಲಮಟ್ಟಿಯಲ್ಲಿ ನಿಂತಿರುವ ನೀರಿನ ಸದ್ಬಳಕೆಯಾಗುತ್ತಿಲ್ಲ. ಬಚಾವತ್ ಐತೀರ್ಪಿನಂತೆ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಂಡಿಲ್ಲ. ಆಲಮಟ್ಟಿ ಆಣೆಕಟ್ಟನ್ನು ಎತ್ತರಿಸಲು ಪರವಾನಗಿ ದೊರೆತರೂ ಕೇಂದ್ರ ಸರ್ಕಾರ ಒಂಬತ್ತು ವರ್ಷಗಳಿಂದ ಗೆಜೆಟ್ ನೊಟಿಫಿಕೇಷನ್ ಮಾಡದೇ, ಆಂಧ್ರ- ತೆಲಂಗಾಣ ರಾಜ್ಯಗಳತ್ತ ಬೆರಳು ತೋರಿಸುತ್ತಿದೆ. ಹನ್ನೆರಡು ವರ್ಷದಲ್ಲಿ ಒಮ್ಮೆಯೂ ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಅಂತರ್ಜಲ ವಿವಾದಗಳ ಕುರಿತು ಒಂದೇ ಒಂದು ಸಭೆ ನಡೆಸಿಲ್ಲ.

ಕರ್ನಾಟಕದ ಮಹದಾಯಿ, ಕಳಸಾ ಬಂಡೂರಿ, ಮೇಕೆದಾಟು, ಎತ್ತಿನಹೊಳೆ, ತುಂಗಭದ್ರಾ ಮೇಲ್ದಂಡೆ, ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳ ಹೆಚ್ಚುವರಿ ಯೋಜನೆ, ಜಲಾಶಯದ ಎತ್ತರ ಇವ್ಯಾವುಗಳಿಗೂ ಪರವಾನಗಿ ದೊರೆತಿಲ್ಲ. ನೀಡುತ್ತಲೂ ಇಲ್ಲ. ಪ್ರತಿ ಯೋಜನೆಗಳಿಗೂ ಒಂದಿಲ್ಲೊಂದು ತಕರಾರು. ಅಥವಾ ನಿರ್ಲಕ್ಷ್ಯ ! ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ!! ಯೋಜನಾ ವೆಚ್ಚಗಳು ಹತ್ತಾರು ಸಾವಿರ ಕೋಟಿಗಳಿಗೆ ಏರಿವೆ. ಹಿಂದೆ 5 ಕೋಟಿ ರೂಪಾಯಿ ಕೊಡಿ. ಕೊಯ್ನಾ ನೀರನ್ನು ಕರ್ನಾಟಕಕ್ಕೆ ಹರಿಸುತ್ತೇವೆ ಎನ್ನುವ ಪ್ರಸ್ತಾವನೆ ಬಂದಾಗ ಆಗ ಉತ್ತರ ಕರ್ನಾಟಕದ ಪ್ರಬಲ ರಾಜಕಾರಣಿ ಬಿ.ಡಿ.ಜತ್ತಿಯವರು `ಎಲ್ಲಿದೆ ದುಡ್ಡು? ಹೇಗೆ ಕೊಡಲಿ? ಆಗಲ್ಲ’ ಎಂದರು. ಈಗ ನೀರಾವರಿ ಯೋಜನೆಗಳಿಗೆ ಸಾವಿರ ಸಾವಿರ ಕೋಟಿ ರೂಪಾಯಿ ಬೇಕು. ವಾಸ್ತವವಾಗಿ ಇವು ನೆಲಕ್ಕೆ ಬಿದ್ದೇ ಇಲ್ಲ.

ಒಂದೇ ಎರಡೇ…? ಕಾರಂಜಾ, ಸಿಂಗಟಾಲೂರು, ತುಂಗಭದ್ರಾ, ಘಟಪ್ರಭಾ, ಹುಕ್ಕೇರಿ, ಮಲಪ್ರಭಾ ಯೋಜನೆಗಳೆಲ್ಲ 50, 60, 100 ಕೋಟಿ ರೂಪಾಯಿಗಳು ಮೊದಲು ಬೇಕಾಗಿತ್ತು. ಈಗ ಇವು ಸಾವಿರಾರು ಕೋಟಿ ಬೇಡುತ್ತಿವೆ.

ಈಗ ನೀರಾವರಿ ಯೋಜನೆಗಳೆಂದರೆ ಸರ್ಕಾರವೇ ಗಡಗಡ ನಡುಗುವಂತಹ ಸನ್ನಿವೇಶವಿದೆ. ಉತ್ತರ ಕರ್ನಾಟಕದ ವಿಶ್ವೇಶ್ವರಯ್ಯ ಎಂದೇ ಪ್ರಸಿದ್ಧರಾದ ಎಸ್.ಜಿ.ಬಾಳೇಕುಂದ್ರಿ, ಇಲ್ಲಿಯ ನೀರಾವರಿ ಯೋಜನೆಗಳ ಕುರಿತು ಬಹುವಾಗಿ ಶ್ರಮಿಸಿದ ಎಂಜಿನಿಯರ್. ತೊಟ್ಟು ನೀರೂ ರೈತನ ಹೊಲಕ್ಕೇ ಹರಿಯಬೇಕು. ಸಮೃದ್ಧಿ ಕಾಣಬೇಕು. ಬರದ ಬವಣೆಯಿಂದ ಉತ್ತರ ಕರ್ನಾಟಕ ಮುಕ್ತಿಯಾಗಬೇಕು. ಮಳೆಯ ಜೂಜಾಟಕ್ಕೆ ಮಣಿಯಬಾರದು ಎಂದು ಕನಸು ಕಂಡು ಬಾಳೇಕುಂದ್ರಿ ಬಹಳ ಹಟ ತೊಟ್ಟು ಕಾರ್ಯನಿರ್ವಹಿಸಿದರು ಅವರು. ಅವರಿಗೆ ಸಿಕ್ಕ ಗೌರವ ಎಂದರೆ ಒಂದು ಕಾಲುವೆಗೆ ಅವರ ಹೆಸರಿಟ್ಟಿದ್ದು ಅಷ್ಟೇ.

ಪಾಪ, ಅವರೀಗ ಇದ್ದಿದ್ದರೆ, ನೀರಾವರಿ ಯೋಜನೆಗಳಿಂದ ಆದ ಲೂಟಿಯ ಬಗ್ಗೆ ಕಣ್ಣೀರು ಹಾಕುತ್ತಿದ್ದರೇನೋ? ನಿಜ. ಕರ್ನಾಟಕ ಮಧ್ಯದಲ್ಲಿದೆ. ತಾನು ಬೇರೆಡೆಯಿಂದ ಪಡೆಯಬೇಕು. ಹಾಗೇ ತನ್ನ ನೀರನ್ನೂ ಬೇರೆಯವರಿಗೆ ಹಂಚಬೇಕು. ಈ ಸ್ಥಿತಿ. ಇಂತಹ ರಾಜ್ಯಕ್ಕೆ ತನ್ನ ನೀರನ್ನು ಸದ್ಬಳಕೆ ಮಾಡಿಕೊಳ್ಳದ, ಯಾವ ಯೋಜನೆಗಳೂ ಪೂರ್ಣಗೊಳ್ಳದ ಅಪಕೀರ್ತಿಗೆ ಈವರೆಗಿನ ಎಲ್ಲ ಸರ್ಕಾರಗಳೂ ಹೊಣೆಗಾರರೇ.

ಇತ್ತೀಚೆಗೊಂದು ಘಟನೆ ನಡೆಯಿತು. ಅದು ಮಹದಾಯಿಗೆ ಸಂಬಂಧಿಸಿದ್ದು… ಮಹದಾಯಿ, ಕಳಸಾ ಬಂಡೂರಿ ಯೋಜನೆಗಳಿಗೆ ಗೋವಾ ಸರ್ಕಾರ ಇನ್ನಿಲ್ಲದ ಆಕ್ಷೇಪ ವ್ಯಕ್ತಪಡಿಸುತ್ತಿದೆಯಷ್ಟೇ. ಅಡಿಅಡಿಗೂ ತಕರಾರುಗಳೇ. ರಾಜಕಾರಣಕ್ಕೋ, ಅತ್ತ ಗೋವಾದ ಪ್ರೀತಿ, ಇತ್ತ ಕರ್ನಾಟಕದ ಮೋಹ. ಹಾಗಾಗಿ ಕೆಂಡದ ಮೇಲಿನ ಕುಣಿತ ಕರ್ನಾಟಕದ್ದು. ಗೋವಾಕ್ಕೆ ಕೇಂದ್ರ ವಿದ್ಯುತ್ ಗ್ರಿಡ್‌ನಿಂದ (ತಮ್ನಾರ್-ಗೋವಾ) ಹೈಟೆನ್ಷನ್ ಲೈನ್ ಅನ್ನು ಧಾರವಾಡ, ಅನಮೋಡ್, ಮಹದಾಯಿ, ಕಾಳಿ ಕಣಿವೆ ಮಾರ್ಗವಾಗೇ ಕೊಂಡೊಯ್ಯಬೇಕು. ಕರ್ನಾಟಕದ ಎಲ್ಲ ಯೋಜನೆಗಳಿಗೆ (ರೈಲು ಕೂಡ) ಆಕ್ಷೇಪ ವ್ಯಕ್ತಪಡಿಸುವ ಎನ್‌ಜಿಟಿ, ಗೋವಾಕ್ಕೆ ಲಕ್ಷಾಂತರ ಮರ ಕಡಿದು ವಿದ್ಯುತ್ ಲೈನ್ ಒಯ್ಯಲು ಅನುಮತಿ ನೀಡಿತು!

ಸರಿ. ವಿದ್ಯುತ್ ಮಾರ್ಗ ನಮ್ಮ ರಾಜ್ಯದ ಮೂಲಕ ಹಾದು ಹೋಗುವುದಕ್ಕೆ ಕರ್ನಾಟಕ ತಕರಾರು ಎತ್ತಿತ್ತು. ಆಗ ಸ್ವತಃ ಪ್ರಧಾನಿಯವರೇ ಕರ್ನಾಟಕಕ್ಕೆ ಯೋಜನೆಗೆ ಒಪ್ಪಗೆ ಕೊಡಿ' ಎಂದು ಕೋರಿದರು. ಆಯ್ತು. ನಮ್ಮ ಮಹದಾಯಿ ಯೋಜನೆಗೂ ಒಪ್ಪಿಗೆ ಕೊಡಿ; ಇದೂ ಅದೇ ಪ್ರದೇಶದ್ದಲ್ಲವೇ ಎಂದು ಮರು ಪ್ರಶ್ನೆ ಹಾಕಿದಾಗ,ಬ್ಲ್ಯಾಕ್‌ಮೇಲ್’ ರಾಜಕಾರಣದ ಆರೋಪ ಕರ್ನಾಟಕದ ಮೇಲೆ ಬಂತು !!

ಒಕ್ಕೂಟ ವ್ಯವಸ್ಥೆಯಲ್ಲಿ ಸಮಾಲೋಚನೆ, ಚರ್ಚೆ, ಪರಸ್ಪರ ಹೊಂದಾಣಿಕೆಯೇ ಪ್ರಧಾನ. ನೀರಾವರಿ ಯೋಜನೆಗಳಲ್ಲಿ ಇವು ಕಾಣುತ್ತಿಲ್ಲ. ದೂಷಣೆಯೇ ಹೆಚ್ಚು. ಪರಿಣಾಮ ಕರ್ನಾಟಕದ ಧನ, ಯೋಜನೆಗಳ ಭಾರ ಮೀತಿ ಮೀರುತ್ತಿದೆ.

ಎಚ್.ಕೆ.ಪಾಟೀಲ್ ಹಿಂದೆ ಜಲಸಂಪನ್ಮೂಲ ಮಂತ್ರಿ ಇದ್ದಾಗ ಹಲವು ಯೋಜನೆಗಳಿಗೆ ಮಂಜೂರಾತಿ ಪಡೆಯುವಲ್ಲಿ ಯತ್ನ ನಡೆಸಿದರು. ಉತ್ತರ ಕರ್ನಾಟಕದ, ವಿಶೇಷವಾಗಿ ಕೃಷ್ಣಾ ಮೇಲ್ದಂಡೆ ಹಾಗೂ ಭದ್ರಾ ಯೋಜನೆಗಳಿಗೆ ಒಂದು ತಾರ್ಕಿಕ ಅಂತ್ಯ ನೀಡುವ ಪ್ರಯತ್ನಗಳು ಅವರಿಂದ ಆದವು. `ಕೃಷ್ಣೆಯ ಕಣ್ಣೀರು’ ಅವರ ಅಧ್ಯಯನಪೂರ್ಣ ವರದಿ. ರಾಜಕಾರಣ ಎಲ್ಲವನ್ನೂ, ಎಲ್ಲರನ್ನೂ, ಎಂಥವರನ್ನೂ ಹೊಸಕಿ ಹಾಕಿ ಬಿಡುತ್ತದೆ!

ಇನ್ನೊಂದು ಮುಖ ನೋಡಿ. ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ಕಳಸಾ ಬಂಡೂರಿಗೆ ಅಡಿಗಲ್ಲು ಹಾಕುವುದಾಗಿ ರಕ್ತದಲ್ಲಿ ಬರೆದು ಕೊಡುವ ಶಪಥ ಮಾಡಿದವರು, ಆ ನಂತರ ಮರೇತೇ ಬಿಟ್ಟರು ! ಸರ್ವೋಚ್ಚ ನ್ಯಾಯಾಲಯದಲ್ಲಿರುವ ಜಲವಿವಾದಗಳ ಲಾಬಿ, ಹಿಕ್ಮತ್ತುಗಳೇ ಬೇರೆ. ಇವೆಲ್ಲವುಗಳಲ್ಲಿ ಕರ್ನಾಟಕ ವೈಫಲ್ಯ ಕಂಡಿದ್ದೇ ಹೆಚ್ಚು. ಇದು ಕರುನಾಡಿನ ಮತ್ತೊಂದು ದುರಂತ- ದುರದೃಷ್ಟದ ಮುಖ !!

ಮಹದಾಯಿ ಯೋಜನೆ 1985ರಲ್ಲಿ ಅನುಷ್ಟಾನಗೊಳಿಸಬೇಕೆಂದಾಗ ಬೇಕಿದ್ದುದು 360 ಕೋಟಿ. ಈಗ…? ಅದರ ಉಪನದಿ ಕಳಸಾ ಬಂಡೂರಿ ಯೋಜನೆಯೇ ಸರಿಸುಮಾರು 2 ಸಾವಿರ ಕೋಟಿ ಮಿಕ್ಕಿದೆ.

ಆಲಮಟ್ಟಿ ಹಿನ್ನೀರು ಸಂಗ್ರಹವಾಗುವ ಜಮೀನುಗಳ ಸ್ವಾಧೀನಕ್ಕೆ ಸರಿಸುಮಾರು 90 ಸಾವಿರ ಕೋಟಿ ಬೇಕು. ಭೂಸ್ವಾಧೀನ, ಪರಿಹಾರ, ಅದರ ಅವ್ಯವಹಾರಗಳದ್ದೇ ಒಂದು ದೊಡ್ಡ ಜಾಲ. ಕಾರಂಜಾ, ಬೀದರ್ ಭಾಲ್ಕಿಯ ತುಟ್ಟ ತುದಿಯ ಯೋಜನೆ. ಭೀಮಣ್ಣ ಖಂಡ್ರೆಯವರ ಕನಸು. ಇನ್ನೂ ರೈತರ ಹೊಲಗಳಿಗೆ ಕಾಲುವೆಗಳ ನಿರ್ಮಾಣವಾಗಿಲ್ಲ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಕಾಲುವೆ ನಿರ್ಮಾಣಕ್ಕೆ 180 ಕೋಟಿ ರೂಪಾಯಿ ಮಂಜೂರಾಗಿದೆ.

ರಾಜಕೀಯ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವೇ ಬಜೆಟ್‌ನಲ್ಲಿ 5300 ಕೋಟಿ ಘೋಷಣೆ ಮಾಡಿತ್ತು. ಭದ್ರೆಯ ಮಡಿಲಿನ ರೈತರ ಮಕ್ಕಳು ಖುಷಿಯಿಂದ ಕುಣಿದಾಡಿದರು.

ಯಾವಾಗ ವಿಧಾನಸಭೆಯಲ್ಲಿ ಸೋತರೋ ನಂತರ ಇಂದಿನವರೆಗೆ ಒಂದು ದಮಡಿ ಕಾಸನ್ನು ಕೊಟ್ಟಿಲ್ಲ. ಬಿಜೆಪಿ ನಾಯಕರು ಬಿಡಿ. ಕೇಂದ್ರ ಸರ್ಕಾರ ಉತ್ತರ ಕೊಡುತ್ತಿಲ್ಲ.
ಆಂಧ್ರ, ಕರ್ನಾಟಕ, ಮಹಾರಾಷ್ಟç ನೀರು ಹಂಚಿಕೆ ಐತೀರ್ಪು ಘೋಷಣೆಯಾಗಿದೆ. ಇದನ್ನು ಗೆಜೆಟ್ ಅಧಿಸೂಚನೆ ಮಾಡಿಕೊಡಿ ಎಂದರೆ ನೂತನವಾಗಿ ಉದಯವಾಗಿರುವ ತೆಲಂಗಾಣಾದ ಅರ್ಜಿಯನ್ನು ಸುಪ್ರೀಂ ಕೋರ್ಟಿನಲ್ಲಿ ಹಾಕಿಸಿ, ಹತ್ತು ಹನ್ನೆರಡು ವರ್ಷಗಳಿಂದ ಮುಂದೂಡಲಾಗುತ್ತಿದೆ.

ಇನ್ನು ಕಾವೇರಿಯಲ್ಲೂ ಅಷ್ಟೇ. ಕೊನೇ ಹಂತಕ್ಕೆ ನೀರು ತಲುಪದೇ ಕಬ್ಬು ಒಣಗುತ್ತಿದೆ. ಅಲ್ಲಿಯೂ ಕಾಲುವೆ ಜಾಲ ಸರಿಯಾಗಿಲ್ಲ. `ನಮ್ಮ ನೀರು, ನಮ್ಮ ಹಕ್ಕು’ ಆಗೋದು ಯಾವಾಗ? ಏಕೆ ಯೋಜನೆಗಳೇಕೆ ಅನುಷ್ಟಾನವಾಗುತ್ತಿಲ್ಲ ಎಂದು ಪ್ರಶ್ನಿಸಿದರೆ, ಯೋಜನೇತರ ಅಪವ್ಯಯಕ್ಕೆ ಆದ್ಯತೆ ನೀಡುತ್ತಿರುವುದೇ ಇವುಗಳ ಯೋಜನಾ ವೆಚ್ಚ ಹೆಚ್ಚಿ ಹಿನ್ನಡೆಗೆ ಕಾರಣ ಎನ್ನುವ ಉತ್ತರ ಬರುತ್ತದೆ.

ಈಗ ಸಚಿವ ಎಂ.ಬಿ.ಪಾಟೀಲ್, ಮಹಾರಾಷ್ಟ್ರ ಸರ್ಕಾರದ ನೀರು ಕೊಳ್ಳೆ ಹೊಡೆವ ಯೋಜನೆ ಬಗ್ಗೆ ಆತಂಕಗೊಂಡಿದ್ದಾರೆ. ಕರ್ನಾಟಕದ ಜನ ನಮ್ಮ ನೀರು ನಮಗೆ ಹರಿಸಿಕೊಡಿ ಎಂದು ಪಟ್ಟು ಹಿಡಿವ ನಮ್ಮ ಅನ್ನದಾತರ ಕೋಪ ಶಮನಕ್ಕೆ ಇದೊಂದು ನೆಪವಷ್ಟೇ ಆಗಬಾರದು.. ಇಂತಹ `ನೆಪದ ಶಿಖರ’ಗಳನ್ನು ಸೃಷ್ಟಿಸಿಯೇ ತಲೆಗಿಂತ ಮುಂಡಾಸು ದೊಡ್ಡದಾಗಲು ಕಾರಣ… ಅಲ್ಲವೇ !?