ಬಳ್ಳಾರಿ: ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಸೋದರಳಿಯ ಸುರೇಶ್ ಬಾಬು ಅವರಿಗೆ ಬಿಹಾರದ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವ ಉದ್ದೇಶದಿಂದ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದೆ.
ಬಿಹಾರದ ಈಸ್ಟ್ ಚಂಪಾರಣ್ ಜಿಲ್ಲೆಯ ನ್ಯಾಯಾಲಯವು ಸುರೇಶ್ ಬಾಬು ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎನ್ನಲಾಗಿದೆ. ವಾರಂಟ್ ಜಾರಿಗೊಳಿಸಿ ಅವರನ್ನು ಬಂಧಿಸಲು ಬಳ್ಳಾರಿಗೆ ಬಂದಿರುವ ಬಿಹಾರ ಪೊಲೀಸರ ತಂಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಎಸ್ಪಿ ಅವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಬಿಹಾರ ನ್ಯಾಯಾಲಯದ ವಾರಂಟ್ ಜಾರಿಗೊಳಿಸುವ ಸಂಬಂಧ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆಯಿದೆ.
ಆದರೆ, ಸುರೇಶ್ ಬಾಬು ವಿರುದ್ಧ ಯಾವ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿದೆ, ಪ್ರಕರಣದ ಸ್ವರೂಪ ಹಾಗೂ ಆರೋಪಗಳೇನು ಎಂಬ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಅವರನ್ನು ಬಂಧಿಸಲಾಗಿದೆಯೇ ಎಂಬುದರ ಬಗ್ಗೆಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮಾಜಿ ಶಾಸಕ ಸುರೇಶ್ ಬಾಬು ಬಂಧನಕ್ಕೆ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿರುವ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಾರಂಟ್ ಹಿಂದಿನ ಪ್ರಕರಣದ ವಿವರ ಹಾಗೂ ಮುಂದಿನ ಪೊಲೀಸ್ ಕ್ರಮದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.






















