ವೇಶ್ಯಾವಾಟಿಕೆ ಜಾಲ ಪತ್ತೆ: 11 ಮಂದಿ ಬಂಧನ – ಡಿಕಾಯ್ ಕಾರ್ಯಾಚರಣೆ ಮೂಲಕ ಬಳ್ಳಾರಿ ಮಿಲ್ಲರ್‌ಪೇಟೆಯಲ್ಲಿ ದಂಧೆ ಬಯಲು: ಐವರು ಆರೋಪಿಗಳ ಪತ್ತೆಗೆ ಶೋಧ
ಬಳ್ಳಾರಿ: ನಗರದ ಮಿಲ್ಲರ್‌ಪೇಟೆಯಲ್ಲಿ ಅಪ್ರಾಪ್ತ ಬಾಲಕಿಯರನ್ನೂ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಜಾಲವನ್ನು ಬಳ್ಳಾರಿ ಪೊಲೀಸರು ಡಿಕಾಯ್ ಕಾರ್ಯಾಚರಣೆ ಮೂಲಕ ಪತ್ತೆಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ಐವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಬಳ್ಳಾರಿ ನಗರ ಉಪವಿಭಾಗದ ಪೊಲೀಸರು ನವೆಂಬರ್ 10ರಿಂದ ಕಾರ್ಯಾಚರಣೆ ನಡೆಸಿ, ಹಣ ಗಳಿಸುವ ಉದ್ದೇಶದಿಂದ ಅಪ್ರಾಪ್ತ ಬಾಲಕಿಯರ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಮತ್ತು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ 243/2026ನೇ ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ, ಐಟಿಪಿ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಗೋವಿಂದಮ್ಮ, ನಾಗರಾಜ, ರಾಜು, ಎರ್ರಿಸ್ವಾಮಿ, ಈರಮ್ಮ, ಮಹಮ್ಮದ್, ವಿನೂತಬಾಯಿ, ರಾಬಿಯಾ, ಗೌಸಿಯಾ, ಗಂಗಾಧರ, ಅನ್ವರ್, ಉಸ್ಮಾನ್, ರಾಹುಲ್, ಅಲಿಬೈ, ಅಶ್ರಫ್ ಮತ್ತು ಬಾಬುರಾವ್ ಸೇರಿದಂತೆ 16 ಮಂದಿ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಉಳಿದ ಐವರು ಆರೋಪಿಗಳ ಪತ್ತೆಗೆ ಕ್ರಮ ಮುಂದುವರಿದಿದೆ.
ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವ ಮೂಲಕ ಗಳಿಸಿದ ಹಣವನ್ನು ಮೂರು ಭಾಗಗಳಾಗಿ ಹಂಚಿಕೊಳ್ಳುತ್ತಿದ್ದ ಆರೋಪಿಗಳ ಕೃತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತರಿಗೆ ಪೇಪರ್ ಕೋಡ್ ಹಾಗೂ ದಂಧೆ ನಡೆಸುತ್ತಿದ್ದವರಿಗೆ ಡಿಆರ್ ಕೋಡ್ ನೀಡುವ ಮೂಲಕ ರಹಸ್ಯವಾಗಿ ವ್ಯವಹಾರ ನಡೆಸುತ್ತಿದ್ದರೆಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮಹಿಳೆಯರು ಹಾಗೂ ಮಕ್ಕಳ ಫೋಟೋ, ವಿಡಿಯೋಗಳನ್ನು ತೆಗೆದು ಯಾರಿಗೆ ಕಳುಹಿಸುತ್ತಿದ್ದರು ಮತ್ತು ಅವುಗಳನ್ನು ಹೇಗೆ ಬಳಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
45 ದಿನಗಳ ಕಾರ್ಯಾಚರಣೆ – ಮಹಿಳಾ ಸಿಬ್ಬಂದಿಯಿಂದ ಆರೋಪಿಗಳ ಪತ್ತೆ : ಈ ಪ್ರಕರಣದಲ್ಲಿ ಅಕ್ಕಪಡೆ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಸುಮಾರು 45 ದಿನಗಳ ಕಾಲ ನಿರಂತರವಾಗಿ ಆರೋಪಿಗಳ ಸಂಪರ್ಕ ಸಾಧಿಸಿ ಡಿಕಾಯ್ ಕಾರ್ಯಾಚರಣೆ ಮೂಲಕ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಲಲಿತಮ್ಮ, ಶಾಹೀದಾ, ಅನಿತಾ ಹಾಗೂ ರುಕಿಯಾ ಭಾನು ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ.
- ಬರ ಪರಿಹಾರದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ: ಬೊಮ್ಮಾಯಿ ಆರೋಪ
- ಬಳ್ಳಾರಿ: ಅಪ್ರಾಪ್ತ ಬಾಲಕಿಯರ ಶೋಷಣೆ ಜಾಲ ಪತ್ತೆ – 11 ಮಂದಿ ಬಂಧನ
- ಮೆಟ್ರೋ ಅನುದಾನದ ಧ್ವನಿ ಅಡಗಿಸಲು ಯತ್ನ: ಸಚಿವ ಕೃಷ್ಣ ಬೈರೇಗೌಡ ಭಾಷಣಕ್ಕೆ ಕೊಕ್! – ‘ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನವೇ’
- ‘ಹಲ್ಕಾ ಡಾನ್’ : ಮಂಗಳೂರಿನ ಡಾನ್ ಕಥೆಗೆ ಟೀಸರ್ ಕಿಕ್
- ಗಾಂಧೀಜಿಯ ಐತಿಹಾಸಿಕ ರೇಡಿಯೋ ಭಾಷಣಕ್ಕೆ 79 ವರ್ಷ: ಇಂದು ಸಾರ್ವಜನಿಕ ಸೇವಾ ಪ್ರಸಾರ ದಿನ






















