ಒಂದೇ ಸರ್ವೆ ನಂಬರ್ನಲ್ಲಿ 4 ಎಕರೆ ಒತ್ತುವರಿ ತೆರವು: ಪ್ರಭಾವಿ ವ್ಯಕ್ತಿಯ ಕಾಂಪೌಂಡ್ ವಾಲ್ ನೆಲಸಮ – ಟಾಸ್ಕ್ಫೋರ್ಸ್ನಿಂದ 150 ಎಕರೆ ಜಮೀನು ವಶಕ್ಕೆ
ಬಳ್ಳಾರಿ: ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದ್ದು, ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರಗಳ ಘರ್ಜನೆಯೊಂದಿಗೆ ಕಾರ್ಯಾಚರಣೆ ನಡೆಸಿ, ಪ್ರಭಾವಿ ವ್ಯಕ್ತಿಗೆ ಸೇರಿದ ಕಾಂಪೌಂಡ್ ವಾಲ್ ತೆರವುಗೊಳಿಸಿದೆ. ಸಾರ್ವಜನಿಕ ರಸ್ತೆ ಒತ್ತುವರಿ ಹಾಗೂ ಸರ್ಕಾರಿ ಜಮೀನು ಅತಿಕ್ರಮಣ ಆರೋಪದ ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯ ಸರ್ವೆ ನಂಬರ್ 607/* 1ಎನಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಸರ್ವೆ ನಂಬರ್ 607/* 1ಎ ವ್ಯಾಪ್ತಿಯಲ್ಲಿ ಸುಮಾರು 1 ಎಕರೆ 23 ಸೆಂಟ್ಸ್ ಜಮೀನನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿತ್ತು. ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡಿರುವ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಂಡು ಕಾಂಪೌಂಡ್ ವಾಲ್ ಕೆಡವುವ ಮೂಲಕ ಒತ್ತುವರಿ ತೆರವುಗೊಳಿಸಿದೆ.
ಇದೇ ಸರ್ವೆ ನಂಬರ್ನಲ್ಲಿ 14 ವರ್ಷಗಳ ಹಿಂದೆ ಹಿಂದುಳಿದ ಹಾಗೂ ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣಕ್ಕಾಗಿ ಆರೋಗ್ಯ ನಿಕೇತನ ಟ್ರಸ್ಟ್ಗೆ 2 ಎಕರೆ 77 ಸೆಂಟ್ಸ್ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಸರ್ಕಾರದ ನಿಯಮಗಳ ಪ್ರಕಾರ ಮಂಜೂರಾದ ಜಮೀನನ್ನು ಎರಡು ವರ್ಷದೊಳಗೆ ಉದ್ದೇಶಿತ ಕಾರ್ಯಕ್ಕೆ ಬಳಸಬೇಕಿತ್ತು. ನಿಗದಿತ ಅವಧಿಯಲ್ಲಿ ಜಮೀನು ಬಳಕೆಯಾಗದ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಂಜೂರಾತಿಯನ್ನು ರದ್ದುಪಡಿಸಿ ಜಮೀನನ್ನು ಸರ್ಕಾರಕ್ಕೆ ಹಿಂಪಡೆಯಲಾಗಿದೆ.
ಒಟ್ಟಾರೆ ಇದೇ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಆಸ್ತಿಗಳ ರಕ್ಷಣೆ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಆದ್ಯತೆ ನೀಡಿದೆ.
ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಲು ಟಾಸ್ಕ್ಫೋರ್ಸ್ ರಚನೆಯಾದ ಬಳಿಕ ಇದುವರೆಗೆ ಸರಿಸುಮಾರು 150 ಎಕರೆ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ತಿಳಿಸಿದ್ದಾರೆ.
- ಬೆಳ್ಳಂಬೆಳಗ್ಗೆ JCB ಘರ್ಜನೆ: ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಜಿಲ್ಲಾಡಳಿತದ ಸಮರ
- ವಿಮಾನದ ಶೌಚಾಲಯದಲ್ಲಿ ಸಿಕ್ತು ಹೈಜಾಕ್ ಪತ್ರ: ವಿಮಾನ ತುರ್ತು ಭೂಸ್ಪರ್ಶ
- ಹಾಸನ ಡಿಸಿ ಕಚೇರಿಯಲ್ಲಿ ಲಂಚದ ವ್ಯವಹಾರ? ಸರ್ಕಾರದ ವಿರುದ್ಧ ಎಚ್ಡಿಕೆ ಗಂಭೀರ ಆರೋಪ
- ಫಲಾನುಭವಿಗಳಿಗೆ ಆಟೋರಿಕ್ಷಾ ವಿತರಿಸಿದ ಸಚಿವ ಪ್ರಲ್ಹಾದ ಜೋಶಿ
- ʻಹೌದು, ನಾವು ಬಲಿತ ದಲಿತರು’ – ಬೆಂಗಳೂರಿನಲ್ಲಿ ಪೋಸ್ಟರ್ ವಾರ್






















