ನಾಪತ್ತೆಯಾಗಿದ್ದ ಹನುಮಂತಪ್ಪ ಕೊಲೆಯಾಗಿರುವ ಶಂಕೆ: ಮೃತದೇಹ ಸುಟ್ಟು ನದಿಗೆ ಎಸೆದ ಆರೋಪ – ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಬಂಧನ
ಬಳ್ಳಾರಿ: ಪಟ್ಟಣದ ವ್ಯಕ್ತಿಯೊಬ್ಬರ ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಹಣಕಾಸಿನ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಸುಟ್ಟು ಮೂಳೆ ಹಾಗೂ ಬೂದಿಯನ್ನು ತುಂಗಭದ್ರಾ ನದಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪಟ್ಟಣದ 13ನೇ ವಾರ್ಡಿನ ನಿವಾಸಿ ಎಸ್. ಹನುಮಂತಪ್ಪ (37) ಕೊಲೆಯಾದವರು. ಅ.27ರಂದು ಪತಿ ಕಾಣೆಯಾಗಿದ್ದಾರೆ ಎಂದು ಪತ್ನಿ ಎಸ್. ಲಕ್ಷ್ಮಿ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಹನುಮಂತಪ್ಪ ಅವರ ನಾಪತ್ತೆಯ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಇದೇ ಕಾರಣಕ್ಕೆ ಹನುಮಂತಪ್ಪ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಟ್ಟು, ಮೂಳೆ ಹಾಗೂ ಬೂದಿಯನ್ನು ತುಂಗಭದ್ರಾ ನದಿಗೆ ಎಸೆದಿರುವ ಆರೋಪವೂ ಕೇಳಿಬಂದಿದೆ. ಮೃತದೇಹದ ಪತ್ತೆಗಾಗಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೆಕ್ಕಲಕೋಟೆ ಪಟ್ಟಣದ 1ನೇ ವಾರ್ಡಿನ ನಿವಾಸಿಗಳಾದ ಉಪೇಂದ್ರ ಅಲಿಯಾಸ್ ಹುಚ್ಚಪ್ಪ (27), ಶಶಿಕುಮಾರ ಗೊರವ (30), ಮಲ್ಲಿಕಾರ್ಜುನ (22) ಹಾಗೂ ಗಂಗಾಧರ (22) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶವ ಪತ್ತೆಗೆ ಕುಟುಂಬಸ್ಥರ ಧರಣಿ : ಪತಿಯ ಮೃತದೇಹವನ್ನು ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿ ಪತ್ನಿ ಎಸ್. ಲಕ್ಷ್ಮಿ ಹಾಗೂ ಮಕ್ಕಳು ಭಾನುವಾರ ರಾತ್ರಿ ತೆಕ್ಕಲಕೋಟೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಪತಿಯ ಮೃತದೇಹವನ್ನಾದರೂ ಹುಡುಕಿಕೊಡಿ ಎಂದು ಕುಟುಂಬಸ್ಥರು ಪೊಲೀಸರನ್ನು ಒತ್ತಾಯಿಸಿದರು.
ಠಾಣೆಗೆ ಎಸ್ಪಿ ಭೇಟಿ : ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ತೆಕ್ಕಲಕೋಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.






















