SK Home Ad
Home ಅಂಕಣ ಅಂಕಣ ಬರಹ | ಪ್ರಾಮಾಣಿಕ ಅಧಿಕಾರಿ ಪಾದ ನಿಮಗೆ ಸಿಗದು ಬಿಡಿ!

ಅಂಕಣ ಬರಹ | ಪ್ರಾಮಾಣಿಕ ಅಧಿಕಾರಿ ಪಾದ ನಿಮಗೆ ಸಿಗದು ಬಿಡಿ!

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

`ಅಧಿಕಾರಿ ಪ್ರಾಮಾಣಿಕರಾಗಿದ್ದರೆ ಅವರ ಪಾದಗಳನ್ನು ನಾನು ತಲೆಯ ಮೇಲೆ ಇಟ್ಟುಕೊಳ್ಳುತ್ತೇನೆ…!’ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸಾರ್ವಜನಿಕವಾಗಿ ಈ ಕಾಳಜಿಭರಿತ ಮಾತನಾಡಿದ್ದಾರೆ.

`ಹಾಗೇ ಅಧಿಕಾರಿ ಭ್ರಷ್ಟಾಚಾರಿ ಆಗಿದ್ದರೆ ಕುತ್ತಿಗೆಗೆ ಹಗ್ಗ ಹಾಕಿ ಜೈಲಿಗಟ್ಟುತ್ತೇನೆ’ಎಂದೂ ಅಷ್ಟೇ ಖಡಕ್ ಆಗಿ ಎಚ್ಚರಿಸಿದ್ದಾರೆ ಕೂಡ!!

ಬೆಳಗಾವಿಯ ಅಧಿಕಾರಿಗಳ ಸಭೆ, ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿಯ ಸಂದರ್ಭದಲ್ಲಿ ನ್ಯಾಯಮೂರ್ತಿ ವೀರಪ್ಪ ಅವರ ಈ ಮಾತು ಅಧಿಕಾರಿಗಳ ವಲಯದಲ್ಲಿ, ಅಧಿಕಾರಸ್ಥರ ಮನಸ್ಸಿನಲ್ಲಿ, ಎಷ್ಟು ನಾಟಿತೋ ಗೊತ್ತಿಲ್ಲ. ಯಾರು ಅಂಜಿದರೋ, ಯಾರು ಪ್ರಾಮಾಣಿಕತೆಯತ್ತ ವಾಲಿದರೋ ತಿಳಿಯದು.

ಆದರೆ ನ್ಯಾಯಮೂರ್ತಿಗಳ ಕಾಳಜಿ, ಭ್ರಷ್ಟಾಚಾರ ಮುಕ್ತ ಅಧಿಕಾರ ಮತ್ತು ಸಮಾಜ ನಿರ್ಮಿಸುವುದರಲ್ಲಿರುವ ಕಳಕಳಿ ಹಾಗೂ ಭ್ರಷ್ಟರ ಬಗ್ಗೆ ಇರುವ ಅವರ ಕೋಪ ಸಹಜವಾದದ್ದು- ಪ್ರಾಮಾಣಿಕವಾದದ್ದು.

ಏಕೆಂದರೆ ಬಿ.ವೀರಪ್ಪ ಬೆಳೆದ, ಬದುಕಿದ, ನಡೆದುಕೊಂಡ ಹಾಗೇ ನಿಭಾಯಿಸಿದ ಕರ್ತವ್ಯ ಕೂಡ ಅದೇ ರೀತಿಯದ್ದು. ಪ್ರಸ್ತುತ ಲೋಕಾಯುಕ್ತ ಪುನಃ ಅಸ್ತಿತ್ವಕ್ಕೆ ಬರಲು ಹಾಗೂ ಅದಕ್ಕಂಟಿದ ಕಳಂಕ ಸ್ವಲ್ಪ ಮಟ್ಟಿಗೆ ತೊಡೆದು ಹಾಕಲು ಅವರೂ ಕಾರಣಕರ್ತರು!.

ಹಿಂದಿನ ಮುಖ್ಯ ಲೋಕಾಯುಕ್ತರಾಗಿದ್ದ ವೈ. ಭಾಸ್ಕರ್ ರಾವ್ ಮತ್ತವರ ಮಗ ವೈ. ಅಶ್ವಿನ್ ರಾವ್ ಪ್ರಕರಣದಿಂದಾಗಿ ಇಡೀ ದೇಶದಲ್ಲಿ ರಾಜ್ಯ ಲೋಕಾಯುಕ್ತ ಹಾಗೂ ಅದರ ನ್ಯಾಯಾಧೀಶರುಗಳ ಬಗ್ಗೆ ಅಸಹ್ಯ ಹುಟ್ಟಿಸಿದ್ದು ನಿಜ. ಇದಕ್ಕಾಗಿಯೇ ರಾಜ್ಯ ಸರ್ಕಾರ ಲೋಕಾಯುಕ್ತದ ಕಾರ್ಯವೈಖರಿಯನ್ನೇ ಮೊಟಕು ಮಾಡಿ ಎಸಿಬಿ ರಚಿಸಿತ್ತು. ಲೋಕಾಯುಕ್ತದ ಎಲ್ಲ ಅಧಿಕಾರವನ್ನು ಎಸಿಬಿ ಪೊಲೀಸರು ನಿರ್ವಹಿಸುವಂತಾಗಿತ್ತು. ಮತ್ತೆ ಪೊಲೀಸ್ ರಾಜ್ ಜೊತೆಗೆ ಸರ್ಕಾರದ ಅಣತಿಯಂತೇ ಕುಣಿಸಿದಂತೆ ಕುಣಿಯುವ ವ್ಯವಸ್ಥೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅದನ್ನು ತಪ್ಪು ಎಂದು ಘೋಷಿಸಿ ಪುನಃ ಲೋಕಾಯುಕ್ತ ವ್ಯವಸ್ಥೆಗೆ ಎಲ್ಲ ಅಧಿಕಾರ ಕೊಡಿಸಿದ ಕೀರ್ತಿ ಸಲ್ಲಬೇಕಾದದ್ದು ಬಿ.ವೀರಪ್ಪನವರಿಗೆ. ಅವರೇ ತಮ್ಮ ತೀರ್ಪಿನಲ್ಲಿ `ಯಾವ ಅಧಿಕಾರಸ್ಥರಿಗೂ, ರಾಜಕೀಯ ಪಕ್ಷಗಳಿಗೂ, ಸದೃಢ ಸಮರ್ಥ ಲೋಕಾಯುಕ್ತ ವ್ಯವಸ್ಥೆ ಬೇಕಾಗಿಲ್ಲ; ಈ ಕುರಿತು ಮನಸ್ಸಿಲ್ಲ’ ಎಂಬುದನ್ನು ವಿಷಾದಪೂರ್ಣವಾಗಿ ಉಲ್ಲೇಖಿಸಿದ್ದರು. ಈಗ ಅವರೇ ಉಪ ಲೋಕಾಯುಕ್ತರು…!

ಉಪ ಲೋಕಾಯುಕ್ತರಾಗಿದ್ದ ಬಿ.ಎಸ್.ಪಾಟೀಲ್ ಮುಖ್ಯ ಲೋಕಾಯುಕ್ತರ ಹುದ್ದೆಗೆ ನೇಮಕ ಹೊಂದಿದಾಗ, ಖಾಲಿ ಆದ ಉಪ ಲೋಕಾಯುಕ್ತ ಸ್ಥಾನಕ್ಕೆ ಅವಿರೋಧವಾಗಿ ನೇಮಕವಾದವರು ಬಿ.ವೀರಪ್ಪ. 2023ರಲ್ಲಿ ಅವರು ರಾಜ್ಯ ಹೈಕೋರ್ಟ್ನಿಂದ ನಿವೃತ್ತರಾದಾಗ, `ಕರ್ತವ್ಯ ನಿರ್ವಹಣೆಯಲ್ಲಿ ಆತ್ಮಸಾಕ್ಷಿ ಮತ್ತು ಪ್ರಾಮಾಣಿಕತೆಗೆ ತಕ್ಕಂತೆ ನಡೆದುಕೊಂಡಿರುವುದರ ಹಿನ್ನೆಲೆಯಲ್ಲಿ ನನಗೆ ಧನ್ಯತೆ- ಸಾರ್ಥಕತೆ ಇದೆ’ ಎಂದು ಹೇಳಿಕೊಂಡಿದ್ದರು.

ನ್ಯಾ.ಮೂ. ಬಿ.ವೀರಪ್ಪನವರೇ, ನಿಮಗೆ ತಲೆಯ ಮೇಲೆ ಪ್ರಾಮಾಣಿಕರ ಪಾದ ಇಟ್ಟುಕೊಳ್ಳುವ `ಸುಯೋಗ’ ಖಂಡಿತ ಸಿಗದು…!!

ಕೇವಲ ಕುಹಕದ ಮಾತಲ್ಲ. ಇದು ವಾಸ್ತವದ ವಿಷಾದ. ಅದೇ `ಭ್ರಷ್ಟ ಅಧಿಕಾರಿಯ ಕುತ್ತಿಗೆಗೆ ಹಗ್ಗ ಹಾಕಿ ಜೈಲಿಗಟ್ಟುವೆ’ ಎನ್ನುವ ನಿಮ್ಮ ಕಡಕ್ ನಿರ್ಧಾರ ಈಡೇರಿಕೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸಿಕ್ಕುತ್ತಾರೆ!

ಆದರೆ ಇವರನ್ನು ಜೈಲಿಗಟ್ಟುವುದು ಬಿಡಿ ನಿಮ್ಮ ಮುಂದೆ ಇಂಥವರು ಬಾರದಂತೆ ರಕ್ಷಿಸುವ ದೊಡ್ಡ ವ್ಯವಸ್ಥೆಯೇ ಇದೆ. ಹೀಗಾಗಿ ಈ ಮಾತನ್ನೂ `ವಾರೆ ನೋಟ’ದಿಂದ ನೋಡುವಂತಾಗಿದೆ.

ಲೋಕಾಯುಕ್ತದಲ್ಲಿ ಸಾವಿರಾರು ದೂರುಗಳು, ಶಿಸ್ತು ವಿಚಾರಣೆಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಬಾಕಿ ಉಳಿದಿವೆ. ಎಂಟೂವರೆ ಸಾವಿರಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತದ ಆಡಳಿತ ವಿಭಾಗದಲ್ಲಿ ವಿಲೇವಾರಿಗೆ ಕಾದಿವೆ. ವಿಚಾರಣಾ ವಿಭಾಗದಲ್ಲಿ ಎರಡು ಸಾವಿರದ ಮುನ್ನೂರಕ್ಕೂ ಹೆಚ್ಚು ಪ್ರಕರಣಗಳು ಶಿಸ್ತು ಪ್ರಕರಣಗಳು ಬಾಕಿ ಇವೆ. ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿ ಆ್ಯಕ್ಟ್) ಅಡಿ 1700ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ವಿವಿಧ ಹಂತಗಳಲ್ಲಿ ತನಿಖೆ ಬಾಕಿ ಇವೆ.

2003ರಿಂದ 2005ರವರೆಗೆ ನಡೆಸಿದ ದಾಳಿ, ಲಂಚ ಸ್ವೀಕಾರದ ಸಂದರ್ಭದಲ್ಲಿನ ರೇಡ್‌ಗಳು, ಅಕ್ರಮ ಆಸ್ತಿ ಗಳಿಕೆಯ ಪ್ರಕರಣಗಳು ಇಂದೂ ಲೋಕಾಯುಕ್ತದಲ್ಲಿ ಕೊಳೆಯುತ್ತಿವೆ. ಕಾರಣ, ಹೈಕೋರ್ಟಿನ ತಡೆಯಾಜ್ಞೆ. ಅಥವಾ ವಿವಿಧ ವಿಚಾರಣಾ ಪ್ರಕ್ರಿಯೆಗಳು.

ಎಸಿಬಿ ಆಗಿರಲಿ, ಲೋಕಾಯುಕ್ತವೇ ಇರಲಿ. ಮೊದಲು ರೇಡ್ ಮಾಡುತ್ತಾರೆ. ಒಂದಿಷ್ಟು ಪ್ರಚಾರ ಪಡೆಯುತ್ತಾರೆ. ಆ ನಂತರ ಪ್ರಕರಣದ ವಿಚಾರಣೆಗಳೇ ಇಲ್ಲ ಎನ್ನುವ ದೊಡ್ಡ ಆರೋಪವಿದೆ.

ಇತ್ತೀಚಿನ ವರ್ಷಗಳಲ್ಲಿ ಇಡಿ, ಐಟಿ ಮತ್ತು ಸಿಬಿಐಗಳ ಮೇಲೆ ಇದು ಮಾಮೂಲಿಯಾಗಿರುವ ಆರೋಪ. ಇವೆಲ್ಲ ಕೇಂದ್ರದ `ವಾಷಿಂಗ್ ಮಷಿನ್’ ಎಂದೇ ಕುಪ್ರಸಿದ್ಧವಾಗಿರುವುದನ್ನು ಕೇಳುತ್ತೀರಿ.

ಇಷ್ಟಕ್ಕೂ ಕರ್ನಾಟಕದ ಲೋಕಾಯುಕ್ತ ತನಗಿರುವ ಅಧಿಕಾರ ಮತ್ತು ಬಲವನ್ನು ಪ್ರದರ್ಶಿಸಿದ ಇತಿಹಾಸವೂ ಇದೆ. ಮುಖ್ಯಮಂತ್ರಿಗಳ, ಮಂತ್ರಿಗಳ, ಉನ್ನತ ಅಧಿಕಾರಿಗಳ, ಪ್ರಮುಖ ರಾಜಕಾರಣಿಗಳ ಅಧಿಕಾರವನ್ನು `ಮಾಜಿ’ ಮಾಡಿದ್ದು ಅಥವಾ ಇಂಥವರು ಅಧಿಕಾರದಲ್ಲಿದ್ದಾಗಲೇ ಜೈಲಿಗಟ್ಟಿದ ನಿದರ್ಶನಗಳೂ ಇವೆ!

ರಾಜ್ಯ ಲೋಕಾಯುಕ್ತದ ಮೇಲಿರುವ ಮೊದಲ ಆರೋಪವೆಂದರೆ, ವಿಚಾರಣೆಯೇ ನಡೆಯುತ್ತಿಲ್ಲ; ಕಲಾಪಗಳಾಗುತ್ತಿಲ್ಲ; ತೀರ್ಮಾನ ಬರುವುದು ಎಂದೋ ಎನ್ನುವುದು. ಭ್ರಷ್ಟಾಚಾರ ಮತ್ತು ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿಬಿದ್ದವರು ಇನ್ನಷ್ಟು ಕೊಬ್ಬಿ ಬೆಳೆದ ನಿದರ್ಶನಗಳು ಸಾಕಷ್ಟಿವೆ. ರಾಜಾರೋಷವಾಗಿ ಸಮಾಜದ ಮನ್ನಣೆ ಪಡೆದುಕೊಳ್ಳುತ್ತಲೂ ಇದ್ದಾರೆ ಇಂಥವರು!

ಹಾಗೇ ಹಲವು ಭ್ರಷ್ಟರ ಪ್ರಕರಣಗಳು ಕೊಳೆಯುತ್ತಲೂ ಇವೆ. ಹೊರಗಿನ ಶಕ್ತಿಗಳ ಹಸ್ತಕ್ಷೇಪ, ಷಡ್ಯಂತ್ರ ಕೂಡ ಇದಕ್ಕೆ ಕಾರಣವಲ್ಲ ಎನ್ನುವಂತಿಲ್ಲ. ಐದು ದಿನಗಳ ಕಾಲ ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಬಿ.ವೀರಪ್ಪ ಪ್ರವಾಸ ಕೈಗೊಂಡಿದ್ದರು. ಸಾರ್ವಜನಿಕ ಸೇವೆ ಮತ್ತು ಆಡಳಿತ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ; ಭ್ರಷ್ಟವಾಗಿದೆ ಎನ್ನುವುದನ್ನು ಅನಾವರಣಗೊಳಿಸಿದರು.

ಬಡಜನತೆ ಆಸ್ಪತ್ರೆಗಳಲ್ಲಿ, ಔಷಧಿ- ಚಿಕಿತ್ಸೆಗಾಗಿ ಪರದಾಡುತ್ತಿರುವುದು, ಆಹಾರ, ಪಡಿತರ ಧಾನ್ಯ ಲಭ್ಯವಾಗದಿರುವುದು, ಪಹಣಿ, ಪೋತಿ, ಪಿಂಚಣಿ, ಗ್ರಾಮ ಮಟ್ಟದ ಸೌಲಭ್ಯಗಳಿಗಾಗಿ ಸಾರ್ವಜನಿಕರ ಅಲೆದಾಟ, ದೊಡ್ಡದಾಗಿ ಅವರ ಕಣ್ಣಿಗೆ ರಾಚುವಂತಿತ್ತು. ಆಗಲೇ ನ್ಯಾ. ವೀರಪ್ಪ ಅಂದದ್ದು, ಪ್ರಾಮಾಣಿಕ ಅಧಿಕಾರಿಗಳ ಪಾದ ತಲೆಯ ಮೇಲೆ ಇಟ್ಟುಕೊಳ್ಳುವೆ ಎಂದು!

ಬಹುಶಃ ಈ ಶತಮಾನದಲ್ಲಿ ಇದು ಸಾಧ್ಯವಿಲ್ಲ ಬಿಡಿ. ಸಮೀಕ್ಷೆಯಂತೆ ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶದಲ್ಲಿ ಐದನೇ ಸ್ಥಾನದಲ್ಲಿದೆ. ಹಾಗೇ ಭಾರತ ಕೂಡ ಜಗತ್ತಿನ ನೂರ ಹತ್ತು ದೇಶಗಳ ಪೈಕಿ ತೊಂಬತ್ತನೇ ಸ್ಥಾನದಲ್ಲಿದೆ. ಒಂಬತ್ತನೆಯ ಅತೀ ಹೆಚ್ಚು ಭ್ರಷ್ಟಾಚಾರ ಆಡಳಿತ ವ್ಯವಸ್ಥೆ ಇರುವ ದೇಶವಾಗಿದೆ.

ಪ್ರಶ್ನೆ ಎದ್ದಿರುವುದು, ಭ್ರಷ್ಟಾಚಾರ ಯಾವ ಹಂತದಲ್ಲಿ, ಯಾವ ಕ್ಷೇತ್ರದಲ್ಲಿ, ಯಾವ ಆಡಳಿತದಲ್ಲಿ ಇಲ್ಲ ಎನ್ನುವುದು. ಭ್ರಷ್ಟಾಚಾರವೇ ಇಲ್ಲ ಎನ್ನುವುದನ್ನು ಯಾವ ಇಲಾಖೆಯ ಮಂತ್ರಿ, ಯಾವ ರಾಜ್ಯದ ಮುಖ್ಯಮಂತ್ರಿಯೂ ಹೇಳಲಾರ. ಆದರೆ ಯಾವ ಇಲಾಖೆಯಲ್ಲಿ ಎಷ್ಟು, ಏನು, ಹೇಗೆ, ಎನ್ನುವುದು ಅಧಿಕಾರದ ರುಚಿ ಉಂಡವರಿಗೆ, ಅಧಿಕಾರಸ್ಥರಿಗೆ ಗೊತ್ತು. ಜನ ಸಾಮಾನ್ಯರಿಗೂ ಗೊತ್ತು!!

ಹಿಂದೊಂದು ಮಾತಿತ್ತು. ಲೋಕೋಪಯೋಗಿ, ಕೈಗಾರಿಕೆ, ಕಂದಾಯ, ನೀರಾವರಿ ಇವೇ ಮೊದಲಾದವುಗಳೆಲ್ಲ ಸಂಪದ್ಭರಿತ ಖಾತೆಗಳು. ಈ ಖಾತೆಗಳನ್ನು ಪಡೆಯಲು ಶಾಸಕರು ಪೈಪೋಟಿಗೆ ಇಳಿಯುತ್ತಿದ್ದರು.

ಈಗ ಹಾಗಿಲ್ಲ. `ಕೊಚ್ಚೆಯಲ್ಲೂ ದುಡ್ಡು ತೆಗೆಯುವ ಕಾಲವಿದು. ಮಹಾನಗರಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ತಿಪ್ಪೆಯನ್ನು ವಿಲೇ ಮಾಡುವಲ್ಲಿ ನಡೆಯುವ ಭ್ರಷ್ಟಾಚಾರ ಯಾರೂ ಕಂಡು ಕೇಳರಿಯದಂತಿದೆ. ಮೊದಲು ಕನ್ನಡ ಸಂಸ್ಕೃತಿ, ವಾರ್ತಾ ಇಲಾಖೆ, ವಾರ್ತೆ, ಶಿಕ್ಷಣ, ಮೀನುಗಾರಿಕೆ, ಪ್ರವಾಸೋದ್ಯಮ, ಸಂಸದೀಯ ವ್ಯವಹಾರ ಇತ್ಯಾದಿ, ಯಾರಿಗೂ ಬೇಡದ ಇಲಾಖೆಗಳಾಗಿದ್ದವು. ಆದರೀಗ ಇವೂ ಕೂಡ ಶೇ 20, ಶೇ 30ರ ಆಜೂಬಾಜೂ ಬಂದು ನಿಂತಿವೆ!

ಈ ಆರೋಪ ಪ್ರತ್ಯಾರೋಪಗಳೇನೇ ಇರಲಿ. ನ್ಯಾ.ಮೂ ವೀರಪ್ಪ ಅವರು ಹೇಳಿರುವಂತೆ ವ್ಯವಸ್ಥೆಯ ಸುಧಾರಣೆಗೆ ಯಾರಿಗೂ ಇಚ್ಛಾಶಕ್ತಿ ಇಲ್ಲವೆನ್ನುವುದು ಮಾತ್ರ ಸತ್ಯ. ಪ್ರಾಮಾಣಿಕ ಅಧಿಕಾರಿಯ ಕಾಲನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಅವಕಾಶ ಲೋಕಾಯುಕ್ತರಿಗೆ ಖಂಡಿತ ಬರಲು ಸಾಧ್ಯವಿಲ್ಲ. ಆದರೆ ತಮ್ಮ ಪರಿಮಿತಿಯಲ್ಲಿ ಲೋಕಾಯುಕ್ತ, ಲೋಕಪಾಲರು ಭ್ರಷ್ಟರ ಕುತ್ತಿಗೆಗೆ ಹಗ್ಗ ಹಾಕಿ ಜೈಲಿಗಟ್ಟುವ ಕಠಿಣ ಮತ್ತು ಕನಿಷ್ಟ ಕಾರ್ಯವಾದರೂ ಆಗಲಿ ಎನ್ನುವುದೇ ಆಶಯ..!!