SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ನವೆಂಬರ್ 10ಕ್ಕೆ ಬಿ. ನಾಗೇಂದ್ರ ಮತ್ತೆ ಸಚಿವರಾಗುವ ವಿಶ್ವಾಸ

ನವೆಂಬರ್ 10ಕ್ಕೆ ಬಿ. ನಾಗೇಂದ್ರ ಮತ್ತೆ ಸಚಿವರಾಗುವ ವಿಶ್ವಾಸ

0
61

ಬಳ್ಳಾರಿ: ಮಾಜಿ ಸಚಿವ ಬಿ. ನಾಗೇಂದ್ರ ಅವರು ನವೆಂಬರ್ 10ರಂದು ಮತ್ತೆ ಸಚಿವರಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಧ್ವಜಾರೋಹಣ ನೆರವೇರಿಸಬೇಕೆಂಬ ತಮ್ಮ ಬಹುದಿನದ ಕನಸು ನನಸಾಗಿದೆ. ಈ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರ ಯಾವುದೇ ತಪ್ಪಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಅವರೇ ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಿಐಡಿ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ವರದಿ ಬಂದ ಬಳಿಕ ನಾಗೇಂದ್ರ ಅವರು ಮತ್ತೆ ಸಚಿವರಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ದೆಹಲಿ ಭೇಟಿ ರಾಜಕೀಯ ಉದ್ದೇಶಕ್ಕಲ್ಲ: ಸ್ಟಿಂಗ್ ಆಪರೇಷನ್ ಪ್ರಕರಣದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ಟಿಂಗ್ ಆಪರೇಷನ್ ಕುರಿತು ದೂರು ನೀಡಲು ಅವರು ದೆಹಲಿಗೆ ಹೋಗುತ್ತಿಲ್ಲ. ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಆಹ್ವಾನದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದನ್ನು ಸಹಿಸದ ಕೆಲವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಫಲಿಸುವುದಿಲ್ಲ. ಇಬ್ಬರು ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ರಾಕೇಶ್ ಶೆಟ್ಟಿ ಅವರೇ ಹೇಳಿಕೊಂಡಿದ್ದು, ಅದರಲ್ಲಿ ಯಾವುದೇ ಸತ್ಯಾಂಶ ಸಿಕ್ಕಿಲ್ಲ ಎಂದೂ ತಿಳಿಸಿದ್ದಾರೆ. ವಿಷಯವಿದೆ ಎಂಬ ಕಾರಣಕ್ಕೆ ಸ್ಟಿಂಗ್ ಮಾಡಿದ್ದೆ, ಆದರೆ ಯಾವುದೇ ಮಾಹಿತಿ ದೊರೆಯದ ಕಾರಣ ಸಂಬಂಧಪಟ್ಟವರನ್ನು ಕೈಬಿಟ್ಟಿದ್ದಾಗಿ ಅವರು ಹೇಳಿದ್ದಾರೆ. ಪಕ್ಷದ ತೀರ್ಮಾನದಂತೆ ಕೃಪಾ ಆಳ್ವಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಹಾಲಿನ ದರ ಏರಿಕೆ ಬಗ್ಗೆ ಸಿಎಂ ಗಮನಕ್ಕೆ: ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ದರ ಹೆಚ್ಚಳ ಮಾಡಿರುವ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಜಮೀರ್ ಅಹ್ಮದ್ ಹೇಳಿದರು. ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಲಾಗಿದ್ದು, ಸರ್ಕಾರದ ವತಿಯಿಂದ ಕೇವಲ ₹8 ಹೆಚ್ಚಿಸಲಾಗಿದೆ. ದರ ಏರಿಕೆಯಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ ಎಂದು ಸಮರ್ಥಿಸಿಕೊಂಡರು.

ಕಳೆದ ಹತ್ತು ವರ್ಷಗಳಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರಲಿಲ್ಲ. ಡೀಸೆಲ್ ಬೆಲೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.