SK Home Ad
Home ನಮ್ಮ ಜಿಲ್ಲೆ ಹಾವೇರಿ ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಬರ ನಿರ್ವಹಿಸಲು ಸಾಧ್ಯವಿಲ್ಲ

ಸಿಎಂ ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಬರ ನಿರ್ವಹಿಸಲು ಸಾಧ್ಯವಿಲ್ಲ

0
17

ಹಾವೇರಿ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಬರವನ್ನು ನಿರ್ಲಕ್ಷ್ಯ ಮಾಡಿದೆ. ಮುಖ್ಯಮಂತ್ರಿಗಳು ಕೇವಲ ನಾಮಕಾವಾಸ್ತೆಗೆ ಒಂದೆರಡು ಕಡೆಗಳಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಬರವನ್ನ ನಿರ್ವಹಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪೂರ ಪಟ್ಟಣದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ​ರಾಜ್ಯದಲ್ಲಿ ಕಳೆದ ಎರಡು ದಶಕಗಳಲ್ಲಿ ಅತ್ಯಂತ ತೀವ್ರವಾದ ಬರಗಾಲ ಆವರಿಸಿದ್ದು, ಹಸಿಬರ ಹಾಗೂ ಒಣಬರ ಎರಡೂ ಪರಿಸ್ಥಿತಿಗಳು ಎದುರಾಗಿವೆ. ಮುಂಗಾರು ಮಳೆಯನ್ನು ನಂಬಿ ಬಿತ್ತಿದ ಬೀಜ, ಗೊಬ್ಬರ ಎಲ್ಲವೂ ನಷ್ಟವಾಗಿದ್ದು, ಧನಕರುಗಳಿಗೆ ಮೇವಿನ ತೀವ್ರ ಕೊರತೆಯುಂಟಾಗಿದೆ. ಅಕ್ಟೋಬರ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲೇ ಈ ಪರಿಸ್ಥಿತಿಯಿದ್ದರೆ, ಜನವರಿ-ಫೆಬ್ರವರಿಯಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದರು.

​ಸರ್ಕಾರದ ನಿರ್ಲಕ್ಷ್ಯ: ಇಂತಹ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಬರವನ್ನ ನಿರ್ಲಕ್ಷ್ಯ ಮಾಡಿದೆ. ಮುಖ್ಯಮಂತ್ರಿಗಳು ಕೇವಲ ನಾಮಕಾವಾಸ್ತೆಗೆ ಒಂದೆರಡು ಕಡೆಗಳಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಬರವನ್ನ ನಿರ್ವಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಡೆಪ್ಯೂಟಿ ಕಮಿಷನರ್ ಮತ್ತು ಅಸಿಸ್ಟೆಂಟ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಲ್ಲೇ ಆದೇಶಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

​ಪರಿಹಾರ ಮತ್ತು ಬೇಡಿಕೆಗಳು: ತುರ್ತು ಕಾಮಗಾರಿಗಳಿಗಾಗಿ ಮತ್ತು ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ 10 ಕೋಟಿ ರೂ. ಬಿಡುಗಡೆ ಮಾಡಬೇಕು. ಅಲ್ಲದೆ ಮೇವು ಬೆಳೆಸಲು ಮತ್ತು ದೂರದಿಂದ ಸಾಗಾಣಿಕೆ ಮಾಡಲು ಪ್ರತಿ ತಾಲೂಕಿಗೆ 10 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

​ಜೀ ರಾಮ್‌ಜಿ ಬಳಕೆ: ಜೀ ರಾಮ್‌ಜಿಯಂತಹ ತಂತ್ರಜ್ಞಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ದಿನಕ್ಕೆ 150 ಜನರಿಗೆ ಕೂಲಿ ನೀಡಬಹುದು ಹಾಗೂ ಉತ್ತಮ ಕಾಮಗಾರಿಗಳನ್ನು ಮಾಡಬಹುದು, ಆದರೆ ಸರ್ಕಾರದ ಬಳಿ ಈ ಬಗ್ಗೆ ಯಾವುದೇ ಪರಿಕಲ್ಪನೆ ಇಲ್ಲ. ಈ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಕೇವಲ ನಾಟಕೀಯ ಆಡಳಿತವನ್ನು ಮಾಡದೆ, ಕೂಡಲೇ ಶಾಶ್ವತ ಮತ್ತು ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

​ಆಸ್ಪತ್ರೆಗಳ ದುಸ್ಥಿತಿ: ಶಿಗ್ಗಾವಿ ತಾಲೂಕಿಗೆ ದೊಡ್ಡ ಆಸ್ಪತ್ರೆಯನ್ನು ತಂದುಕೊಟ್ಟರೂ ಸಿಬ್ಬಂದಿ ಕೊರತೆಯಿಂದ ಜನರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ನೂರು ಬೆಡ್‌ಗಳ ಆಸ್ಪತ್ರೆಗೆ ತಕ್ಕಂತೆ ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.