ಬಳ್ಳಾರಿ: ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದ ತೊಗರಿ ಬಿತ್ತನೆ ಮಾಡಿರುವ ಜಮೀನಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಭೇಟಿ ನೀಡಿ, ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಮಳೆ ಕೊರತೆಯಿಂದ ತೊಗರಿ ಬೆಳೆ ಒಣಗಿ ಸಂಪೂರ್ಣ ಹಾನಿಗೀಡಾಗಿರುವುದನ್ನು ಅವರು ವೀಕ್ಷಿಸಿದರು. ಬಳಿಕ ರೈತರೊಂದಿಗೆ ಸಮಾಲೋಚನೆ ನಡೆಸಿ, ಬೆಳೆ ನಷ್ಟ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರೈತ ದುರ್ಗಣ್ಣ ಅವರು, ಒಂದು ಎಕರೆ ತೊಗರಿ ಬೆಳೆಯಲು ಈವರೆಗೆ ಸುಮಾರು ₹15 ಸಾವಿರ ವೆಚ್ಚವಾಗಿದೆ. ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿದ್ದರೆ ಪ್ರತಿ ಎಕರೆಗೆ 5ರಿಂದ 6 ಕ್ವಿಂಟಲ್‌ವರೆಗೆ ತೊಗರಿ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ಒಣಗಿ ಸಂಪೂರ್ಣ ಹಾನಿಗೀಡಾಗಿದೆ. ಯಾವುದೇ ಇಳುವರಿ ಬಾರದ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಭಾರಿ ನಷ್ಟವಾಗಿದೆ. ಆದ್ದರಿಂದ ಸರ್ಕಾರ ರೈತರ ಬೆಳೆ ನಷ್ಟವನ್ನು ಪರಿಗಣಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.





















